ಬೆಂಗಳೂರು: ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಮಂಗಳವಾರ ಸಿಲ್ಕ್ ಬೋರ್ಡ್ ನಿಂದ ಮಾರತ್ ಹಳ್ಳಿಯವರೆಗೆ ಹೊಸ ಎಲೆಕ್ಟ್ರಿಕ್ ಬಸ್ ಗಳಲ್ಲಿ ಪ್ರಯಾಣಿಕರೊಂದಿಗೆ ಸಂಚರಿಸಿ ಅವರಿಂದ ಅಭಿಪ್ರಾಯಗಳನ್ನು ಸಂಗ್ರಹಿಸಿದರು.
ಬಿಎಂಟಿಸಿ ಅಧಿಕಾರಿಗಳೊಂದಿಗೆ ಎಲೆಕ್ಟ್ರಿಕ್ ಬಸ್ ಗಳ ಪರಿಶೀಲನೆ ನಡೆಸಿ ಮಾತನಾಡಿದ ತೇಜಸ್ವಿ ಸೂರ್ಯ, ನಗರದ ವಾಹನ ದಟ್ಟಣೆ ತಗ್ಗಿಸಲು ಸಾರ್ವಜನಿಕ ಸಾರಿಗೆ ಅತ್ಯಂತ ಸುಗಮ ಸರಳ ಮಾರ್ಗವಾಗಿದೆ. ಸೀಟ್ ಗಳ ಲಭ್ಯತೆ ಹಾಗೂ ಸೂಕ್ತ ಸಮಯ ಪರಿಪಾಲನೆಯ ಗ್ಯಾರಂಟಿ ದೊರೆತರೆ ಇನ್ನೂ ಹೆಚ್ಚಿನ ಪರಿಣಾಮಕಾರಿ ಪ್ರಭಾವ ಬೀರಬಲ್ಲದು, 1.2 ಕೋಟಿ ಜನಸಂಖ್ಯೆಗೆ ಬಿಎಂಟಿಸಿಯು ಪ್ರಸ್ತುತ 6,500 ಬಸ್ ಗಳನ್ನು ಮಾತ್ರ ಹೊಂದಿದ್ದು,ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಎಲೆಕ್ಟ್ರಿಕ್ ಬಸ್ ಗಳನ್ನು ನಗರದ ಜನಸಂಖ್ಯೆಗೆ ತಕ್ಕಂತೆ ಪೂರೈಸಲು ಸರ್ಕಾರದ ವತಿಯಿಂದ ಕ್ರಮ ಕೈಗೊಳ್ಳಲಾಗುವುದು ಎಂದರು.
ನರೇಂದ್ರ ಮೋದಿ ನೇತೃತ್ವದ ಸರ್ಕಾರ ಫೇಮ್ ಯೋಜನೆಯಡಿ ಎಲೆಕ್ಟ್ರಿಕ್ ಬಸ್ ಗಳ ಪೂರೈಕೆ, ಬಳಕೆಗೆ ವ್ಯಾಪಕ ಉತ್ತೇಜನ ನೀಡುತ್ತಿದ್ದು, ಕೇವಲ 12 ತಿಂಗಳ ಅವಧಿಯಲ್ಲಿ 170ಕ್ಕೂ ಅಧಿಕ ಎಲೆಕ್ಟ್ರಿಕ್ ಬಸ್ ಗಳು ಈಗಾಗಲೇ ಕಾರ್ಯಾಚರಣೆಯಲ್ಲಿವೆ. ಫೇಮ್ -2 ಅನ್ವಯ ಸ್ಮಾರ್ಟ್ ಸಿಟಿ ಯೋಜನೆಯಡಿ 921 ಟಾಟಾ, 300 ಸ್ವಿಚ್ ಮೊಬಿಲಿಟಿ ಇ- ಬಸ್ ಗಳು ಮಂಜೂರಾಗಿದ್ದು, ಬಿಎಂಟಿಸಿ ವಾಹನಗಳ ಸಂಖ್ಯೆ ಹೆಚ್ಚಾಗಲಿದೆ. ಇದರಿಂದ ಸಾರ್ವಜನಿಕ ಬಸ್ ಗಳಲ್ಲಿ ಪ್ರಯಾಣಿಕರ ಸಂಖ್ಯೆ ಕೂಡಾ ಏರಿಕೆಯಾಗಲಿದೆ ಎಂದು ವಿವರಿಸಿದರು.
Advertisement