ಬೆಂಗಳೂರು: ಸಹೋದರನ ಸಂಸಾರದಲ್ಲಿ ಕಲಹ; ಪೊಲೀಸರಿಗೆ ಹೆದರಿ, ಮಗನಿಗೆ ನೇಣು ಬಿಗಿದು ಗೃಹಿಣಿ ಆತ್ಮಹತ್ಯೆ

ಮಗನಿಗೆ ನೇಣು ಬಿಗಿದು ತಾಯಿಯೂ ಆತ್ಮಹತ್ಯೆಗೆ ಶರಣಾದ ಹೃದಯವಿದ್ರಾವಕ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹೊಸ ಗುಡ್ಡದಹಳ್ಳಿ ನಿವಾಸಿ ಲಕ್ಷ್ಮಮ್ಮ (45) ಹಾಗೂ ಆಕೆಯ ಮಗ ಮದನ್​ ಮೃತ ದುರ್ದೈವಿಗಳಾಗಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಮಗನಿಗೆ ನೇಣು ಬಿಗಿದು ತಾಯಿಯೂ ಆತ್ಮಹತ್ಯೆಗೆ ಶರಣಾದ ಹೃದಯವಿದ್ರಾವಕ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹೊಸ ಗುಡ್ಡದಹಳ್ಳಿ ನಿವಾಸಿ ಲಕ್ಷ್ಮಮ್ಮ (45) ಹಾಗೂ ಆಕೆಯ ಮಗ ಮದನ್​ ಮೃತ ದುರ್ದೈವಿಗಳಾಗಿದ್ದಾರೆ.

ಲಕ್ಷ್ಮಮ್ಮ ಅವರ ತಮ್ಮ ಸಿದ್ದೇಗೌಡ ಮೂರ್ನಾಲ್ಕು ವರ್ಷಗಳ ಹಿಂದೆ ರಂಜಿತಾ ಎಂಬ ಯುವತಿಯನ್ನು ವಿವಾಹವಾಗಿದ್ದರು. ಶಿವಲಿಂಗೇಗೌಡ ದಂಪತಿಯೇ ಮುಂದೆ ನಿಂತು ಮದುವೆ ಮಾಡಿಸಿದ್ದರು. ಆದರೆ, ಸಿದ್ದೇಗೌಡ ಮತ್ತು ರಂಜಿತಾ ನಡುವೆ ಆಗಾಗ್ಗೆ ಜಗಳವಾಗುತ್ತಿತ್ತು. ಕೌಟುಂಬಿಕ ಕಲಹದ ಕಾರಣಕ್ಕೆ ಪತಿಯ ಮನೆ ತೊರೆದಿದ್ದ ರಂಜಿತಾ, ತವರು ಮನೆಗೆ ಹೋಗಿ ನೆಲೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಲಕ್ಷ್ಮಮ್ಮ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ನಾದಿನಿ ರಂಜಿತಾಳೇ ತನ್ನ ಸಾವಿಗೆ ಕಾರಣ ಎಂದು ಮೊಬೈಲ್‌ನಲ್ಲಿ ವಿಡಿಯೋ ಮಾಡಿದ್ದಾರೆ. ತವರು ಮನೆಗೆ ಹೋದ ರಂಜಿತಾ ತನ್ನ ಪೋಷಕರ ಜತೆ ಸೇರಿ ಸಹೋದರ ಹಾಗೂ ತಮ್ಮ ಕುಟುಂಬದ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿದ್ದಾಳೆ. ಪೊಲೀಸರು ಪದೇ ಪದೇ ವಿಚಾರಣೆಗೆ ಕರೆಯುತ್ತಿದ್ದರು. ಪೊಲೀಸ್‌ ಠಾಣೆ ಮತ್ತು ನ್ಯಾಯಾಲಯಕ್ಕೆ ಹೋದರೆ ಮಾನ ಹೋಗುತ್ತದೆ ಎಂದು ಬೇಸರಗೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಲಕ್ಷ್ಮಮ್ಮ ವಿಡಿಯೋದಲ್ಲಿ ಹೇಳಿದ್ದಾರೆ.

ಮದುವೆ ಸಂದರ್ಭದಲ್ಲಿ ರಂಜಿತಾಗೆ ಚಿನ್ನದ ಸರ ಮಾಡಿಸಿಕೊಟ್ಟಿದ್ದೆವು. ಜತೆಗೆ 50 ಸಾವಿರ ರೂ. ಕೊಟ್ಟಿದ್ದೆವು. ಆದರೆ, ಆಕೆ ನಮ್ಮ ಕುಟುಂಬದ ವಿರುದ್ಧ ಸುಳ್ಳು ಆರೋಪ ಮಾಡಿದ್ದಾಳೆ. ತಮ್ಮನಿಗೋಸ್ಕರ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಮಾನಕ್ಕೆ ಅಂಜಿ ನೇಣು ಹಾಕಿಕೊಳ್ಳುತ್ತಿದ್ದೇನೆ'' ಎಂದು ಲಕ್ಷ್ಮಮ್ಮ ಅಲವತ್ತುಕೊಂಡಿದ್ದಾರೆ.

ಮದುವೆಯ ನಂತರ ಗೌಡ ಮತ್ತು ರಂಜಿತಾ ಇಬ್ಬರೂ ಆಗಾಗ್ಗೆ ಜಗಳವಾಡುತ್ತಿದ್ದರು. ರಂಜಿತಾ ಅವರು ಮಂಡ್ಯದಲ್ಲಿ ಪತಿ ಹಾಗೂ ಲಕ್ಷ್ಮಮ್ಮ ಸೇರಿದಂತೆ ಕುಟುಂಬದವರ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿದ್ದರು. ಒಂಬತ್ತು ಜನರ ವಿರುದ್ಧ ದೂರು ದಾಖಲಾಗಿದೆ. ಆರೋಪಿಗಳಲ್ಲಿ ಲಕ್ಷ್ಮಮ್ಮ ಅವರ ಪತಿ ಶಿವಲಿಂಗೇಗೌಡ ಕೂಡ ಒಬ್ಬರು. ದೂರಿನ ನಂತರ ಲಕ್ಷ್ಮಮ್ಮ ಅವರು ಕಾನೂನು ಸಮಸ್ಯೆಗಳಿಂದ ಮನನೊಂದಿದ್ದರು. ಹೀಗಾಗಿ ತಮ್ಮ ಜೀವನವನ್ನು ಅಂತ್ಯಗೊಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತದೇಹಗಳನ್ನು ವಿಕ್ಟೋರಿಯಾ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಬ್ಯಾಟರಾಯನಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com