ಬೆಂಗಳೂರು: ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (ಪಿಎಂಜೆಎವೈ) ಮತ್ತು ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ (ಎಬಿಡಿಎಂ) ಅಡಿಯಲ್ಲಿನ ಸಾಧನೆಗಾಗಿ ಸೋಮವಾರ ದೆಹಲಿಯಲ್ಲಿ ಆಯೋಜಿಸಲಾಗಿದ್ದ ಆರೋಗ್ಯ ಮಂಥನ 2022 ಸಮಾರಂಭದಲ್ಲಿ ರಾಜ್ಯಕ್ಕೆ ಆರೋಗ್ಯ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.
ಆಯುಷ್ಮಾನ ಭಾರತ ಡಿಜಿಟಲ್ ಮಿಷನ್(ಎಬಿಡಿಎಂ) ಅಡಿಯಲ್ಲಿ ಕರ್ನಾಟಕ ಅತಿ ಹೆಚ್ಚು ವ್ಯಕ್ತಿಗಳ ಆರೋಗ್ಯ ದಾಖಲೆಗಳನ್ನು ಆಯುಷ್ಮಾನ ಭಾರತ ಹೆಲ್ತ್ ಅಕೌಂಟ್ (ಎಬಿಎಚ್ಎ) ಗೆ ನೋಂದಣಿ ಮಾಡಿಸಿದೆ. ಹೀಗಾಗಿ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದಿಂದ ಬೆಂಗಳೂರಿನ ಕೆಸಿ ಜನರಲ್ ಆಸ್ಪತ್ರೆಗೆ ಆಯುಷ್ಮಾನ್ ಉತ್ಕೃಷ್ಟ ಪುರಸ್ಕಾರವನ್ನು ನೀಡಲಾಗಿದೆ.
ಆಂಧ್ರಪ್ರದೇಶದ ನಂತರ, 1,68,254 ಆರೋಗ್ಯ ದಾಖಲೆಗಳನ್ನು ನೋಂದಣಿ ಮಾಡಿರುವ ಕರ್ನಾಟಕ ರಾಜ್ಯವು ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ. ಅಲ್ಲದೆ, ರಾಷ್ಟ್ರೀಯ ಆರೋಗ್ಯ ನೋಂದಣಿಗೆ ಸೇರಿಸಲಾದ ಆರೋಗ್ಯ ಕ್ಷೇತ್ರದ ಸೌಲಭ್ಯಗಳ ಸಂಖ್ಯೆಯಲ್ಲಿ ರಾಜ್ಯವು ಎರಡನೇ ಸ್ಥಾನದಲ್ಲಿದೆ. 23,838 ಸಂಖ್ಯೆಯ ಮೂಲಕ ಉತ್ತರ ಪ್ರದೇಶವು ಮೊದಲನೇ ಸ್ಥಾನದಲ್ಲಿದೆ. ಧಾರವಾಡ ಜಿಲ್ಲಾಸ್ಪತ್ರೆಗೆ ದೇಶದಲ್ಲೇ ಅತ್ಯುತ್ತಮ ಸರ್ಕಾರಿ ಸೌಲಭ್ಯ ನೀಡುವ ಪ್ರಶಸ್ತಿ ಲಭಿಸಿದೆ.
ಆಯುಷ್ಮಾನ ಭಾರತ ಡಿಜಿಟಲ್ ಮಿಷನ್ ಅಡಿಯಲ್ಲಿ ರಾಜ್ಯಕ್ಕೆ ಐದು ಪ್ರಶಸ್ತಿಗಳು ಸಂಧಿರುವುದು ನನಗೆ ಗೌರವ ತಂದಿದೆ. ಭಾರತದಲ್ಲಿ ಅತಿ ಹೆಚ್ಚು ವೈಯಕ್ತಿಕ ಆರೋಗ್ಯ ದಾಖಲೆಯ ನೋಂದಣಿಗಾಗಿ ಕರ್ನಾಟಕವು ಮೊದಲ ಮೂರು ಸ್ಥಾನದಲ್ಲಿದೆ. ಸಾರ್ವಜನಿಕ ಆರೋಗ್ಯ ಸೌಲಭ್ಯಗಳಲ್ಲಿ ಗರಿಷ್ಠ ಪರಿಪೂರ್ಣತೆ ಕಾಯ್ದುಕೊಂಡಿರುವುದಕ್ಕಾಗಿ ರಾಜ್ಯವು ಮೊದಲ ಸ್ಥಾನದಲ್ಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಆಯುಕ್ತ ರಂದೀಪ್ ಡಿ ಟ್ವೀಟ್ ಮಾಡಿದ್ದಾರೆ.
ಕೇಂದ್ರ ಆರೋಗ್ಯ ಸಚಿವ ಡಾ.ಮನ್ಸುಖ್ ಮಾಂಡವಿಯಾ ಮಾತನಾಡಿ, 'ಸಮಾಜದ ಬಡವರ ಆರೋಗ್ಯ ರಕ್ಷಣೆಯ ಗುರಿಯನ್ನು ಹೊಂದಿರುವ ಎಬಿ-ಪಿಎಂಜೆಎವೈ ನಲ್ಲಿ ವಂಚನೆಗೆ ಯಾವುದೇ ಸ್ಥಳಾವಕಾಶವಿಲ್ಲ. ಸಾಧ್ಯವಿರುವ ಎಲ್ಲಾ ಕಡೆಗಳಲ್ಲೂ ಸಣ್ಣ ಪ್ರಮಾಣದ ವಂಚನೆಯನ್ನು ಸಹ ತೆಗೆದುಹಾಕಲು ನಾವು ಲಭ್ಯವಿರುವ ಎಲ್ಲಾ ತಂತ್ರಜ್ಞಾನ ಸಾಧನಗಳನ್ನು ಬಳಸಬೇಕಾಗಿದೆ' ಎಂದು ತಿಳಿಸಿದರು.
Advertisement