ನಮ್ಮ ಸರ್ಕಾರ ಬಂದಮೇಲೆ ರಾಜ್ಯ ಸುಧಾರಣೆಗೊಂಡಿದೆ: ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿದ ಬಸವರಾಜ ಬೊಮ್ಮಾಯಿ

ನಮ್ಮ ಸರ್ಕಾರ ಬಂದಮೇಲೆ ರಾಜ್ಯ ಸುಧಾರಣೆಗೊಂಡಿದೆ. ಕೃಷಿಯಲ್ಲಿ ಅತಿಹೆಚ್ಚು ಉತ್ಪಾದನೆಯಾಗುತ್ತಿದೆ. ಕೈಗಾರಿಕೆಯಲ್ಲಿ ಕರ್ನಾಟಕ ಮುಂದಿದೆ. ರಾಜ್ಯಕ್ಕೆ ಹೆಚ್ಚಿನ ಎಫ್‌ಡಿಐ ಬರುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ

ಬೆಂಗಳೂರು: ನಮ್ಮ ಸರ್ಕಾರ ಬಂದಮೇಲೆ ರಾಜ್ಯ ಸುಧಾರಣೆಗೊಂಡಿದೆ. ಕೃಷಿಯಲ್ಲಿ ಅತಿಹೆಚ್ಚು ಉತ್ಪಾದನೆಯಾಗುತ್ತಿದೆ. ಕೈಗಾರಿಕೆಯಲ್ಲಿ ಕರ್ನಾಟಕ ಮುಂದಿದೆ. ರಾಜ್ಯಕ್ಕೆ ಹೆಚ್ಚಿನ ಎಫ್‌ಡಿಐ ಬರುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಮಾಣೆಕ್ ಶಾ ಪರೇಡ್ ಮೈದಾನದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ಹೋರಾಟದಲ್ಲಿ ಹಲವಾರು ಜನರು ಪಾಲ್ಗೊಂಡಿದ್ದರು. ಬದ್ಧತೆಯಿಂದ ಹೋರಾಡಿದರೆ ಅತಿಶಕ್ತ ಬ್ರಿಟಿಷರನ್ನು ಮಣಿಸಬಹುದು ಎಂಬುದನ್ನು ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಮುಂತಾದವರು ಸಾಧಿಸಿ ತೋರಿಸಿದರು. ಈ ಹೋರಾಟದಲ್ಲಿ ಅನಾಮಧೇಯರಾಗಿಯೇ ಉಳಿದವರಿಗೆ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಸಮರ್ಪಿಸುತ್ತಿದ್ದೇನೆ ಎಂದು ಹೇಳಿದರು.

ದೇಶದ ಮೊದಲ ಪ್ರಧಾನಿ ಜವಾಹರ್​ಲಾಲ್ ನೆಹರು ಸೇರಿದಂತೆ ಹಲವರ ಕೊಡುಗೆಗಳನ್ನು ಸ್ಮರಿಸಿದರು. ಜೊತೆಗೆ ಪ್ರಧಾನಿ ಮೋದಿ ಅವರ ನಿರ್ಧಾರಗಳನ್ನು ಶ್ಲಾಘಿಸಿದರು. ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಗಡಿಗೆ ಭೇಟಿ ನೀಡಿದ್ದ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಕೊಂಡಾಡಿದರು. ದೇಶದ ಸ್ವಾವಲಂಬನೆಗೆ ರೈತರ ಕೊಡುಗೆ ದೊಡ್ಡದು ಎಂದರು.

ಕರ್ನಾಟಕ ದೇಶದಲ್ಲಿಯೇ ವಿಶಿಷ್ಟವಾದ ರಾಜ್ಯವಾಗಿದೆ. ಎಲ್ಲ ತರಹದ ಸಂಪನ್ಮೂಲಗಳು ಹೇರಳವಾಗಿವೆ. ಹಲವಾರು ಕ್ಷೇತ್ರಗಳಲ್ಲಿ ಕರ್ನಾಟಕ ರಾಜ್ಯ ನಂಬರ್ 1 ಆಗಿದೆ. ದೇಶದ ಜಿ.ಡಿ.ಪಿ ಯಲ್ಲಿ ಶೇ.9ರಷ್ಟು ಕೊಡುಗೆ ನಮ್ಮದಾಗಿದೆ. ತಂತ್ರಜ್ಞಾನದಲ್ಲಿ ಕರ್ನಾಟಕ ಮುಂದಿದೆ. ರಾಜ್ಯದಿಂದ ಅತಿಹೆಚ್ಚು ಆದಾಯ ಸೃಷ್ಟಿಯಾಗುತ್ತಿದೆ. ನಾವು ಸ್ತ್ರೀಶಕ್ತಿ ಸಂಘ ಮತ್ತು ಶಾಲೆಗಳನ್ನು ಅಭಿವೃದ್ಧಿ ಮಾಡಿದ್ದೇವೆ. ಗ್ರಾಮ ಪಂಚಾಯಿತಿಗೆ ಸಾಕಷ್ಟು ಹಣ ಬಿಡುಗಡೆ ಮಾಡಿದ್ದೇವೆ. ದೀನ ದಲಿತರಿಗೆ ವಿಶೇಷ ಆರ್ಥಿಕ ನೆರವು ನೀಡಿದ್ದೇವೆ. ದಲಿತರು, ಬಡವರು ವಂಚಿತರು ತಮ್ಮ ತಮ್ಮ ಜೀವನ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಲು ಆರ್ಥಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳಬೇಕು ಎಂದರು.

30 ಲಕ್ಷ ರೈತರಿಗೆ ಸಾಲ ಒದಗಿಸಿದ್ದೇವೆ. 3 ಸಾವಿರ ರಾಜ್ಯ ಹೆದ್ದಾರಿ ಅಭಿವೃದ್ಧಿಯಾಗಿದೆ. ರಾಜ್ಯದಲ್ಲಿ ಮೂಲಸೌಕರ್ಯದ ಅಭಿವೃದ್ಧಿಯಾಗಿದೆ. ಪ್ರತಿಯೊಬ್ಬ ಹಿರಿಯ ನಾಗರಿಕರಿಗೆ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಎಲ್ಲರ ಆರೋಗ್ಯ ತಪಾಸಣೆಗೆ ಕ್ರಮಕೈಗೊಳ್ಳುತ್ತಿದ್ದೇವೆ. ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತರು ಮತ್ತು ಪೌರಕಾರ್ಮಿಕರ ವೇತನ ಹೆಚ್ಚಳ ಮಾಡಿ, ಅವರ ಗೌರವ ಹೆಚ್ಚಿಸಿದ್ದೇವೆ. ಅತಿವೃಷ್ಟಿಯಿಂದ ಮನೆ ಕಳೆದುಕೊಂಡವರಿಗೆ ಕೇಂದ್ರದ 1 ಲಕ್ಷದ ಜೊತೆಗೆ ರಾಜ್ಯದಿಂದ ಹೆಚ್ಚುವರಿ 4 ಲಕ್ಷ ಸೇರಿಸಿ 5 ಲಕ್ಷ ಪರಿಹಾರ ನೀಡಲಾಗುತ್ತಿದೆ. ಒಂದು ತಿಂಗಳಲ್ಲಿಯೇ ಮಳೆಯಿಂದಾಗಿ ಬೆಳೆನಾಶವಾದ 18 ಲಕ್ಷ ಜನ ರೈತರಿಗೆ ಪರಿಹಾರ ನೀಡಲಾಗಿದೆ. ಈ ಹಿಂದೆ ಇಷ್ಟು ಪರಿಹಾರ ನೀಡಲು ಎರಡು ವರ್ಷ ತೆಗೆದುಕೊಳ್ಳುತ್ತಿತ್ತು ಎಂದರು.

ನಮ್ಮ ಸರ್ಕಾರ ಬಂದಮೇಲೆ ಆಡಳಿತ ಸುಧಾರಣೆಯಾಗಿದೆ. ಆಳವಾದ ಚಿಂತನೆ ಮತ್ತು ದೂರದೃಷ್ಟಿಯಿಂದ ರಾಜ್ಯವನ್ನು ಅಭಿವೃದ್ಧಿಯತ್ತ ಸಾಗಿಸುತ್ತಿದ್ದೇವೆ.  ಎಲ್ಲರೂ ಶ್ರಮವಹಿಸಿ ನವಭಾರತ ಕಟ್ಟೋಣ. ರಾಜ್ಯದಲ್ಲಿ ಸ್ವಚ್ಛತೆ ಮತ್ತು ಆರೋಗ್ಯಕರ ವಾತಾವರಣಕ್ಕೆ ಒತ್ತು ನೀಡಲಾಗುತ್ತಿದೆ. 250 ಕೋಟಿ ವೆಚ್ಚದಲ್ಲಿ ಶಾಲಾ-ಕಾಲೇಜುಗಳಲ್ಲಿ ಶೌಚಾಲಯ ನಿರ್ಮಾಣ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಭಾರತ ದೇಶಕ್ಕೆ ಈಗ ಅಮೃತ ಗಳಿಗೆ ಬಂದಿದೆ. ಹಲವಾರು ಮಹನೀಯರು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾರೆ. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರ ಗುಂಡಿಗೆ ಬಲಿದಾನ ಮಾಡಿದ್ದಾರೆ. ರೈತರು ಕರ ನಿರಾಕರಣೆ ಚಳವಳಿ ಮಾಡಿದ್ದರು. ಸಿಪಾಯಿ ದಂಗೆಗೆ ರೈತರ ಚಳವಳಿಯು ಪೂರಕವಾಗಿ ನಿಂತಿತ್ತು. ಜಲಿಯನ್ ವಾಲಾಬಾಗ್ ಹತ್ಯಾಕಾಂಡವನ್ನು ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು.
ಅಹಿಂಸೆಯ ಮಾರ್ಗದ ಮೂಲಕ ಸ್ವಾತಂತ್ರ್ಯ ಪಡೆಯಬಹುದು ಎಂಬುದನ್ನು ಮಹಾತ್ಮಾ ಗಾಂಧೀಜಿ ಸಾಧಿಸಿ ತೋರಿಸಿದರು. ದೇಶದ ಆಂತರಿಕ ಭದ್ರತೆಗೆ ನಿಂತಿರುವ ಪೊಲೀಸರಿಗೆ ನಮನ. ದೇಶದ ಅಭಿವೃದ್ಧಿಗೆ ಅನೇಕರ ಕೊಡುಗೆ ಇದೆ. ವಿಜ್ಞಾನಿಗಳು, ರೈತರು, ಕೂಲಿಕಾರ್ಮಿಕರಿಗೆ ನನ್ನ ನಮನ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com