ಸ್ವಾತಂತ್ರ್ಯದಿನಾಚರಣೆ: ಕೊನೆಗೂ ಚಾಮರಾಜಪೇಟೆ ಮೈದಾನದಲ್ಲಿ ತ್ರಿವರ್ಣ ಧ್ವಜಾರೋಹಣ, ಪಟಾಕಿ ಸಿಡಿಸಿ ಸಂಭ್ರಮಿಸಿದ ಸ್ಥಳೀಯರು

ತೀವ್ರ ವಿವಾದಕ್ಕೆ ಕಾರಣವಾಗಿದ್ದ ಚಾಮರಾಜಪೇಟೆ ಮೈದಾನದಲ್ಲಿ ಕೊನೆಗೂ 76ನೇ ಸ್ವಾತಂತ್ರ್ಯದಿನಾಚರಣೆ ಸಂಭ್ರಮದ ದಿನದಂದು ತ್ರಿವರ್ಣ ಧ್ವಜಾರೋಹಣವಾಗಿದೆ.
ಚಾಮರಾಜಪೇಟೆ ಮೈದಾನದಲ್ಲಿ ತ್ರಿವರ್ಣ ಧ್ವಜಾರೋಹಣ
ಚಾಮರಾಜಪೇಟೆ ಮೈದಾನದಲ್ಲಿ ತ್ರಿವರ್ಣ ಧ್ವಜಾರೋಹಣ

ಬೆಂಗಳೂರು: ತೀವ್ರ ವಿವಾದಕ್ಕೆ ಕಾರಣವಾಗಿದ್ದ ಚಾಮರಾಜಪೇಟೆ ಮೈದಾನದಲ್ಲಿ ಕೊನೆಗೂ 76ನೇ ಸ್ವಾತಂತ್ರ್ಯದಿನಾಚರಣೆ ಸಂಭ್ರಮದ ದಿನದಂದು ತ್ರಿವರ್ಣ ಧ್ವಜಾರೋಹಣವಾಗಿದೆ.

ಹೌದು.. ಜಾಗದ ಒಡೆತನ ವಿಚಾರವಾಗಿ ಹೆಚ್ಚು ಸುದ್ದಿಯಾಗಿದ್ದ ಚಾಮರಾಜಪೇಟೆ ಮೈದಾನದಲ್ಲಿ ಪೊಲೀಸರ ಸರ್ಪಗಾವಲಿನಲ್ಲಿ ಸೋಮವಾರ ಬೆಳಿಗ್ಗೆ ಧ್ವಜಾರೋಹಣ ನೆರವೇರಿತು. ಮೈದಾನದಲ್ಲಿ‌ ಜರುಗಿದ ಕಾರ್ಯಕ್ರಮಮದಲ್ಲಿ ಬೆಂಗಳೂರು ನಗರ ಉಪ ವಿಭಾಗಾಧಿಕಾರಿ ಶಿವಣ್ಣ ಅವರು ಧ್ವಜಾರೋಹಣ ನೆರವೇರಿಸಿದರು. ಸರ್ಕಾರದ ವತಿಯಿಂದಲೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 

ಸಂಸದ ಪಿ.ಸಿ. ಮೋಹನ್, ಶಾಸಕ ಜಮೀರ್ ಅಹ್ಮದ್ ಖಾನ್, ಹೆಚ್ಚುವರಿ ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ ಹಾಗೂ ಪಶ್ಚಿಮ‌ ವಿಭಾಗದ ಡಿಸಿಪಿ ಲಕ್ಷ್ಮಣ ‌ನಿಂಬರಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಶಾಲಾ‌ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು‌ ನಡೆಯುತ್ತಿವೆ.

ವ್ಯಾಪಕ ಭದ್ರತೆ
ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ನಡೆಯುತ್ತಿರುವ ಚಾಮರಾಜಪೇಟೆ ಮೈದಾನದ ಸುತ್ತ ಪೊಲೀಸರು ಬಿಗಿ‌ಭದ್ರತೆ ಇದೆ. ಮೈದಾನದಲ್ಲಿರುವ ಈದ್ಗಾಗೆ ಯಾವುದೇ ಧಕ್ಕೆಯಾಗದಂತೆ ನೋಡಿಕೊಳ್ಳಲು ಶಸ್ತ್ರಸಜ್ಜಿತ‌ ಪೊಲೀಸರು ಹಾಗೂ ಗರುಡಾ ಪಡೆ ಸಿಬ್ಬಂದಿ, ಸುತ್ತಲೂ ಗಸ್ತು ತಿರುಗುತ್ತಿದ್ದಾರೆ.

ಪಟಾಕಿ ಸಿಡಿಸಿ ಸಂಭ್ರಮ, ತ್ರಿವರ್ಣ ಧ್ವಜ ಹಿಡಿದು ಸಾಗಿದ ಸ್ಥಳೀಯರು
ಚಾಮರಾಜಪೇಟೆ ಮೈದಾನದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರುತ್ತಿದ್ದಂತರ ಸ್ಥಳೀಯ ನಿವಾಸಿಗಳ ಒಕ್ಕೂಟ ವೇದಿಕೆ‌ ಸದಸ್ಯರು, ಪಟಾಕಿ ಸಿಡಿಸಿ‌ ಸಿಹಿ ಹಂಚಿ ಸಂಭ್ರಮಿಸಿದರು. 'ಹಲವು ವರ್ಷಗಳಿಂದ ಮೈದಾನದಲ್ಲಿ ಧ್ವಜಾರೋಹಣ ಸಂಭ್ರಮ ಇರಲಿಲ್ಲ. ಈ ವರ್ಷ ಸರ್ಕಾರದವರೇ ಇಲ್ಲಿ ಧ್ವಜಾರೋಹಣ ನೆರವೇರಿಸಿದ್ದಾರೆ. ಸ್ಥಳೀಯರೆಲ್ಲರೂ ಸಂಭ್ರಮಿಸುತ್ತಿದ್ದಾರೆ' ಎಂದು ಒಕ್ಕೂಟ ವೇದಿಕೆ ಸದಸ್ಯರು ಹೇಳಿದರು. ತ್ರಿವರ್ಣ ಧ್ವಜ‌ ಹಿಡಿದು ರಸ್ತೆಯುದ್ದಕ್ಕೂ ಮೆರವಣಿಗೆ ಸಹ‌ ನಡೆಸಿದರು. ಚಾಮರಾಜಪೇಟೆ ಮೈದಾನ ಹಾಗೂ ಸುತ್ತಮುತ್ತ ಸ್ಥಳದಲ್ಲಿ ಮೆರವಣಿಗೆ ಸಾಗುತ್ತಿದ್ದು, ಪೊಲೀಸರು ಭದ್ರತೆಯೂ ಇದೆ.

ಪೊಲೀಸರೊಂದಿಗೆ ವಾಗ್ವಾದ
ಈ ನಡುವೆ ಚಾಮರಾಜಪೇಟೆ ನಾಗರಿಕರ ಒಕ್ಕೂಟ ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ಉಂಟಾಗಿದೆ. ವಿಐಪಿ ಗೇಟ್ ಮೂಲಕವೇ ಎಂಟ್ರಿಗೆ ಮುಂದಾಗಿದ್ದು, ಏನ್ರಿ ನಮ್ಮಿಂದಲೇ ಇಂದು ಇಲ್ಲಿ ಧ್ವಜಾರೋಹಣ ಆಗುತ್ತಿರುವುದು. ನಮ್ಮನ್ನೇ ಬಿಡೊಲ್ಲ ಅಂದರೆ ಹೇಗೆ ಅಂತ ಚಾಮರಾಜಪೇಟೆ ನಾಗರಿಕರ ಒಕ್ಕೂಟ ಪೊಲೀಸರೊಂದಿಗೆ ವಾಗ್ವಾದ ಮಾಡಿದರು. ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ ಮನವೊಲಿಸಲು ಯತ್ನಿಸಿದ್ದು, ವಾಪಾಸ್ ಹೋಗಿ ಸಾರ್ವಜನಿಕರ ಗ್ಯಾಲರಿಯಲ್ಲಿ ಕೂರುವಂತೆ ಹೇಳಿದರು.
 

ಖಾಕಿ ಕಣ್ಗಾವಲು
ಮೈದಾನ ಸಂಪೂರ್ಣ RAF ಟೀಮ್ ಸುತ್ತುವರೆದಿದ್ದು, ಅಹಿತಕರ ಘಟನೆ ನಡೆಯದಮನತೆ ಮೈದಾನದ ಮೇಲೆ ಖಾಕಿ ಕಣ್ಗಾವಲು ವಹಿಸಿದೆ. 250 ರಿಂದ 300 ಮಂದಿ RAF ಟೀಮ್​ನಿಂದ ಭದ್ರತೆ ಒದಗಿಸಿದ್ದು, ಸಂಪೂರ್ಣ ಶಸ್ತ್ರ ಸಜ್ಜಿತವಾಗಿ ಮೈದಾನಕ್ಕೆ ಇಳಿಯಲಾಗಿದೆ. ಒಟ್ಟು 10 ಕೆಎಸ್ ಆರ್ ಪಿ, SWAT ಸ್ಪೆಷಲ್ ಫೋರ್ಸ್ 104 ಕ್ಕೂ ಹೆಚ್ಚು ಮಂದಿ, ವಜ್ರ 2 ಟೀಮ್ ಡಿಆರ್ ಡಿ ಒ ಟೀಮ್​ಗಳಿಂದ ಭದ್ರತೆ ನೀಡಲಾಗಿದೆ.

ಈದ್ಗಾ ಗೋಡೆ ಅಕ್ಕಪಕ್ಕ ಓಡಾಟಕ್ಕೆ ನಿಷೇಧ
ಮೈದಾನದಲ್ಲಿ ಸಣ್ಣದೊಂದು ವೇದಿಕೆ ನಿರ್ಮಾಣ ಮಾಡಿದ್ದು, ವೇದಿಕೆ ಮೇಲೆ ಕೇವಲ ಮೂರು ಕುರ್ಚಿಗಳ ವ್ಯವಸ್ಥೆ ಮಾಡಲಾಗಿದೆ. ಧ್ವಜಾರೋಹಣ ಮಾಡುವ ಎಸಿ ಶಿವಣ್ಣ, ಹಾಗೂ ಸ್ಥಳೀಯ ಶಾಸಕರು ಹಾಗೂ ಸಂಸದರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ವಿವಾದಿತ ಈದ್ಗಾ ಗೋಡೆಯ ತದ್ವಿರುದ್ಧವಾಗಿ ಧ್ವಜಾರೋಹಣಕ್ಕೆ ಸಿದ್ಧತೆ ಮಾಡಿದ್ದು, ಮಾಧ್ಯಮದವರ ಪ್ರದೇಶದ್ವಾರ, ಸಾರ್ವಜನಿಕಕರಿಗೆ ಪ್ರದೇಶ ದ್ವಾರ, ಹಾಗೂ ವಿವಿಐಪಿಗಳಿಗೆ ಪ್ರತ್ಯೇಕ ಪ್ರವೇಶದ್ವಾರವಿರಲಿದೆ. ಈದ್ಗಾ ಗೋಡೆಯ ಸುತ್ತಲೂ ಪೊಲೀಸ್ ಸರ್ಪಗಾವಲು ವಹಿಸಿದ್ದು, ಸಾರ್ವಜನಿಕರಿಗೆ ಗೋಡೆ ಅಕ್ಕಪಕ್ಕ ಓಡಾಟ ನಿಷೇಧಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com