ಸರ್ಕಾರದಲ್ಲಿ 40% ಕಮಿಷನ್ ದಂಧೆ, ಬಿಬಿಎಂಪಿಯಲ್ಲಿ ಶೇ.50ರಷ್ಟು ಕಮಿಷನ್: ಗುತ್ತಿಗೆದಾರ ಸಂಘದ ಅಧ್ಯಕ್ಷ ಆರೋಪ

ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲಿ ಶೇಕಡಾ 40ರಷ್ಟು ಕಮಿಷನ್ ಬೇಡಿಕೆ ದಂಧೆ ನಡೆಯುತ್ತಿದ್ದರೆ ಅದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ 50 ಪರ್ಸೆಂಟ್ ವರೆಗೆ ಇದೆ ಎಂಬ ಆರೋಪ ಕೇಳಿಬರುತ್ತಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯ ಸರ್ಕಾರದಲ್ಲಿ ಮತ್ತೆ ಗುತ್ತಿಗೆದಾರರಿಂದ 40% ಕಮಿಷನ್ ಬೇಡಿಕೆ ಆರೋಪ ಸದ್ದು ಮಾಡಿದೆ. ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲಿ ಶೇಕಡಾ 40ರಷ್ಟು ಕಮಿಷನ್ ಬೇಡಿಕೆ ದಂಧೆ ನಡೆಯುತ್ತಿದ್ದರೆ ಅದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ 50 ಪರ್ಸೆಂಟ್ ವರೆಗೆ ಇದೆ, ಒಂದು ಕೆಲಸದ ದಾಖಲೆ ಅಧಿಕಾರಿಗಳ ಟೇಬಲ್ ನಿಂದ ಟೇಬಲ್ ಗೆ ಹೋಗಿ ಕೆಲಸ ಮಾಡಿಸಿಕೊಳ್ಳಬೇಕೆಂದರೆ 50%ವರೆಗೆ ಕಮಿಷನ್ ಕೊಡಬೇಕೆಂಬ ಆರೋಪ ಕೇಳಿಬರುತ್ತಿದೆ.

ನಿನ್ನೆ ವಿಪಕ್ಷ ನಾಯಕ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಮಾಧ್ಯಮಗಳ ಮುಂದೆ ಕರ್ನಾಟಕ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಬೊಮ್ಮಾಯಿ ಸರ್ಕಾರದ ಮೇಲೆ, ಸಚಿವರು, ಶಾಸಕರ ಮೇಲೆ ಆರೋಪ ಮಾಡಿದ ಮೇಲೆ ಬಿಬಿಎಂಪಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್ ಕೆಟಿ, ಬಿಬಿಎಂಪಿಯಲ್ಲಿ ಒಂದು ದಾಖಲೆ ಮುಂದೆ ವರ್ಗಾವಣೆಯಾಗಬೇಕೆಂದರೆ ಮತ್ತು ಕಾಮಗಾರಿಗೆ ಒಪ್ಪಿಗೆ ಸಿಗಬೇಕೆಂದರೆ ಶೇಕಡಾ 50ರವರೆಗೆ ಕಮಿಷನ್ ಲಂಚ ಕೊಡಬೇಕು. ಸರ್ಕಾರದ ಹೊಸ ಕಾನೂನುಗಳು ಇನ್ನಷ್ಟು ಜಟಿಲವಾಗಿ ಗುತ್ತಿಗೆದಾರರಿಗೆ ಸಮಸ್ಯೆಯಾಗುತ್ತಿದೆ ಎಂದು ಆರೋಪಿಸಿದರು.

ಮಂಜುನಾಥ್ ಅವರು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಬಿಬಿಎಂಪಿಯಲ್ಲಿ ಭ್ರಷ್ಟಾಚಾರವನ್ನು ನಿಭಾಯಿಸಲು ಮತ್ತು ಆಯೋಗಗಳನ್ನು ಹೆಚ್ಚಿಸುವ ಸುದೀರ್ಘ ಪ್ರಕ್ರಿಯೆಗೆ ಕಡಿವಾಣ ಹಾಕುವಂತೆ ಮನವಿ ಸಲ್ಲಿಸಿದ ನಂತರ ಮಾಧ್ಯಮಗಳ ಮುಂದೆ ಈ ಆರೋಪ ಮಾಡಿದ್ದಾರೆ. 

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಂಜುನಾಥ್, ಗುತ್ತಿಗೆದಾರರು ನೋವಿನಲ್ಲಿದ್ದಾರೆ. ಅಧಿಕಾರಿಗಳ ಅಂಗೈಗೆ ತುಪ್ಪ ಹಚ್ಚದೆ ಏನೂ ಆಗುವುದಿಲ್ಲ. ಹೊಸ ಕ್ರಮಗಳು ತೊಂದರೆಯನ್ನು ಮಾತ್ರ ಸೃಷ್ಟಿಸುತ್ತಿವೆ. ಕಾಮಗಾರಿಗಳನ್ನು ಪಾರದರ್ಶಕತೆಯಿಂದ ನಿರ್ವಹಿಸುವುದು ನಮಗೆ ಕಷ್ಟವಾಗುತ್ತಿದೆ. ಕಳೆದ 23 ತಿಂಗಳಿನಿಂದ ಬಾಕಿ ಉಳಿದಿರುವ 3,600 ಕೋಟಿ ರೂಪಾಯಿ ಬಿಲ್ ಗಳನ್ನು ಶೀಘ್ರವೇ ತೆರವುಗೊಳಿಸಬೇಕು. ಬೆಂಗಳೂರಿಗರು ಹೆಚ್ಚು ತೆರಿಗೆ ಪಾವತಿಸುತ್ತಿರುವುದರಿಂದ ನಾವು ಉತ್ತಮ ಯೋಜನೆಗಳನ್ನು ನೀಡಬೇಕಾಗುತ್ತದೆ ಎಂದಿದ್ದಾರೆ.

ಈ ಬಗ್ಗೆ ಸಿಎಂ ಬೊಮ್ಮಾಯಿಯವರಿಗೆ ಮತ್ತು ಬೆಂಗಳೂರಿನ ಎಲ್ಲಾ ಶಾಸಕರಿಗೆ ಪ್ರಾತಿನಿಧ್ಯ ಸಲ್ಲಿಸಲಿದ್ದು ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಪ್ರತಿಭಟನೆ ನಡೆಸುವುದಾಗಿ ಕೂಡ ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಪ್ರತಿಕ್ರಿಯೆ ನೀಡಿರುವ ಬಿಬಿಎಂಪಿ ಆಯುಕ್ತ ಗಿರಿನಾಥ್, ಕಾಮಗಾರಿಗಳಿಗೆ ಸಂಬಂಧಿಸಿದ ದಾಖಲೆಗಳ ಹೆಚ್ಚಿನ ಪ್ರಕ್ರಿಯೆಗಳಿಗೆ ಅಂತ್ಯ ಹಾಡುವ ಅಗತ್ಯವಿದ್ದರೂ, ವಿಕೇಂದ್ರೀಕರಣ ಕ್ರಮಗಳಲ್ಲಿ ಬಿಬಿಎಂಪಿ ರಾಜಿ ಮಾಡಿಕೊಳ್ಳುವುದಿಲ್ಲ. "ಹಳೆಯ ಬಿಲ್‌ಗಳಿಂದ ಕಷ್ಟವಾಗುತ್ತದೆ ಎಂದು ಗುತ್ತಿಗೆದಾರರು ಭಾವಿಸುತ್ತಾರೆ. ಹೊಸ ಕ್ರಮಗಳು ಭವಿಷ್ಯದ ಯೋಜನೆಗಳಲ್ಲಿ ಹೆಚ್ಚು ಪಾರದರ್ಶಕತೆಯನ್ನು ತರಲು ಮಾತ್ರ ಎಂದಿದ್ದಾರೆ. 

ಗುಣಮಟ್ಟದ ಕಾಮಗಾರಿಗಳು ಪಾರದರ್ಶಕವಾಗಿ ನಡೆಯುತ್ತಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ತಾಂತ್ರಿಕ ವಿಜಿಲೆನ್ಸ್ ಸೆಲ್ ಅಧಿಕಾರಿಗಳು ಕನಿಷ್ಠ 10 ಪ್ರತಿಶತದಷ್ಟು ಯೋಜನೆಗಳನ್ನು ಯಾದೃಚ್ಛಿಕವಾಗಿ ಪರಿಶೀಲಿಸುತ್ತಾರೆ ಎಂದು ಆಯುಕ್ತರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com