ಬೆಂಗಳೂರಿನಲ್ಲಿ ಸೋಮವಾರ ಬೆಳ್ಳಂಬೆಳಗ್ಗೆ ವರುಣಾರ್ಭಟ, ಅಪರಾಹ್ನ ಭಾರೀ ಮಳೆ ಮುನ್ಸೂಚನೆ

ನಾಳೆ, ನಾಡಿದ್ದು ಗೌರಿ-ಗಣೇಶ ಹಬ್ಬದ ಮುನ್ನಾದಿನ ವಾರದ ಆರಂಭದಲ್ಲಿ ಬೆಂಗಳೂರಿನ ಜನತೆಗೆ ವರುಣ ದೊಡ್ಡ ಮಟ್ಟದಲ್ಲಿ ಪ್ರದರ್ಶನ ನೀಡಿದ್ದಾನೆ. ಇಂದು ಸೋಮವಾರ ಬೆಳ್ಳಂಬೆಳಗ್ಗೆಯೇ ನಗರದಲ್ಲಿ ವರುಣ ಬೊಬ್ಬಿರಿಯುತ್ತಿದ್ದಾನೆ.
ಬೆಂಗಳೂರಿನಲ್ಲಿ ಮಳೆ
ಬೆಂಗಳೂರಿನಲ್ಲಿ ಮಳೆ

ಬೆಂಗಳೂರು: ನಾಳೆ, ನಾಡಿದ್ದು ಗೌರಿ-ಗಣೇಶ ಹಬ್ಬದ ಮುನ್ನಾದಿನ ವಾರದ ಆರಂಭದಲ್ಲಿ ಬೆಂಗಳೂರಿನ ಜನತೆಗೆ ವರುಣ ದೊಡ್ಡ ಮಟ್ಟದಲ್ಲಿ ಪ್ರದರ್ಶನ ನೀಡಿದ್ದಾನೆ. ಇಂದು ಸೋಮವಾರ ಬೆಳ್ಳಂಬೆಳಗ್ಗೆಯೇ ನಗರದಲ್ಲಿ ವರುಣ ಬೊಬ್ಬಿರಿಯುತ್ತಿದ್ದಾನೆ.

ಬೆಂಗಳೂರಿನಲ್ಲಿ ಇಂದು ಬೆಳಗ್ಗೆಯೇ ಕತ್ತಲು ತುಂಬಿಕೊಂಡಿದ್ದು ಅಪರಾಹ್ನ ಭಾರೀ ಪ್ರಮಾಣದಲ್ಲಿ ಮಳೆಯಾಗುವ ಮುನ್ಸೂಚನೆ ಸಿಕ್ಕಿದೆ. ಬಹುತೇಕ ಏರಿಯಾಗಳಲ್ಲಿ ದೊಡ್ಡ ಪ್ರಮಾಣದಲ್ಲಿ, ಕೆಲವು ಕಡೆಗಳಲ್ಲಿ ಜಿಟಿಜಿಟಿ ಮಳೆ ಶುರುವಾಗಿದೆ. ಜಯನಗರ, ಮೆಜೆಸ್ಟಿಕ್, ಎಂಜಿ ರಸ್ತೆ, ಶಿವಾಜಿನಗರ, ಬಿಟಿಎಂ ಲೇಔಟ್ ಸೇರಿದಂತೆ ನಗರದೆಲ್ಲೆಡೆ ವರುಣಾರ್ಭಟ ಮುಂದುವರಿದಿದ್ದು ಮಳೆಯಿಂದಾಗಿ ರಸ್ತೆಗಳಲ್ಲಿ ನೀರು ನಿಂತು ಅವಾಂತರ ಸೃಷ್ಟಿಯಾಗುತ್ತಿದೆ.

ಕಳೆದ 5 ವರ್ಷಗಳಲ್ಲಿ ದಾಖಲೆ ಮಳೆ: ಬೆಂಗಳೂರಿನಲ್ಲಿ ಈ ಆಗಸ್ಟ್ ತಿಂಗಳಲ್ಲಿ 184.4 ಮಿಲಿ ಮೀಟರ್ ಮಳೆಯಾಗಿದ್ದು, ಐದು ವರ್ಷಗಳಲ್ಲೇ ಅತಿ ಹೆಚ್ಚು ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮೊನ್ನೆ ಶುಕ್ರವಾರ, ಮುಂಜಾನೆ 3 ರಿಂದ 6 ರ ನಡುವಿನ ಮೂರು ಗಂಟೆಗಳಲ್ಲಿ ನಗರದಲ್ಲಿ 41.4 ಮಿಮೀ ಮಳೆ ದಾಖಲಾಗಿದೆ. ಮೊನ್ನೆ ಶನಿವಾರ ನಗರದಲ್ಲಿ ಧಾರಾಕಾರ ಮಳೆ ಸುರಿದಿದ್ದು, ಹಲವೆಡೆ ಜಲಾವೃತಗೊಂಡು ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ.

ಕೆಂಗೇರಿ ಮತ್ತು ಬಿಡದಿ ಬಳಿಯ ವಂಡರ್ಲಾ ಅಮ್ಯೂಸ್‌ಮೆಂಟ್ ಪಾರ್ಕ್ ನಡುವಿನ ಕಣ್ಮನಿಕೆ ಕೆರೆಯು ಉಕ್ಕಿ ಹರಿದು ಬೆಂಗಳೂರು-ಮೈಸೂರು ಹೆದ್ದಾರಿಯ ಕೆಲವು ಭಾಗಗಳಿಗೆ ಹಾನಿಯಾಗಿದೆ. ಮೈಸೂರು ರಸ್ತೆ ಎಕ್ಸ್‌ಪ್ರೆಸ್‌ವೇ ಹೊಸ ಟೋಲ್‌ ಬೂತ್‌ ಕೂಡ ನೀರಿನಲ್ಲಿ ಮುಳುಗಿದೆ. ನಗರದ ಹಲವೆಡೆ ರಸ್ತೆಗಳಲ್ಲಿ ಗುಂಡಿ ಬಿದ್ದಿದ್ದು, ಗುಂಡಿಗಳಲ್ಲಿ ನೀರು ತುಂಬಿಕೊಂಡು ವಾಹನ ಸವಾರರು ಸಂಕಷ್ಟಕ್ಕೆ ಸಿಲುಕಿದರು.

ಬೆಂಗಳೂರಿನ ಬಹುತೇಕ ಕಡೆ ಆವರಿಸಿದ ಕಗ್ಗತ್ತಲು: ಬೆಂಗಳೂರಿನ ಬಹುತೇಕ ಕಡೆ ಕಗ್ಗತ್ತಲು: ಬಸವನಗುಡಿ, ಹನುಮಂತನಗರ, ಇಟ್ಟಮಡು, ಗಿರಿನಗರ, ಶ್ರೀನಗರ, ಜಯನಗರ, ಬನಶಂಕರಿ, ದೇವೇಗೌಡ ಪೆಟ್ರೋಲ್ ಬಂಕ್, ಕತ್ತರಿಗುಪ್ಪೆ, ಸೇರಿದಂತೆ ಬೆಂಗಳೂರಿನ ಹಲವೆಡೆ ಸಂಜೆ 6 ಗಂಟೆಯ ರೀತಿ ಕತ್ತಲ ವಾತಾವರಣ ಗೋಚರವಾಗಿದೆ. ಭಾರಿ ಮಳೆಯಿಂದ ನಿರ್ಮಾಣ ಹಂತದ ಹೈವೇ ಕೆರೆಯಂತಾಗಿದ್ದು, ಬೆಂಗಳೂರು-ಮೈಸೂರು ಮಾರ್ಗದಲ್ಲಿ‌ ಟ್ರಾಫಿಕ್​ ಜಾಮ್ ಉಂಟಾಗಿದೆ. ಕಳೆದೊಂದು ಗಂಟೆಯಿಂದ ವಾಹನಗಳು ನಿಂತಲ್ಲೇ ನಿಂತಿವೆ. ಅಷ್ಟೇ ಅಲ್ಲದೇ ಕೆಂಗೇರಿ, ಬಿಡದಿ ಭಾಗದಲ್ಲಿ ತುಂತೂರು ಮಳೆ ಆರಂಭವಾಗಿದ್ದು, ವಾಹನ ಸವಾರರು ಟ್ರಾಫಿಕ್​ನಲ್ಲಿ ಸಿಲುಕಿ‌ ಪರದಾಡುತ್ತಿದ್ದಾರೆ.

ಅಪರಾಹ್ನ ಭಾರೀ ಮಳೆ?: ಮುಂದಿನ ಮೂರು ಗಂಟೆಗಳಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಗುಡುಗು ಸಹಿತ ಮಿಂಚು ಜೊತೆಗೆ ಸಾಧಾರಣ ಮಳೆಯ ಜೊತೆಗೆ ರಭಸದ ಗಾಳಿಯ ವೇಗ 30-40 ಕಿಮೀ ವೇಗವನ್ನು ತಲುಪುವ ಸಾಧ್ಯತೆಯಿದೆ. ಬೆಂಗಳೂರು ನಗರ ಮತ್ತು ಗ್ರಾಮಾಂತರ, ರಾಮನಗರ, ಮೈಸೂರು, ಮಂಡ್ಯ , ಕೋಲಾರ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದ್ದು, ಅಲ್ಲಿನ ಜಿಲ್ಲಾಧಿಕಾರಿಗಳಿಗೆ ಎಚ್ಚರ ವಹಿಸುವಂತೆ ಸೂಚನೆ ನೀಡಲಾಗಿದೆ. 

ದಕ್ಷಿಣ ಒಳನಾಡಿನ ಹೆಚ್ಚಿನ ಸ್ಥಳಗಳಲ್ಲಿ ಮತ್ತು ಉತ್ತರ ಒಳನಾಡಿನ ಹಲವು ಸ್ಥಳಗಳಲ್ಲಿ ಗುಡುಗು ಸಹಿತ ಮಳೆಯಾಗಲಿದ್ದು, ಕರಾವಳಿ ಕರ್ನಾಟಕದ ಬಹುತೇಕ ಪ್ರದೇಶಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಅರಬ್ಬಿ ಸಮುದ್ರ, ಬಂಗಾಳ ಕೊಲ್ಲಿಯಲ್ಲಿ ಮಳೆಗೆ ಪೂರಕ ವಾತಾವರಣ ಇರುವುದರಿಂದ ಮುಂದಿನ ಮೂರ್ನಾಲ್ಕು ದಿನ ಮಳೆ ಅಬ್ಬರಿಸುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com