

ಬೆಂಗಳೂರು: ಮಂಗಳೂರು ಕುಕ್ಕರ್ ಸ್ಫೋಟ ಪ್ರಕರಣದ ತನಿಖೆ ನಡೆಸುತ್ತಿರುವ ತನಿಖಾಧಿಕಾರಿಗಳು ಶಂಕಿತ ಭಯೋತ್ಪಾದಕ ಮೊಹಮ್ಮದ್ ಶಾರಿಕ್ ಜೊತೆಗಿನ ಕೇರಳದ ಸಂಪರ್ಕವನ್ನು ಪತ್ತೆಹಚ್ಚುವತ್ತ ಗಮನ ಹರಿಸಿದ್ದಾರೆ ಎಂದು ಮೂಲಗಳು ಗುರುವಾರ ತಿಳಿಸಿವೆ.
ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮತ್ತು ಸೈಬರ್ ಕ್ರೈಂ ಘಟಕದ ಅಧಿಕಾರಿಗಳು ಈಗಾಗಲೇ ಕೇರಳ ತಲುಪಿದ್ದು, ಶಂಕಿತ ಭಯೋತ್ಪಾದಕ ಮೊಹಮ್ಮದ್ ಶಾರಿಕ್‌ನ ನಂಟು ಭೇದಿಸಲು ಹುಡುಕಾಟ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೊಹಮ್ಮದ್ ಶಾರಿಕ್ ಕೇರಳದ ಆಲುವಾ, ಮುನಂಬಂ ಮತ್ತು ಕೊಚ್ಚಿ ನಗರಗಳಲ್ಲಿ ತಂಗಿದ್ದ ಎಂಬ ಮಾಹಿತಿ ಸಿಕ್ಕಿದೆ. ಮೊಹಮ್ಮದ್ ಶಾರಿಕ್ ಡ್ರಗ್ ದಂಧೆಯಲ್ಲಿಯೂ ಭಾಗಿಯಾಗಿರುವ ಬಗ್ಗೆಯೂ ತನಿಖಾಧಿಕಾರಿಗಳು ಮಾಹಿತಿ ಸಂಗ್ರಹಿಸಿದ್ದಾರೆ.
ಮೊಹಮ್ಮದ್ ಶಾರಿಕ್‌ನನ್ನು ನಿಯಂತ್ರಿಸುವ ಮತ್ತು ಹಿಡಿತದಲ್ಲಿಟ್ಟುಕೊಂಡು ಆತನಿಂದ ಕೆಲಸಗಳನ್ನು ಮಾಡಿಸುತ್ತಿದ್ದ ಕೆಲವು ಕಿಂಗ್‌ಪಿನ್‌ಗಳನ್ನು ಅವರು ಹುಡುಕುತ್ತಿದ್ದಾರೆ. ಈ ಗುಂಪು ದಕ್ಷಿಣ ಭಾರತದ ರಾಜ್ಯಗಳಲ್ಲಿ ಭಯೋತ್ಪಾದಕ ಕೃತ್ಯಗಳನ್ನು ಯೋಜಿಸಿದೆ. ದೇಶದಲ್ಲಿ ನಡೆಯಲು ಯೋಜಿಸಿದ್ದ ಭಯೋತ್ಪಾದಕ ಚಟುವಟಿಕೆಗಳಿಗೆ ಹಣ ನೀಡಲು ಚಿನ್ನದ ಕಳ್ಳಸಾಗಣೆ ಮತ್ತು ಮಾದಕವಸ್ತು ಕಳ್ಳಸಾಗಣೆಯಲ್ಲಿ ಈ ತಂಡ ತೊಡಗಿತ್ತು ಎಂದು ಮೂಲಗಳು ವಿವರಿಸಿವೆ.
ಈ ಗುಂಪಿಗೆ ಕೇರಳದಲ್ಲಿ ರಾಜಕೀಯ ಬೆಂಬಲವಿದೆಯೇ ಎಂದು ಎನ್ಐಎ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಕರ್ನಾಟಕದ ಗಡಿದೆ ಹೊಂದಿಕೊಂಡಿರುವ ಕೇರಳದ ಕಾಸರಗೋಡು ಜಿಲ್ಲೆಯಲ್ಲೂ ತನಿಖೆ ನಡೆಯಲಿದೆ.
ನವೆಂಬರ್ 19 ರಂದು ಕರಾವಳಿ ಪಟ್ಟಣ ಮಂಗಳೂರಿನ ನಾಗುರಿ ಪ್ರದೇಶದಲ್ಲಿ ಕುಕ್ಕರ್ ಸ್ಫೋಟ ಸಂಭವಿಸಿದೆ. ಘಟನೆ ನಂತರ ಕರ್ನಾಟಕ ಪೊಲೀಸರು ಇದನ್ನು ಭಯೋತ್ಪಾದಕ ಕೃತ್ಯವೆಂದು ಘೋಷಿಸಿದ್ದಾರೆ.
ಶಂಕಿತ ಭಯೋತ್ಪಾದಕ ಶಾರಿಕ್‌ನ ಕೃತ್ಯ ಮತ್ತು ಕ್ರಮವು ಜಾಗತಿಕ ಭಯೋತ್ಪಾದನಾ ಜಾಲದಿಂದ ಪ್ರೇರಿತವಾಗಿದೆ ಎಂದು ಹೆಚ್ಚುವರಿ ಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಅಲೋಕ್ ಕುಮಾರ್ ಹೇಳಿದ್ದಾರೆ. ಈ ಬೇರುಗಳನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ತನಿಖೆ ಪ್ರಗತಿಯಲ್ಲಿದೆ. ಹೆಚ್ಚಿನ ತನಿಖೆಗಾಗಿ ಕರ್ನಾಟಕ ಸರ್ಕಾರ ಪ್ರಕರಣವನ್ನು ಎನ್‌ಐಎಗೆ ಹಸ್ತಾಂತರಿಸಿತ್ತು.
Advertisement