ಗಡಿ ವಿವಾದ: ಮಹಾರಾಷ್ಟ್ರ ಸಚಿವರು ಬೆಳಗಾವಿಗೆ ಬರಲು ಬಿಡುವುದಿಲ್ಲ- ಜಿಲ್ಲಾಧಿಕಾರಿ ನಿತೇಶ್ ಪಾಟೀಲ್
ಉಭಯ ರಾಜ್ಯಗಳ ನಡುವಿನ ಗಡಿ ವಿವಾದ ಭುಗಿಲೆದ್ದಿರುವ ಈ ಸಂದರ್ಭದಲ್ಲಿ ಮಹಾರಾಷ್ಟ್ರ ಸಚಿವರು ಬೆಳಗಾವಿಗೆ ಬರಲು ಬಿಡುವುದಿಲ್ಲ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಹೇಳಿದ್ದಾರೆ.
Published: 05th December 2022 12:48 PM | Last Updated: 05th December 2022 03:08 PM | A+A A-

ಬೆಳಗಾವಿ: ಉಭಯ ರಾಜ್ಯಗಳ ನಡುವಿನ ಗಡಿ ವಿವಾದ ಭುಗಿಲೆದ್ದಿರುವ ಈ ಸಂದರ್ಭದಲ್ಲಿ ಮಹಾರಾಷ್ಟ್ರ ಸಚಿವರು ಬೆಳಗಾವಿಗೆ ಬರಲು ಬಿಡುವುದಿಲ್ಲ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಹೇಳಿದ್ದಾರೆ.
‘ಮಹಾರಾಷ್ಟ್ರದ ಗಡಿ ಉಸ್ತುವಾರಿ ಸಚಿವರಾದ ಚಂದ್ರಕಾಂತ ಪಾಟೀಲ, ಶಂಭುರಾಜ್ ದೇಸಾಯಿ ಹಾಗೂ ಮಹಾರಾಷ್ಟ್ರ ಗಡಿ ಸಲಹಾ ಸಮಿತಿ ಅಧ್ಯಕ್ಷ, ಸಂಸದ ಶಂಭುರಾಜ್ ದೇಸಾಯಿ ಅವರಿಗೆ ಡಿಸೆಂಬರ್ 6ರಂದು ಬೆಳಗಾವಿ ಪ್ರವೇಶಿಸಲು ಬಿಡುವುದಿಲ್ಲ’ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಗಡಿ ವಿವಾದ: ಮಹಾರಾಷ್ಟ್ರ ಸಚಿವರುಗಳ ಭೇಟಿ ವಿರೋಧಿಸಿ ಬೆಳಗಾವಿಯಲ್ಲಿ ಕನ್ನಡ ಸಂಘಟನೆಗಳ ಪ್ರತಿಭಟನೆ
ನಗರದಲ್ಲಿ ವಿವಿಧ ಕನ್ನಡ ಸಂಘಟನೆಗಳಿಂದ ಮನವಿ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಗಡಿಯಲ್ಲಿ ಈಗ ಪರಿಸ್ಥಿತಿ ಬಿಗಡಾಯಿಸಿದೆ. ಇಂತಹ ವೇಳೆ ಬೆಳಗಾವಿಗೆ ಬಂದರೆ, ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಬರಲಿದೆ. ಮೂವರಿಗೆ ಸುರಕ್ಷತೆ ಒದಗಿಸಲು ಕಷ್ಟವಾಗಲಿದೆ. ಹಾಗಾಗಿ ಬೆಳಗಾವಿಗೆ ಬಾರದಿರುವುದೇ ಸೂಕ್ತ ಎಂದು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಮಹಾರಾಷ್ಟ್ರ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಗಡಿ ವಿವಾದ ಬಿಸಿಯಾಗಿರುವ ಈ ಸಂದರ್ಭದಲ್ಲಿ ಮಹಾರಾಷ್ಟ್ರ ಸಚಿವರು ರಾಜ್ಯಕ್ಕೆ ಬರುವುದು ಸೂಕ್ತವಲ್ಲ: ಸಿಎಂ ಬೊಮ್ಮಾಯಿ
ಹಾಗಾಗಿ ಸಚಿವರು ಮತ್ತು ಸಂಸದ ತಮ್ಮ ನಿರ್ಧಾರದಿಂದ ಹಿಂದೆ ಸರಿಯುತ್ತಾರೆ ಎಂಬ ನಿರೀಕ್ಷೆಯಿದೆ. ಇಷ್ಟಾಗಿಯೂ ಬರಲು ಮುಂದಾದರೆ, ಬೆಳಗಾವಿ ಪ್ರವೇಶಕ್ಕೆ ಬರಲು ಬಿಡುವುದಿಲ್ಲ. 144ನೇ ಕಲಂ ಪ್ರಕಾರ, ನಿಷೇಧಾಜ್ಞೆ ಜಾರಿಗೊಳಿಸುತ್ತೇವೆ.. ಅಂತೆಯೇ ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ಜಿಲ್ಲೆಯ ಗಡಿಗಳಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ’ ಎಂದು ಹೇಳಿದರು.