ಮಂಗಳೂರು ಸ್ಫೋಟ ಪ್ರಕರಣ: 'ಜಂಗಲ್ ಸರ್ವೈವಲ್' ಶಿಬಿರದಲ್ಲಿ ತರಬೇತಿ ಪಡೆದಿದ್ದ ಶಾರೀಕ್ ಹಾಗೂ ಆತನ ಸಹಚರರು!

ಮಂಗಳೂರು ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಶಾರಿಕ್ ಮತ್ತು ಆತನ ಸಹಚರ ಮಾಝ್ ಮುನೀರ್ ಅಹ್ಮದ್ ಕೊಡಗಿನ ಪೊನ್ನಂಪೇಟೆ ತಾಲ್ಲೂಕಿನ ವೆಸ್ಟ್ ನಮ್ಮೆಲೆಯ ವೋಟೆಕಾಡ್ ನೇಚರ್ ಕ್ಯಾಂಪ್ ಹೋಮ್‌ಸ್ಟೇನಲ್ಲಿ ತಂಗಿ ತರಬೇತಿ ಪಡೆದಿದ್ದ ಆತಂಕಕಾರಿ ಸಂಗತಿ ಇದೀಗ ಬಯಲಾಗಿದೆ.
ಆರೋಪಿ ಶಾರೀಕ್
ಆರೋಪಿ ಶಾರೀಕ್

ಮಂಗಳೂರು: ಮಂಗಳೂರು ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಶಾರಿಕ್ ಮತ್ತು ಆತನ ಸಹಚರ ಮಾಝ್ ಮುನೀರ್ ಅಹ್ಮದ್ ಕೊಡಗಿನ ಪೊನ್ನಂಪೇಟೆ ತಾಲ್ಲೂಕಿನ ವೆಸ್ಟ್ ನಮ್ಮೆಲೆಯ ವೋಟೆಕಾಡ್ ನೇಚರ್ ಕ್ಯಾಂಪ್ ಹೋಮ್‌ಸ್ಟೇನಲ್ಲಿ ತಂಗಿ ತರಬೇತಿ ಪಡೆದಿದ್ದ ಆತಂಕಕಾರಿ ಸಂಗತಿ ಇದೀಗ ಬಯಲಾಗಿದೆ.

ಪ್ರಕರಣದ ತನಿಖೆಯನ್ನು ಕೈಗೊಂಡಿರುವ ಮಂಗಳೂರು ಪೊಲೀಸರು ಶಾರೀಕ್ ತರಬೇತಿ ಪಡೆದಿದ್ದ ಹೋಮ್‌ಸ್ಟೇಗೆ ಭೇಟಿ ನೀಡಿ ಅಲ್ಲಿ ಏನೆಲ್ಲಾ ಚಟುವಟಿಕೆ ನಡೆಸಿದ್ದ ಎನ್ನುವುದರ ಮಾಹಿತಿ ಸಂಗ್ರಹಿಸಿದ್ದಾರೆ.

ಈ ಶಿಬಿರವನ್ನು ಮೇ ತಿಂಗಳಿನಲ್ಲಿ ನಡೆಸಲಾಗಿದ್ದು, ಶಿವಮೊಗ್ಗ ಘರ್ಷಣೆ ಪ್ರಕರಣದಲ್ಲಿ ಬಂಧನಕ್ಕೂ ಮುನ್ನ ಶಾರೀಕ್ ಹಾಗೂ ಮಾಜ್ ಈ ಹೋಂಸ್ಟೇನಲ್ಲಿ ನೆಲಸಿದ್ದರು ಎಂದು ತಿಳಿದುಬಂದಿದೆ.

ಶಿಬಿರದಲ್ಲಿ ಆರೋಪಿಗಳು ಅರಣ್ಯದಲ್ಲಿ ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳುವುದು ಹೇಗೆ, ಅಕಸ್ಮಾತ್ ಅರಣ್ಯದಲ್ಲಿ ತಪ್ಪಿಸಿಕೊಂಡಲ್ಲಿ ಅಲ್ಲಿ ಆಹಾರ ಉತ್ಪಾದನೆ ಮಾಡಿಕೊಳ್ಳುವುದು ಹೇಗೆ ಎಂಬ ಮುಂತಾದ ವಿಷಯಗಳನ್ನು ಕುಳಿತು ತರಬೇತಿ ಪಡೆದುಕೊಂಡಿದ್ದಾರ. ಈ ವೇಳೆ ಶಾರಿಕ್ ಕೂಡ ನಾನು ಟ್ರಕ್ಕಿಂಗ್ ಮಾಡುವವನು ಎಂದು ಹೇಳಿಕೊಂಡು ತರಬೇತಿ ಪಡೆದಿದ್ದ ಎಂದು ತಿಳಿದುಬಂದಿದೆ.

ಶಿಬಿರದಲ್ಲಿ ತರಬೇತಿ ಪಡೆದ ಬಳಿಕ ಶಾರಿಕ್ ಹಾಗೂ ಆತನ ಸಹಚರ ಶಿವಮೊಗ್ಗಕ್ಕೆ ತೆರಳಿದ್ದರು. ಕೆಲವರಿಗೆ ಇದು ಸಾಮಾನ್ಯ ಶಿಬಿರವಾಗಿದ್ದರೂ, ಶಾರೀಕ್ ಹಾಗೂ ಆತನ ಸಹಚರನಿಗೆ ಅತ್ಯಂತ ಮುಖ್ಯವಾದ ತರಬೇತಿ ನೀಡುವ ಶಿಬಿರವಾಗಿತ್ತು. ಕಾಡಿನಲ್ಲಿ ಬದುಕುಳಿದುಕೊಂಡೇ ತಮ್ಮ ಯೋಜನೆಗಳಲ್ಲಿ ಕಾರ್ಯನಿರ್ವಹಿಸುವುದನ್ನು ಕಲಿತ ಉಗ್ರರು ನಂತರ ಎಲ್ಲಾ ಎಂಜಿನಿಯರಿಂಗ್ ಕೌಶಲ್ಯಗಳನ್ನು ಬಳಕೆ ಮಾಡಲು ಶುರು ಮಾಡಿದರು. ಬಾಂಬ್ ಗಳನ್ನು ತಯಾರಿಸುವುದನ್ನೂ ಆರಂಭಿಸಿದ್ದರು. ಇದರಂತೆ ತುಂಗಾ ನದಿ ತೀರದಲ್ಲಿ ಪ್ರಾಯೋಗಿಕವಾಗಿ ಸ್ಫೋಟವನ್ನೂ ನಡೆಸಿದ್ದರು.

ದೊಡ್ಡ ಸ್ಫೋಟ ನಡೆಸಲು ಉಗ್ರರು ಸಂಚು ರೂಪಿಸಿದ್ದರು. ಇದಕ್ಕಾಗಿಯೇ ಈ ಎಲ್ಲಾ ತಯಾರಿಗಳನ್ನೂ ಮಾಡಿಕೊಂಡಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಶಿಬಿರದಲ್ಲಿ ಹಲವು ತಜ್ಞರು ಹಾಗೂ ಸೇನಾ ಸಿಬ್ಬಂದಿಗಳು ತರಬೇತಿಗಳನ್ನು ನೀಡುತ್ತಾರೆ. ಈ ವರ್ಷ ಮೇ 27 ಮತ್ತು 29 ರ ನಡುವೆ ಶಿಬಿರವನ್ನು ನಡೆಸಲಾಗಿದ್ದು, ಇಲ್ಲಿ ಮಹಿಳೆಯರು ಮತ್ತು ಮಕ್ಕಳಿಗೂ ತರಬೇತಿ ನೀಡಲಾಗುತ್ತದೆ. ಶಿಬಿರದಲ್ಲಿ ಪಾಲ್ಗೊಳ್ಳುವವರು ಬ್ರಹ್ಮಗಿರಿ ಬೆಟ್ಟಗಳ ಅಡಿಯಲ್ಲಿ ಉಳಿದುಕೊಂಡು ತಮ್ಮ ಆಹಾರಗಳನ್ನು ತಾವೇ ತಯಾರಿಸಿಕೊಳ್ಲಬೇಕಿತ್ತು. ಟ್ರೆಕ್ಕಿಂಗ್ ಹಾಗೂ ಇತರೆ ಹೆಚ್ಚುವರಿ ಚಟುವಟಿಕೆಗಳಿಗೆ ಭಾಗವಹಿಸುವವರು ರೂ.2,000 ನೀಡಬೇಕಿತ್ತು ಎಂಬ ಮಾಹಿತಿಗಳು ಇದೀಗ ತಿಳಿದುಬಂದಿದೆ.

ಈ ನಡುವೆ ರಾಷ್ಟ್ರೀಯ ತನಿಖಾ ಸಂಸ್ಥೆಯು ಹೋಂಸ್ಟೇ ಮಾಲೀಕರ ವಿಚಾರಣೆಯನ್ನು ಆರಂಭಿಸಿದ್ದು, ಇಬ್ಬರು ಆರೋಪಿಗಳ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದೆ ಎಂದು ವರದಿಗಳಿಂದ ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com