ಮೃತದೇಹ ಸಾಗಿಸಲು ಹಣವಿಲ್ಲ: ಪತ್ನಿಯ ಶವ ಗೋಣಿಚೀಲದಲ್ಲಿರಿಸಿ, ಹೊತ್ತುಕೊಂಡು ನಡೆದ ಪತಿ!

ಮೃತದೇಹ ಸಾಗಿಸಲು ಹಣವಿಲ್ಲದ ಕಾರಣ ಪತಿಯೊಬ್ಬ ಪತ್ನಿಯ ಶವವನ್ನು ಗೋಣಿಚೀಲದಲ್ಲಿರಿಸಿ ಅಂತ್ಯಸಂಸ್ಕಾರ ನಡೆಸಿರುವ ಹೃದಯ ವಿದ್ರಾವಕ ಘಟನೆ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮೈಸೂರು: ಮೃತದೇಹ ಸಾಗಿಸಲು ಹಣವಿಲ್ಲದ ಕಾರಣ ಪತಿಯೊಬ್ಬ ಪತ್ನಿಯ ಶವವನ್ನು ಗೋಣಿಚೀಲದಲ್ಲಿರಿಸಿ ಅಂತ್ಯಸಂಸ್ಕಾರ ನಡೆಸಿರುವ ಹೃದಯ ವಿದ್ರಾವಕ ಘಟನೆ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನಲ್ಲಿ ನಡೆದಿದೆ.

ಕಡು ಬಡತನದಲ್ಲಿ ಜೀವನ ಸಾಗಿಸುತ್ತಿದ್ದ ಮಂಡ್ಯ ತಾಲೂಕಿನ ಮಳವಳ್ಳಿಯ ಕಾಗೇಪುರದ ಅಲೆಮಾರಿ ದಂಪತಿ ಚಿಂದಿ ಆಯುವ ಕೆಲಸ ಮಾಡುತ್ತಿದ್ದರು. ರವಿ ಮತ್ತು ಅವರ ಪತ್ನಿ ಕಾಳಮ್ಮ (26) ಯಳಂದೂರಿನ ಕಾನಾತನಹಳ್ಳಿಗೆ ಬಂದು ಜೀವನೋಪಾಯಕ್ಕಾಗಿ ತ್ಯಾಜ್ಯ ಪ್ಲಾಸ್ಟಿಕ್ ಸಂಗ್ರಹಿಸುತ್ತಿದ್ದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಪಾಳುಬಿದ್ದ ಮನೆಯಲ್ಲಿ ಇಬ್ಬರೂ ವಾಸಿಸುತ್ತಿದ್ದರು. ಮಂಗಳವಾರ ರಾತ್ರಿ ಕಾಳಮ್ಮ ಅವರು ಇದ್ದಕ್ಕಿದ್ದಂತೆ ಅಸ್ವಸ್ಥಗೊಂಡು ಕೊನೆಯುಸಿರೆಳೆದಿದ್ದಾರೆ.

ಸ್ಥಳಕ್ಕೆ ಬಂದಿರುವುದು ಹೊಸದ್ದಾಗಿದ್ದರಿಂದ ಸಾಲ ಮಾಡಲು ರವಿ ಅವರಿಗೆ ಸಾಧ್ಯವಾಗಿಲ್ಲ. ಬೇರೆ ದಾರಿಯಿಲ್ಲದೆ ತ್ಯಾಜ್ಯವಿದ್ದ ಗೋಣಿ ಚೀಲವನ್ನು ಖಾಲಿ ಮಾಡಿ, ಶವವನ್ನು ಅದರಲ್ಲಿರಿಸಿ ಹೆಗಲ ಮೇಲೆ ಹೊತ್ತು ಸುವರ್ಣಾವತಿ ತೊಟ್ಟಿಯ ಬಳಿ ಅಂತಿಮ ಸಂಸ್ಕಾರ ನೆರವೇರಿಸಲು ಮುಂದಾಗಿದ್ದಾನೆ.

ಈ ವೇಳೆ ಸ್ಥಳೀಯ ಅಂಗಡಿಯ ಮಾಲೀಕ ವೀರಭದ್ರಯ್ಯ ಎಂಬುವವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ರವಿ ತನ್ನ ಪತ್ನಿಯನ್ನು ಹತ್ಯೆ ಮಾಡಿದ್ದು, ಕೊಲೆಯನ್ನು ಮರೆಮಾಚಲು ಪತ್ನಿಯ ಅಂತ್ಯಸಂಸ್ಕಾರ ನೆರವೇರಿಸುತ್ತಿದ್ದಾನೆಂದು ಸ್ಥಳೀಯರು ಶಂಕಿಸಿದ್ದಾರೆ.

ಇನ್ನು ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದರು.

ಜಿಲ್ಲಾಸ್ಪತ್ರೆಯಲ್ಲಿ ಕಾಳಮ್ಮ ಅವರ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಇದೀಗ ರವಿಯನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.

ಮರಣೋತ್ತರ ಪರೀಕ್ಷೆ ಬಳಿಕ ಯಳಂದೂರು ಪಟ್ಟಣ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಲ್ಲೇಶ್ ಹಾಗೂ ಪಿಎಸ್ ಐ ಕರಿ ಬಸಪ್ಪ ಅವರು ಪೊಲೀಸರ ಸಮ್ಮುಖದಲ್ಲಿ ಕರಿಪುರ ಬಳಿಯ ಸ್ಮಶಾನದಲ್ಲಿ ಅಂತ್ಯಕ್ರಿಯೆ ನೆರವೇರಿಸಲು ವ್ಯವಸ್ಥೆ ಮಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com