ಭಾರತದ ಪ್ರಥಮ 3ಡಿ ಬಯೋಪ್ರಿಂಟಿಂಗ್ ಉತ್ಕೃಷ್ಟತಾ ಕೇಂದ್ರಕ್ಕೆ ಸಚಿವ ಅಶ್ವತ್ಥ ನಾರಾಯಣ ಚಾಲನೆ
ಭಾರತೀಯ ವಿಜ್ಞಾನ ಸಂಸ್ಥೆ ಮತ್ತು ಸೆಲ್‌ಲಿಂಕ್ ಕಂಪನಿಗಳ ಸಹಯೋಗದಲ್ಲಿ ಐಐಎಸ್ಸಿಯಲ್ಲಿ ಸ್ಥಾಪಿಸಿರುವ ಭಾರತದ ಪ್ರಪ್ರಥಮ 3ಡಿ ಬಯೋಪ್ರಿಂಟಿಂಗ್ ಉತ್ಕೃಷ್ಟತಾ ಕೇಂದ್ರಕ್ಕೆ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಸಿ.ಎನ್ ಅಶ್ವತ್ಥ ನಾರಾಯಣ ಇಂದು ಚಾಲನೆ ನೀಡಿದರು.
Published: 09th December 2022 02:09 PM | Last Updated: 09th December 2022 05:10 PM | A+A A-

ಡಾ.ಸಿ.ಎನ್. ಅಶ್ವತ್ಥ ನಾರಾಯಣ ಮತ್ತಿತರರು
ಬೆಂಗಳೂರು: ಭಾರತೀಯ ವಿಜ್ಞಾನ ಸಂಸ್ಥೆ ಮತ್ತು ಸೆಲ್‌ಲಿಂಕ್ ಕಂಪನಿಗಳ ಸಹಯೋಗದಲ್ಲಿ ಐಐಎಸ್ಸಿಯಲ್ಲಿ ಸ್ಥಾಪಿಸಿರುವ ಭಾರತದ ಪ್ರಪ್ರಥಮ 3ಡಿ ಬಯೋಪ್ರಿಂಟಿಂಗ್ ಉತ್ಕೃಷ್ಟತಾ ಕೇಂದ್ರಕ್ಕೆ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಸಿ.ಎನ್ ಅಶ್ವತ್ಥ ನಾರಾಯಣ ಇಂದು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ವೈದ್ಯಕೀಯ ಮತ್ತು ಆರೋಗ್ಯ ಸೇವೆಗಳ ಕ್ಷೇತ್ರದಲ್ಲಿ ಈಗ ಅಂಗಾಂಶಗಳು ಮತ್ತು ಜೀವಕೋಶಗಳನ್ನು ಆಧರಿಸಿದ ಚಿಕಿತ್ಸೆಗಳು ಮುಂಚೂಣಿಗೆ ಬರುತ್ತಿದ್ದು, ಇವು ಕ್ರಾಂತಿಕಾರಕ ಬದಲಾವಣೆಗಳನ್ನು ತರುತ್ತಿವೆ. ಮುಂಬರುವ ವರ್ಷಗಳಲ್ಲಿ ಆಯಾ ವ್ಯಕ್ತಿಗಳ ಶರೀರ ಸ್ವಭಾವವನ್ನು ಆಧರಿಸಿ, ರೋಗಗಳನ್ನು ಗುಣಪಡಿಸುವಂತಹ ನಿರ್ದಿಷ್ಟ ಬಗೆಯ ಚಿಕಿತ್ಸಾ ಕ್ರಮಗಳು ಜನಪ್ರಿಯವಾಗಲಿದೆ. ಇದರಲ್ಲಿ 3ಡಿ ಬಯೋಪ್ರಿಂಟಿಂಗ್ ಮಹತ್ತರ ಪಾತ್ರ ವಹಿಸಲಿದೆ ಎಂದರು.
ಈ ಉತ್ಕೃಷ್ಟತಾ ಕೇಂದ್ರವು ಆಧುನಿಕ ಚಿಕಿತ್ಸಾ ಕ್ರಮಗಳಿಗೆ ಸಂಬಂಧಿಸಿದ ಸಂಶೋಧನಾ ಉಪಕ್ರಮಗಳನ್ನು ಪರಿಚಯಿಸಲಿದೆ. ಜತೆಗೆ ಆರೋಗ್ಯಸೇವೆಗಳ ಕ್ಷೇತ್ರದಲ್ಲಿರುವ ವೃತ್ತಿಪರರು ಹಾಗೂ ಉಳಿದವರಿಗೆ ವೈಜ್ಞಾನಿಕ ತರಬೇತಿ ಇಲ್ಲಿ ಸಿಗಲಿದೆ. 3ಡಿ ಬಯೋಪ್ರಿಂಟಿಂಗ್ ತಂತ್ರಜ್ಞಾನದ ಬಳಕೆಯನ್ನು ಪ್ರಚುರಪಡಿಸಲು ಭಾರತೀಯ ವಿಜ್ಞಾನ ಸಂಸ್ಥೆ ಮತ್ತು ಅಗತ್ಯವಿರುವ ಉಳಿದೆಡೆಗಳಲ್ಲಿ ಕಾರ್ಯಾಗಾರಗಳನ್ನು ಕೂಡ ಈ ಕೇಂದ್ರವು ಹಮ್ಮಿಕೊಳ್ಳಲಿದೆ ಎಂದು ಅವರು ತಿಳಿಸಿದರು.
Glad to be a part of inauguration of the IISc-CELLINK Centre of Excellence(CoE) in 3D Bioprinting.
— Dr. Ashwathnarayan C. N. (@drashwathcn) December 9, 2022
CoE is 1st of its kind in the sub-continent, housed in the Centre for BioSystems Science & Engineering(BSSE) at @iiscbangalore, focusing on advancing research using 3D bioprinting. pic.twitter.com/qMSPw7U2GA
ಜೈವಿಕ ತಂತ್ರಜ್ಞಾನ, ಸಂಶೋಧನೆ ಮತ್ತು ಅಭಿವೃದ್ಧಿಗಳ ರಾಜಧಾನಿಯಾಗಿ ಬೆಂಗಳೂರು ಪ್ರತಿಷ್ಠಾಪಿತವಾಗಿದೆ. ಈ ಉತ್ಕೃಷ್ಟತಾ ಕೇಂದ್ರದಲ್ಲಿ ಟಿಶ್ಯೂ ಎಂಜಿನಿಯರಿಂಗ್, ಔಷಧಗಳ ಆವಿಷ್ಕಾರ, ಮೆಟೀರಿಯಲ್ ಸೈನ್ಸ್‌ನ ಬೆಳವಣಿಗೆ ಸುಗಮವಾಗಿ ನಡೆಯಲಿದೆ. ಇದರಿಂದಾಗಿ ದೇಶದ ಆರೋಗ್ಯಸೇವೆಗಳ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳಾಗಲಿವೆ. ಇದರಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯ ಬಯೋಸಿಸ್ಟಮ್ಸ್ ಸೈನ್ಸ್ ಅಂಡ್ ಎಂಜಿನಿಯರಿಂಗ್ ಕೇಂದ್ರವು ಸಕ್ರಿಯ ಪಾತ್ರ ವಹಿಸಲಿದೆ ಎಂದು ಸಚಿವರು ನುಡಿದರು.
ಕಾರ್ಯಕ್ರಮದಲ್ಲಿ ಐಐಎಸ್ಸಿ ನಿರ್ದೇಶಕ ಪ್ರೊ.ಗೋವಿಂದನ್ ರಂಗರಾಜನ್ ಮತ್ತಿತರರು ಉಪಸ್ಥಿತರಿದ್ದರು.