ಬೆಂಗಳೂರು: ದಂಪತಿಯಿಂದ ಹಣ ವಸೂಲಿ, ಇಬ್ಬರು ಹೊಯ್ಸಳ ಗಸ್ತು ಪೊಲೀಸ್ ಅಮಾನತು

ರಾತ್ರಿ ವೇಳೆ ಓಡಾಡುತ್ತಿದ್ದ ದಂಪತಿಯಿಂದ ಹಣ ವಸೂಲಿ ಆರೋಪದ ಮೇರೆಗೆ ಸಂಪಿಗೆ ಹಳ್ಳಿ ಪೊಲೀಸ್ ಠಾಣೆಯ ಹೊಯ್ಸಳ ವಾಹನದ  ಇಬ್ಬರು ಕಾನ್ ಸ್ಟೆಬಲ್ ಗಳನ್ನು ಅಮಾನತು ಮಾಡಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಇಲ್ಲಿನ ದಂಪತಿಯಿಂದ ಹಣ ವಸೂಲಿ ಮಾಡಿದ ಆರೋಪದ ಮೇಲೆ ಶುಕ್ರವಾರ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.

ಹೆಡ್ ಕಾನ್‌ಸ್ಟೆಬಲ್ ರಾಜೇಶ್ ಮತ್ತು ಕಾನ್‌ಸ್ಟೆಬಲ್ ನಾಗೇಶ್ ನಗರದ ಸಂಪಿಗೆಹಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿಯಾಗಿದ್ದು, ಇವರು ಗಸ್ತು ತಿರುಗುತ್ತಿದ್ದರು ಎನ್ನಲಾಗಿದೆ.

ದಂಪತಿ ಬೆಂಗಳೂರು ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ಅವರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಡಿಸೆಂಬರ್ 8 ರಂದು ಕಾರ್ತಿಕ್ ಮತ್ತು ಅವರ ಪತ್ನಿ 12.30ಕ್ಕೆ ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗವಹಿಸಿ ಮಾನ್ಯತಾ ಟೆಕ್ ಪಾರ್ಕ್ ಆವರಣದಲ್ಲಿರುವ ತಮ್ಮ ನಿವಾಸಕ್ಕೆ ವಾಪಸಾಗುತ್ತಿದ್ದರು. ಆಗ ಆರೋಪಿ ಪೊಲೀಸರು ದಂಪತಿಯನ್ನು ತಡೆದು ರಾತ್ರಿ 11 ಗಂಟೆಯ ನಂತರ ಈ ಪ್ರದೇಶದಲ್ಲಿ ಓಡಾಡಬಾರದು ಎಂದು ಹೇಳಿದ್ದಾರೆ. ಈ ಬಗ್ಗೆ ಪ್ರಶ್ನಿಸಿ ದಂಪತಿಗೆ ಕಿರುಕುಳ ನೀಡಿದ್ದರು.

ಗುರುತಿನ ಚೀಟಿಯನ್ನು ಕೇಳಿದಾಗ, ದಂಪತಿ ತಮ್ಮ ಮೊಬೈಲ್‌ನಲ್ಲಿರುವ ತಮ್ಮ ಆಧಾರ್ ಕಾರ್ಡ್‌ಗಳ ಚಿತ್ರಗಳನ್ನು ತೋರಿಸಿದ್ದಾರೆ. ಈ ವೇಳೆ ಪೊಲೀಸರು ಅವರ ಮೊಬೈಲ್ ಕಸಿದು 3 ಸಾವಿರ ರೂ. ನೀಡುವಂತೆ ಬೇಡಿಕೆಯಿಟ್ಟಿದ್ದಾರೆ.

ಹಣ ಪಾವತಿಸಲು ವಿಫಲವಾದರೆ 'ಗಂಭೀರ ಪರಿಣಾಮಗಳನ್ನು' ಎದುರಿಸಬೇಕಾಗುತ್ತದೆ ಎಂದು ಅವರು ದಂಪತಿಗೆ ಬೆದರಿಕೆ ಹಾಕಿದ್ದರು. ಕ್ಯೂಆರ್ ಕೋಡ್ ಬಳಸಿ ದಂಪತಿ 1,000 ರೂಪಾಯಿ ಪಾವತಿ ಮಾಡಿ ಮನೆಗೆ ತಲುಪಿದ್ದರು. ನಂತರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದು, ಇಲಾಖಾ ತನಿಖೆಗೆ ಆದೇಶಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com