
ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಕಾಡಾನೆ ದಾಳಿಯಿಂದ ಸಾವಿಗೀಡಾದವರ ಕುಟುಂಬಕ್ಕೆ ನೀಡುವ ಪರಿಹಾರವನ್ನು ದ್ವಿಗುಣಗೊಳಿಸಲು ಸರ್ಕಾರ ನಿರ್ಧರಿಸಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಭಾನುವಾರ ನಡೆದ ಸಭೆಯಲ್ಲಿ ಕಾಡಾನೆ ದಾಳಿಯಿಂದ ಸಾವಿಗೀಡಾದವರ ಕುಟುಂಬಕ್ಕೆ ನೀಡುವ ಪರಿಹಾರದ ಮೊತ್ತವನ್ನು ₹ 7.5 ಲಕ್ಷದಿಂದ ₹ 15 ಲಕ್ಷಕ್ಕೆ ಹೆಚ್ಚಿಸಲು ನಿರ್ಧರಿಸಲಾಯಿತು.
ಸಭೆಯಲ್ಲಿ ಅಬಕಾರಿ ಮತ್ತು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಹಾಗೂ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು ಎಂದು ಮುಖ್ಯಮಂತ್ರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
ಆನೆ ದಾಳಿಯಿಂದ ಶಾಶ್ವತ ಅಂಗವಿಕಲತೆಗೆ ಒಳಗಾಗುವವರಿಗೆ ಈಗಿರುವ ₹ 5 ಲಕ್ಷದಿಂದ ₹ 10 ಲಕ್ಷ, ಭಾಗಶಃ ಅಂಗವೈಕಲ್ಯಕ್ಕೆ ₹ 2.5 ಲಕ್ಷದಿಂದ ₹ 5 ಲಕ್ಷ, ದಾಳಿಯಿಂದ ಗಾಯಗೊಂಡವರಿಗೆ ₹ 30 ಸಾವಿರದಿಂದ ₹ 60 ಸಾವಿರದವರೆಗೆ ಪರಿಹಾರ ನೀಡಲು ಸಭೆ ನಿರ್ಧರಿಸಿತು.
ಇದನ್ನೂ ಓದಿ: ಮಡಿಕೇರಿ: ಕಾಡಾನೆ ದಾಳಿಗೆ ಬಡ ದಿನಗೂಲಿ ಸಾವು
ಆಸ್ತಿ ಹಾನಿಗೆ ಸಂಬಂಧಿಸಿದಂತೆ ಪರಿಹಾರವನ್ನು ₹ 10,000 ದಿಂದ ₹ 20,000 ಕ್ಕೆ ಹೆಚ್ಚಿಸಲು ನಿರ್ಧರಿಸಲಾಯಿತು. ಇದೇ ವೇಳೆ ಶಾಶ್ವತ ಅಂಗವಿಕಲತೆಗೆ ಒಳಗಾದವರಿಗೆ ಮಾಸಿಕ ಪಿಂಚಣಿಯನ್ನು ₹ 2,000 ದಿಂದ ₹ 4,000 ಗಳಿಗೆ ಹೆಚ್ಚಿಸಲಾಗಿದೆ. ಬೆಳೆ ಹಾನಿಗೆ ಪಾವತಿಸಿದ ಮೊತ್ತವೂ ದ್ವಿಗುಣಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.
ಸಕಲೇಶಪುರ-ಬೇಲೂರು ಪ್ರದೇಶದಲ್ಲಿ ಅನಾಹುತ ಸೃಷ್ಟಿಸುತ್ತಿದ್ದ ಎಂಟು ಆನೆಗಳನ್ನು ಸೆರೆಹಿಡಿಯಲು ಮತ್ತು ಸೆರೆಹಿಡಿದ ಆನೆಗಳ ಮೇಲೆ ನಿಗಾ ವಹಿಸಲು ರೇಡಿಯೋ ಕಾಲರ್ ಮಾಡಲು ಅನುಮತಿ ನೀಡಲಾಗಿದೆ. ಈಗಾಗಲೇ 23 ಕಾಡಾನೆಗಳ ಚಲನವಲನದ ಮೇಲೆ ನಿಗಾ ಇಡಲು ರೇಡಿಯೋ ಕಾಲರ್ ಅಳವಡಿಸಲಾಗಿದೆ ಎಂದು ಅದು ಹೇಳಿದೆ.