ಗಡಿ ವಿವಾದ: ಅನುಮತಿ ನಿರಾಕರಣೆ ಹಿನ್ನೆಲೆ ಎಂಇಎಸ್'ನ ಮಹಾಮೇಳಾವ್ ರದ್ದು, ಪ್ರತಿಭಟನೆಗಿಳಿದ ಎಂಇಎಸ್
ಬೆಳಗಾವಿ: ವಿಧಾನ ಮಂಡಲ ಚಳಿಗಾಲ ಅಧಿವೇಶನದಂದು ಕರ್ನಾಟಕ ಸರ್ಕಾರಕ್ಕೆ ಸಡ್ಡು ಹೊಡೆಯಲು ಮಹಾರಾಷ್ಟ್ರ ಏಕೀಕರಣ ಸಮಿತಿ ಆಯೋಜಿಸಿದ್ದ ಮರಾಠಿ ಮಹಾಮೇಳಾವಕ್ಕೆ ಪೊಲೀಸರು ಅನುಮತಿ ನಿರಾಕರಿಸಿದ್ದು, ಸೋಮವಾರ ನಡೆಯಬೇಕಿದ್ದ ಮಹಾಮೇಳಾವ ರದ್ದುಗೊಂಡಿದೆ.
ನಗರದ ವ್ಯಾಕ್ಸಿನ್ ಡಿಪೋ ಮೈದಾನದಲ್ಲಿ ಹಮ್ಮಿಕೊಂಡಿದ್ದ ಮಹಾಮೇಳಾವ್ ವೇದಿಕೆಯನ್ನು ತೆರವುಗೊಳಿಸಲಾಯಿತು. ಎಡಿಜಿಪಿ ಅಲೋಕ ಕುಮಾರ್ ಹಾಗೂ ಬೆಳಗಾವಿ ನಗರ ಡಿಸಿಪಿ ರವೀಂದ್ರ ಗಡಾದಿ ಸ್ಥಳಕ್ಕೆ ಭೇಟಿ ನೀಡಿ ವೇದಿಕೆಯನ್ನು ತೆರವುಗೊಳಿಸಿದರು. ಯಾವುದೇ ಸಭೆ ಸಮಾರಂಭ ಆಯೋಜಿಸದಂತೆ ತಾಕೀತು ಮಾಡಿದರು.
ನಗರದ ಹಲವು ಪ್ರದೇಶಗಳಲ್ಲಿ ಸೋಮವಾರ ಕಲಾಂ 144 ನಿಷೇಧಾಜ್ಞೆ ಜಾರಿ ಮಾಡಿದ್ದರಿಂದ ಸಭೆ ಸಮಾರಂಭಗಳನ್ನು ನಡೆಸಲು ಅವಕಾಶವಿಲ್ಲ. ಹೀಗಾಗಿ ಎಂಇಎಸ್ ಆಯೋಜಿಸಿದ್ದ ಮಹಾಮೇಳಾವಕ್ಕೆ ಬ್ರೇಕ್ ಬಿದ್ದಂತಾಗಿದೆ.
ಗಡಿಯೊಳಗೆ ನುಗ್ಗಲು ಎಂಇಎಸ್ ಯತ್ನ: ಹಿಮ್ಮೆಟ್ಟಿಸಿದ ಪೊಲೀಸರು
ಮಹಾಮೇಳಾವ್ ರದ್ದುಗೊಂಡ ಹಿನ್ನೆಲೆಯಲ್ಲಿ ಗಡಿಯೊಳಗೆ ನುಗ್ಗಲು ಮಹಾರಾಷ್ಟ್ರ ವಿಕಾಸ ಅಘಾಡಿ ಕಾರ್ಯಕರ್ತರ ಯತ್ನಿಸಿದ್ದಾರೆ.
ನಿಪ್ಪಾಣಿ ತಾಲೂಕಿನ ಕೊಗನೊಳ್ಳಿ ಚೆಕ್ಪೋಸ್ಟ್ ಮೂಲಕ ಬೆಳಗಾವಿ ಗಡಿಯೊಳಗೆ ನುಗ್ಗಲು 500ಕ್ಕೂ ಅಧಿಕ ಕಾರ್ಯಕರ್ತರು ಯತ್ನಿಸಿದ್ದಾರೆ.
ಶಿವಸೇನೆ, ಎನ್'ಸಿಪಿ, ಕಾಂಗ್ರೆಸ್ ಪಕ್ಷದ ಧ್ವಜ ಹಿಡಿದು ಕಾರ್ಯಕರ್ತರು ಮುಂದೆ ಬಂದಿದ್ದು, ಈ ವೇಳೆ ಪೊಲೀಸರು ಪ್ರತಿಭಟನಾಕಾರರು ಹಿಮ್ಮೆಟ್ಟಿಸಿದರು.
ಪೊಲೀಸರು ತಡೆಯೊಡ್ಡಿದ ಹಿನ್ನೆಲೆಯಲ್ಲಿ ಬೆಳಗಾವಿ, ನಿಪ್ಪಾಣಿ, ಬೀದರ್, ಬಾಲ್ಕಿ ಸಂಯುಕ್ತ ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ನಾಡದ್ರೋಹಿ ಘೋಷಣೆ ಕೂಗಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ