ಸಂಜಯ್ ರಾವತ್
ಸಂಜಯ್ ರಾವತ್

ರಷ್ಯಾ-ಉಕ್ರೇನ್ ಯುದ್ಧಕ್ಕೆ ಮಧ್ಯಸ್ಥಿಕೆ ವಹಿಸುತ್ತಿರುವ ಮೋದಿ, ಮಹಾರಾಷ್ಟ್ರ-ಕರ್ನಾಟಕ ಗಡಿ ಸಮಸ್ಯೆ ನಿರ್ಲಕ್ಷಿಸುತ್ತಿದ್ದಾರೆ: ರಾವತ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಷ್ಯಾ-ಉಕ್ರೇನ್ ಯುದ್ಧದಲ್ಲಿ ಮಧ್ಯಸ್ಥಿಕೆ ವಹಿಸುತ್ತಿದ್ದು,  ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದದ ಬಗ್ಗೆ ಕಣ್ಣು ಮುಚ್ಚಿ ಕುಳಿತಿದ್ದಾರೆ. ಇದು ಉತ್ತಮ ರಾಜಕಾರಣಿಯ ಲಕ್ಷಣವಲ್ಲ ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಅವರು ಭಾನುವಾರ ಹೇಳಿದ್ದಾರೆ.
Published on

ಮುಂಬೈ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಷ್ಯಾ-ಉಕ್ರೇನ್ ಯುದ್ಧದಲ್ಲಿ ಮಧ್ಯಸ್ಥಿಕೆ ವಹಿಸುತ್ತಿದ್ದು,  ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದದ ಬಗ್ಗೆ ಕಣ್ಣು ಮುಚ್ಚಿ ಕುಳಿತಿದ್ದಾರೆ. ಇದು ಉತ್ತಮ ರಾಜಕಾರಣಿಯ ಲಕ್ಷಣವಲ್ಲ ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಅವರು ಭಾನುವಾರ ಹೇಳಿದ್ದಾರೆ.

ಪಕ್ಷದ ಮುಖವಾಣಿ ಸಾಮ್ನಾದಲ್ಲಿ ಅಂಕಣ ಬರೆದಿರುವ ರಾವತ್ ಅವರು, ಮಹಾರಾಷ್ಟ್ರ ಮತ್ತು ಕರ್ನಾಟಕದ ನಡುವಿನ ಗಡಿ ವಿವಾದವು ಮಾನವೀಯತೆಯ ಹೋರಾಟವಾಗಿದೆಯೇ ಹೊರತು ಎರಡು ರಾಜ್ಯಗಳ ಜನರು ಮತ್ತು ಸರ್ಕಾರಗಳ ನಡುವಿನ ಹೋರಾಟವಲ್ಲ ಎಂದು ಹೇಳಿದ್ದಾರೆ.

ರಾಜ್ಯಗಳ ಮರುಸಂಘಟನೆಯ ಸಮಯದಲ್ಲಿ ಅವರ ಇಚ್ಛೆಗೆ ವಿರುದ್ಧವಾಗಿ ಕರ್ನಾಟಕಕ್ಕೆ ಸೇರ್ಪಡೆಗೊಂಡ ಬೆಳಗಾವಿ ಮತ್ತು ಹತ್ತಿರದ ಪ್ರದೇಶಗಳಲ್ಲಿನ ಮರಾಠಿ ಮಾತನಾಡುವ ಜನಸಂಖ್ಯೆಯ ಹೋರಾಟವನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರ ಮತ್ತು ಸುಪ್ರೀಂ ಕೋರ್ಟ್ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಾಗದಿದ್ದರೆ, ಇನ್ನೆಲ್ಲಿ ನ್ಯಾಯ ಪಡೆಯಬೇಕು ಎಂದು ಪ್ರಶ್ನಿಸಿದ್ದಾರೆ.

"ಪ್ರಧಾನಿ ಮೋದಿ ಅವರು ರಷ್ಯಾ-ಉಕ್ರೇನ್ ಯುದ್ಧದಲ್ಲಿ ಮಧ್ಯಸ್ಥಿಕೆ ವಹಿಸುತ್ತಾರೆ, ಆದರೆ ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದದ ಬಗ್ಗೆ ಕಣ್ಣು ಮುಚ್ಚಿ ಕುಳಿತಿದ್ದಾರೆ. ಇದು ಉತ್ತಮ ರಾಜಕಾರಣಿಯ ಲಕ್ಷಣವಲ್ಲ ಎಂದಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಮಸ್ಯೆ ಪರಿಹಾರಕ್ಕೆ ಮುಂದಾಗಿರುವುದು ಒಳ್ಳೆಯದು, ಆದರೆ ಕೇಂದ್ರ ಸರ್ಕಾರ ತಟಸ್ಥ ನಿಲುವು ತೆಗೆದುಕೊಳ್ಳುತ್ತದೆಯೇ ಎಂಬುದು ಪ್ರಶ್ನೆಯಾಗಿದೆ, ಗಡಿ ವಿವಾದಕ್ಕೆ ಸಂಸತ್ತು ಪರಿಹಾರ ಕಂಡುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

"ಸುಪ್ರೀಂ ಕೋರ್ಟ್ ಪ್ರಕರಣವನ್ನು ಸಂಸತ್ತಿಗೆ ಮರುನಿರ್ದೇಶಿಸುತ್ತದೆ ಎಂದು ನಿರೀಕ್ಷಿಸುವ ಬದಲು, ಆದೇಶಕ್ಕೂ ಮೊದಲೇ ಸಂಸತ್ತು ಇದಕ್ಕೆ ಶೀಘ್ರವಾಗಿ ಪರಿಹಾರವನ್ನು ಕಂಡುಕೊಂಡರೆ ಏನಾಗುತ್ತದೆ ಎಂದು ಪ್ರಶ್ನಿಸಿದ್ದಾರೆ.

ಕರ್ನಾಟಕ ಸಿಎಂ ಬೊಮ್ಮಾಯಿ ಅವರು ಮಹಾರಾಷ್ಟ್ರದ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡುವ ಬದಲು ಬೆಳಗಾವಿಯ ಮರಾಠಿ ಭಾಷಿಕ ಜನರ ಸಂಘಟನೆಗಳು ಮತ್ತು ಮುಖಂಡರ ಜತೆ ಮಾತುಕತೆ ನಡೆಸಿ ವಿವಾದ ಬಗೆಹರಿಸಬೇಕಿತ್ತು ಎಂದಿದ್ದಾರೆ.

ಗಡಿ ವಿವಾದ ಕುರಿತು ಅಮಿತ್ ಶಾ ಕರೆದಿದ್ದ ಈ ವಿಷಯದ ಉಭಯ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯಲ್ಲಿ, ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ನಿರ್ಧರಿಸಲಾಗಿದೆ, ಇದು ಮಹಾರಾಷ್ಟ್ರದ ಪ್ರದೇಶಗಳ ಮೇಲೆ ಹಕ್ಕು ಸಾಧಿಸುವ ಬೊಮ್ಮಾಯಿ ಅವರ ಆಕ್ರಮಣಕಾರಿ ನಿಲುವನ್ನು ಎದುರಿಸಲು ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ದುರ್ಬಲರಾಗಿದ್ದಾರೆ ಎಂಬುದನ್ನು ಸ್ಪಷ್ಟಪಡಿಸುತ್ತಿದೆ ಎಂದು ಹೇಳಿದ್ದಾರೆ.

ಉತ್ತರ ಕರ್ನಾಟಕದ ಬೆಳಗಾವಿ ಮತ್ತು ಸುತ್ತಮುತ್ತಲಿನ ಗಡಿ ಪ್ರದೇಶಗಳು ಗಣನೀಯವಾಗಿ ಮರಾಠಿ ಮಾತನಾಡುವ ಜನಸಂಖ್ಯೆಯನ್ನು ಹೊಂದಿರುವುದರಿಂದ ಮಹಾರಾಷ್ಟ್ರ ರಾಜ್ಯವು ಈ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರ್ಪಡೆಗೊಳಿಸುವಂತೆ ಬಹಳ ಹಿಂದಿನಿಂದಲೂ ಆಗ್ರಹಿಸುತ್ತಿದೆ.

ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಕೆಲವು ಗ್ರಾಮಗಳು ಅಲ್ಲಿನ ಮೂಲ ಸೌಕರ್ಯಗಳ ಕೊರತೆಯಿಂದಾಗಿ ಕರ್ನಾಟಕದ ಜೊತೆ ಸೇರಲು ನಿರ್ಣಯವನ್ನು ಅಂಗೀಕರಿಸಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇತ್ತೀಚೆಗೆ ಹೇಳಿಕೆ ನೀಡಿದ್ದರು, ಈ ಹೇಳಿಕೆಯಿಂದಾಗಿ ಗಡಿ ವಿವಾದ ಮತ್ತೆ ಮರುಕಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com