ವಿಧಾನಸಭಾ ಚುನಾವಣೆ, ಗಡಿ ಗದ್ದಲ ನಡುವಲ್ಲೇ ನಾಳೆ ಬೆಳಗಾವಿ ಚಳಿಗಾಲ ಅಧಿವೇಶನ ಆರಂಭ

ಸಮೀಪಿಸುತ್ತಿರುವ ರಾಜ್ಯ ವಿಧಾನಸಭಾ ಚುನಾವಣೆ, ಗಡಿ ವಿವಾದದ ಕಿಡಿಯ ನಡುವಲ್ಲೇ ಕುಂದಾನಗರಿ ಬೆಳಗಾವಿಯ ಸುವರ್ಣಸೌಧದಲ್ಲಿ ಸೋಮವಾರದಿಂದ ವಿಧಾನಮಂಡಲದ ಉಭಯ ಸದನಗಳ ಚಳಿಗಾಲ ಅಧಿವೇಶನ ಆರಂಭವಾಗಲಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಸಮೀಪಿಸುತ್ತಿರುವ ರಾಜ್ಯ ವಿಧಾನಸಭಾ ಚುನಾವಣೆ, ಗಡಿ ವಿವಾದದ ಕಿಡಿಯ ನಡುವಲ್ಲೇ ಕುಂದಾನಗರಿ ಬೆಳಗಾವಿಯ ಸುವರ್ಣಸೌಧದಲ್ಲಿ ಸೋಮವಾರದಿಂದ ವಿಧಾನಮಂಡಲದ ಉಭಯ ಸದನಗಳ ಚಳಿಗಾಲ ಅಧಿವೇಶನ ಆರಂಭವಾಗಲಿದೆ.

ಚುನಾವಣೆಗೂ ಮುನ್ನ ಕೊನೆಯ ಅಧಿವೇಶನ ಇದಾಗಿದ್ದು, ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಈ ಅಧಿವೇಶನ ಅತ್ಯಂತ ಮಹತ್ವದ್ದಾಗಿದೆ,

ಡಿಸೆಂಬರ್ 30 ರವರೆಗಿನ 10 ದಿನಗಳ ಕಾಲ ಅಧಿವೇಶನ ನಡೆಯಲಿದ್ದು, ಈ ಸಂದರ್ಭದಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರ ಆರೋಪ-ಪ್ರತ್ಯಾರೋಪಗಳಿಗೆ ಈ ಅಧಿವೇಶನ ವೇದಿಕೆಯಾಗಲಿದೆ.

ಮುಂದಿನ ಬಜೆಟ್ ಅಧಿವೇಶನ ಕೇವಲ ನೆಪ ಮಾತ್ರ ನಡೆಯುವುದರಿಂದ ಬಹುತೇಕ ಈ ಅಧಿವೇಶನ ರಾಜಕೀಯ ಚಟುವಟಿಕೆಗಳಿಂದಾಗಿ ಮಹತ್ವ ಪಡೆದುಕೊಳ್ಳಲಿದೆ.

ವಿವಿಧ ಇಲಾಖೆಗಳಲ್ಲಿನ ಭ್ರಷ್ಟಾಚಾರ ಮತ್ತು ಹಗರಣಗಳು, ಮತದಾರರ ಮಾಹಿತಿ ಕಳ್ಳತನ, ಗಡಿ ವಿವಾದ ಮತ್ತು ಸರ್ಕಾರದ ವೈಫಲ್ಯಗಳು, ಕೋಮು ಗಲಭೆ ಮತ್ತು ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ, ಕಾನೂನು ಸುವ್ಯವಸ್ಥೆ, ಕಬ್ಬಿಗೆ ನ್ಯಾಯಯುತ ಮತ್ತು ಲಾಭದಾಯಕ ಬೆಲೆ (ಎಫ್‌ಆರ್‌ಪಿ) ಹೆಚ್ಚಳ ಸೇರಿದಂತೆ ಇತರೆ ರೈತರ ಬೇಡಿಕೆಗಳು ಸೇರಿದಂತೆ ಮುಂತಾದ ವಿಷಯಗಳನ್ನು ಹಿಡಿದು ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ಹರಿಹಾಯಲು ಸಿದ್ಧತೆ ನಡೆಸಿದೆ.

ಚುನಾವಣೆ ಸಮೀಪಿಸುತ್ತಿರುವ ಕಾರಣ, ವಿರೋಧ ಪಕ್ಷಗಳು ಆಡಳಿತದ ವಿಷಯದ ಬಗ್ಗೆ ಸರ್ಕಾರವನ್ನು ಗುರಿಯಾಗಿಸುವ ಸಾಧ್ಯತೆಯಿದೆ, 2018 ರ ಚುನಾವಣೆಗೆ ಮುಂಚಿತವಾಗಿ ಪ್ರಣಾಳಿಕೆಯಲ್ಲಿ ನೀಡಲಾಗಿದ್ದ ಭರವಸೆಗಳನ್ನು ಈಡೇರಿಸದೇ ಇರುವುದು, ಧಾರಾಕಾರ ಮಳೆ ಮತ್ತು ಪ್ರವಾಹದಿಂದಾಗಿ ಹಲವಾರು ನಗರ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯ ಸಮಸ್ಯೆಗಳು, ಎಸ್'ಸಿ, ಎಸ್'ಟಿ ಮೀಸಲಾತಿ ವಿಚಾರಗಳನ್ನು ವಿಪಕ್ಷಗಳು ಪ್ರಸ್ತಾಪಿಸುವ ಸಾಧ್ಯತೆಗಳಿವೆ.

ಪಂಚಮಸಾಲಿಗಳು ಮತ್ತು ಒಕ್ಕಲಿಗರಂತಹ ವಿವಿಧ ಸಮುದಾಯಗಳ ಮೀಸಲಾತಿ ಸಂಬಂಧಿತ ಬೇಡಿಕೆ, ರಾಜ್ಯದ ಆರ್ಥಿಕ ಸ್ಥಿತಿ ಹಾಗೂ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ವಿಷಯವೂ ಈ ಬಾರಿಗ ಅಧಿವೇಶನದಲ್ಲಿ ಚರ್ಚೆಗೆ ಬರುವ ಸಾಧ್ಯತೆ ಇದೆ.

ಈ ನಡುವೆ ಮಂಗಳೂರು ಬಾಂಬ್ ಸ್ಫೋಟ ಕುರಿತು ವಿಪಕ್ಷಗಳ ನಾಯಕರು ನೀಡಿದ್ದ ಹೇಳಿಕೆಯನ್ನಿಟ್ಟುಕೊಂಡು ಕಾಂಗ್ರೆಸ್ ವಿರುದ್ಧ ಹರಿಹಾಯಲು ಬಿಜೆಪಿ ಯೋಜನೆ ರೂಪಿಸುತ್ತಿದೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com