ಬೆಂಗಳೂರು ಭೂಸುಧಾರಣೆ ಕಾಯ್ದೆ ಕುರಿತು ಅಧಿವೇಶನದಲ್ಲಿ ಚರ್ಚೆ ನಡೆಸಲಾಗುವುದು: ಸ್ಪೀಕರ್ ಕಾಗೇರಿ
ಬೆಂಗಳೂರು ಭೂಸುಧಾರಣೆ ಕಾಯ್ದೆ, ಕನ್ನಡ ಸಮಗ್ರ ಅಭಿವೃದ್ಧಿ ವಿಧೇಯಕ ಮಂಡನೆಯಾಗಿವೆ. ಚಳಿಗಾಲ ಅಧಿವೇಶನ ವೇಳೆ ಚರ್ಚೆ ಮಾಡಿ, ಅಂಗೀಕಾರಕ್ಕೆ ಕ್ರಮ ಕೈಗೊಳ್ಳಳಾಗುತ್ತದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಹೇಳಿದ್ದಾರೆ.
Published: 13th December 2022 08:39 AM | Last Updated: 13th December 2022 12:17 PM | A+A A-

ಅಧಿವೇಶನದ ಸಿದ್ಧತೆ ಪರಿಶೀಲಿಸಿದ ಸ್ಪೀಕರ್ ಕಾಗೇರಿ.
ಬೆಳಗಾವಿ: ಬೆಂಗಳೂರು ಭೂಸುಧಾರಣೆ ಕಾಯ್ದೆ, ಕನ್ನಡ ಸಮಗ್ರ ಅಭಿವೃದ್ಧಿ ವಿಧೇಯಕ ಮಂಡನೆಯಾಗಿವೆ. ಚಳಿಗಾಲ ಅಧಿವೇಶನ ವೇಳೆ ಚರ್ಚೆ ಮಾಡಿ, ಅಂಗೀಕಾರಕ್ಕೆ ಕ್ರಮ ಕೈಗೊಳ್ಳಳಾಗುತ್ತದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಹೇಳಿದ್ದಾರೆ.
ಡಿಸೆಂಬರ್ 19ರಿಂದ 10 ದಿನಗಳ ಕಾಲ ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ನಡೆಯಲಿದ್ದು, ಅಧಿವೇಶನಕ್ಕೆ ಭರದ ಸಿದ್ಧತೆಗಳು ನಡೆಯುತ್ತಿವೆ.
ಈ ಸಿದ್ಧತೆಗಳನ್ನು ಖುದ್ದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರೇ ಸುವರ್ಣಸೌಧಕ್ಕೆ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದನ್ನೂ ಓದಿ: ಗಡಿ ವಿವಾದ: ರಾಜ್ಯ ಚಳಿಗಾಲ ಅಧಿವೇಶನದ ಮೊದಲ ದಿನ ಸಭೆ ನಡೆಸಲು ಎಂಇಎಸ್ ನಿರ್ಧಾರ
ಬಳಿಕ ಮಾತನಾಡಿದ ಕಾಗೇರಿಯವರು, ಬೆಂಗಳೂರಿನ ಹಿಂದಿನ ಅಧಿವೇಶನದಲ್ಲಿ ಈಗಾಗಲೇ ಮಂಡನೆಯಾಗಿರುವ ಬೆಂಗಳೂರು ಭೂಸುಧಾರಣಾ ವಿಧೇಯಕ ಮತ್ತು ಕನ್ನಡ ಸಮಗ್ರ ಅಭಿವೃದ್ಧಿ ಕುರಿತು ಈ ಬಾರಿಯ ಅಧಿವೇಶನದಲ್ಲಿ ಚರ್ಚೆ ನಡೆಯಲಿದೆ ಎಂದು ಹೇಳಿದರು.
ಚರ್ಚೆ ಮತ್ತು ಅನುಮೋದನೆಗೆ ತೆಗೆದುಕೊಳ್ಳಬೇಕಾದ ಆರು ಮಸೂದೆಗಳಲ್ಲಿ ನಾಲ್ಕು ಮಸೂದೆಗಳು ಹೊಸದಾಗಿವೆ ಕಲ್ಯಾಣ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ ಅಗತ್ಯವಾಗಿರುವುದರಿಂದ ಅದಕ್ಕೆ ಹೆಚ್ಚಿನ ಸಮಯ ಮೀಸಲಿಡಲಾಗುವುದು. ಮೊದಲ ದಿನ ಉಪಸಭಾಪತಿ ಆನಂದ್ ಮಾಮನಿ ಹಾಗೂ ಇತರ ವ್ಯಕ್ತಿಗಳ ನಿಧನಕ್ಕೆ ಸಂತಾಪ ಸೂಚಿಸಿ, ನಂತರ ಕಲಾಪ ಸಲಹಾ ಸಮಿತಿ ಸಭೆ ನಡೆಸಲಾಗುವುದು ಎಂದು ತಿಳಿಸಿದರು.
ಅಧಿವೇಶನದಲ್ಲಿ ಸಚಿವರು, ಶಾಸಕರ ಹಾಜರಾತಿ ಕಡ್ಡಾಯಕ್ಕೆ ಕ್ರಮ ವಹಿಸಲಾಗಿದೆ. ಅಧಿವೇಶನದಲ್ಲಿ ಪ್ರತಿಯೊಬ್ಬ ಶಾಸಕರು ಕಡ್ಡಾಯವಾಗಿ ಹಾಜರಾಗಬೇಕು. ಒಂದುವೇಳೆ ಸದನಕ್ಕೆ ಗೈರಾದರೆ ಪೂರ್ವಾನುಮತಿ ಪಡೆಯುವುದು ಕಡ್ಡಾಯ. ಹಿಂದಿನ ಅಧಿವೇಶನ ಸಮಯದಲ್ಲಿ, ಅಧಿವೇಶನಕ್ಕೆ ಹೋಗಲ್ಲ, ಅಲ್ಲೇನಿದೆ ಎಂಬ ಶಾಸಕರ ಹೇಳಿಕೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಹೀಗಾಗಿ ಸದನದ ಬಗ್ಗೆ ಹಗುರವಾಗಿ ಮಾತಾಡುವುದನ್ನು ನಾನು ಸಹಿವುಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: 10 ದಿನಗಳ ಚಳಿಗಾಲ ಅಧಿವೇಶನಕ್ಕೆ ಬೆಳಗಾವಿಯಲ್ಲಿ ಸಿದ್ಧತೆ
ಪ್ರಸಕ್ತ ಅಧಿವೇಶನದಲ್ಲಿ ಅತ್ಯುತ್ತಮ ಶಾಸಕ ಪ್ರಶಸ್ತಿ ನೀಡಲು ನಿರ್ಧರಿಸಿದ್ದೇವೆ. ಆದರೆ ಪ್ರಶಸ್ತಿ ಪ್ರಧಾನ ದಿನಾಂಕ, ಶಾಸಕರ ಹೆಸರು ಇನ್ನೂ ಅಂತಿಮವಾಗಿಲ್ಲ. ಕೊವಿಡ್ ನಿಯಂತ್ರಣಕ್ಕೆ ಬಂದಿರುವ ಹಿನ್ನೆಲೆ ಉಭಯ ಸದನದ ಕಲಾಪ ಮುಕ್ತವಾಗಿ ನಡೆಯಲಿದೆ. ಅಧಿವೇಶನ ವೀಕ್ಷಣೆಗೆ ಸಾರ್ವಜನಿಕರಿಗೂ ಮುಕ್ತ ಅವಕಾಶ ನೀಡಲಾಗುವುದು ಎಂದು ಹೇಳಿದರು.
ಈ ಹಿಂದೆ ವಿಧಾನಮಂಡಲ ಜಂಟಿ ಅಧಿವೇಶನದಲ್ಲಿ ಅತ್ಯುತ್ತಮ ಶಾಸಕ ಪ್ರಶಸ್ತಿಯನ್ನು ಘೋಷಿಸಲಾಗಿತ್ತು. ಈ ಪ್ರಶಸ್ತಿಯನ್ನು ಯಡಿಯೂರಪ್ಪ ಅವರು ನೀಡಿ ಗೌರವಿಸಲಾಗಿತ್ತು. ಈ ಪರಿಕಲ್ಪನೆ ಮರಳಿ ಬಂದಿದ್ದು, ಈ ಬಾರಿಯ ಅಧಿವೇಶನಲ್ಲಿ ಮತ್ತೊಬ್ಬ ಶಾಸಕರು ಬೆಳಗಾವಿಯಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆಂದು ತಿಳಿಸಿದರು.
ಇದೇ ವೇಳೆ ಕಾಗೇರಿಯವರು ಸಭೆಯಲ್ಲಿ ಶಾಸಕರು, ಸಚಿವರು ಮತ್ತು ಅಧಿಕಾರಿಗಳಿಗೆ ಊಟ, ವಸತಿ, ಭದ್ರತೆ ಮತ್ತು ಸಾರಿಗೆ ವ್ಯವಸ್ಥೆಗಳ ಸಿದ್ಧತೆಗಳನ್ನು ಪರಿಶೀಲಿಸಿದರು.
ಈ ವೇಳೆ ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ, ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದರ್ಹನ್ ಎಚ್ ವಿ, ಪೊಲೀಸ್ ಆಯುಕ್ತ ಡಾ.ಎಂ.ಬಿ.ಬೋರಲಿಂಗಯ್ಯ, ಎಸ್ಪಿ ಡಾ.ಸಂಜೀವ್ ಪಾಟೀಲ್ ಹಾಜರಿದ್ದರು.
ಇದನ್ನೂ ಓದಿ: ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಡಿಸೆಂಬರ್ 19 ರಿಂದ 29 ರವರೆಗೆ ಚಳಿಗಾಲದ ಅಧಿವೇಶನ
ಇದೇ ವೇಳೆ ಸಂಘಟನೆಗಳ ಪ್ರತಿಭಟನಾ ಸ್ಥಳವನ್ನು ಸುವರ್ಣಸೌಧದಿಂದ 1 ಕಿ.ಮೀ ದೂರದ ಬಸ್ತ್ವಾಡ ಗ್ರಾಮಕ್ಕೆ ಸ್ಥಳಾಂತರಿಸಲಾಗಿದೆ ಎಂದು ತಿಳಿದುಬಂದಿದೆ.
ಚುನಾವಣೆ ಘೋಷಣೆಯಾಗುವ ಮುನ್ನ ಸರಕಾರದ ಜಂಟಿ ಅಧಿವೇಶನ ಮತ್ತು ಬಜೆಟ್ ಅಧಿವೇಶನ ಮಾತ್ರ ಬಾಕಿ ಇದ್ದು, ಈ ನಡುವಲ್ಲೇ ಬೆಳಗಾವಿಯಲ್ಲಿ 10 ದಿನಗಳ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನ ಸರಕಾರಕ್ಕೆ ಮಹತ್ವದ್ದಾಗಿದೆ.
ಈ ಅಧಿವೇಶನಕ್ಕಾಗಿ ಎಲ್ಲಾ ಕೋವಿಡ್-19 ನಿಯಮಾವಳಿಗಳನ್ನು ತೆಗೆದುಹಾಕಲಾಗಿದೆ. ಹಿಂದಿನ ಅಧಿವೇಶನದಲ್ಲಿ 15,000 ಕ್ಕೂ ಹೆಚ್ಚು ಜನರು ವಿಧಾನಸೌಧಕ್ಕೆ ಭೇಟಿ ನೀಡಿದ್ದರಿಂದ, ಬೆಳಗಾವಿಯಲ್ಲೂ ಇದೇ ಸಂಖ್ಯೆಯ ಜನರನ್ನು ನಾವು ನಿರೀಕ್ಷಿಸುತ್ತಿದ್ದೇವೆ. ಸ್ಪಾಟ್ ಐಡಿ ಕಾರ್ಡ್‌ಗಳಿಗೆ ನಿಬಂಧನೆಗಳು ಇರುತ್ತವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.