ಕಬ್ಬಿನ ದರ ನಿಗದಿಗೆ ರೈತರ ಆಗ್ರಹ: ಮಂಡ್ಯ ಬಂದ್ ಯಶಸ್ವಿ
ಕಬ್ಬು ಬೆಳೆಗೆ ಟನ್‌ಗೆ 4,500 ರೂ.ಗೆ ನ್ಯಾಯಯುತ ಮತ್ತು ಲಾಭದಾಯಕ ಬೆಲೆ ನೀಡುವಂತೆ ಮತ್ತು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರೈತರು ಕರೆ ನೀಡಿದ್ದ ಮಂಡ್ಯ ಬಂದ್'ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು.
Published: 20th December 2022 08:20 AM | Last Updated: 20th December 2022 12:17 PM | A+A A-

ಪ್ರತಿಭಟನಾನಿರತ ರೈತರು.
ಮಂಡ್ಯ: ಕಬ್ಬು ಬೆಳೆಗೆ ಟನ್‌ಗೆ 4,500 ರೂ.ಗೆ ನ್ಯಾಯಯುತ ಮತ್ತು ಲಾಭದಾಯಕ ಬೆಲೆ ನೀಡುವಂತೆ ಮತ್ತು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರೈತರು ಕರೆ ನೀಡಿದ್ದ ಮಂಡ್ಯ ಬಂದ್'ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು.
ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರೈತ ಸಂಘಟನೆಗಳು ಎಂಟು ಗಂಟೆಗಳ ಕಾಲ ಮಂಡ್ಯ ಬಂದ್ ನಡೆಸಿದವು.
ಸರ್ ಎಂ ವಿಶ್ವೇಶ್ವರಯ್ಯ ಪ್ರತಿಮೆ ಎದುರು 45 ದಿನಗಳಿಂದ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿಗೆ ಸರಕಾರ ಸ್ಪಂದಿಸದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಇತರೆ ಸಂಘಟನೆಗಳು ಬಂದ್‌ಗೆ ಕರೆ ನೀಡಿದ್ದವು.
ಇದನ್ನೂ ಓದಿ: ಸಂದರ್ಶನ: ಕೃಷಿ ಇಲಾಖೆ ತಮ್ಮ ಜೊತೆಗಿದೆ ಎಂದು ರೈತರು ಭಾವಿಸಬೇಕು; ಸಚಿವ ಬಿ.ಸಿ.ಪಾಟೀಲ್
ಬಂದ್‌ನಿಂದಾಗಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಂಡಿತ್ತು. ಕಿಲೋಮೀಟರ್ ಉದ್ದಕ್ಕೂ ವಾಹನಗಳು ಸಂಚರಿಸಲು ಆಗದೆ ಸಿಲುಕಿಕೊಂಡಿದ್ದವು. ಈ ವೇಳೆ ಪೊಲೀಸರು ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗವನ್ನು ಹುಡುಕಬೇಕಾದ ಪರಿಸ್ಥಿತಿ ಎದುರಾಗಿತ್ತು.
ಮುಷ್ಕರ ನಿರತ ರೈತರು ಬ್ಯಾರಿಕೇಡ್‌ಗಳನ್ನು ಹಾಕಿ ರಸ್ತೆ ತಡೆದು ವಾಹನಗಳ ಮುಂದೆಯೇ ಮಲಗಿದರು. ಆಟೋರಿಕ್ಷಾ ಚಾಲಕರು ಮತ್ತು ಖಾಸಗಿ ಬಸ್ ನಿರ್ವಾಹಕರು ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದರಿಂದ ಅನೇಕರು ನಗರದ ಹೊರವಲಯದಲ್ಲಿ ಬಸ್‌ಗಳನ್ನು ನಿಲ್ಲಿಸುವ ಪರಿಸ್ಥಿತಿ ಎದುರಾಗಿತ್ತು, ರಸ್ತೆಗಳ ಉದ್ದಕ್ಕೂ ಮೆರವಣಿಗೆ ನಡೆಸುತ್ತಿರುವುದು ಕಂಡುಬಂದಿತು.
ಮುಂಜಾನೆ 7 ಗಂಟೆಯಿಂದಲೇ ಅನೇಕ ಹೋಟೆಲ್‌ಗಳು, ವಾಣಿಜ್ಯ ಕೇಂದ್ರಗಳು ಮತ್ತು ಚಿತ್ರಮಂದಿರಗಳನ್ನು ಮುಚ್ಚಿದ್ದರಿಂದ ಮಂಡ್ಯ ಸಂಪೂರ್ಣವಾಗಿ ಸ್ತಬ್ಧಗೊಂಡಿತ್ತು, ಅನೇಕ ಸಂಘಟನೆಗಳು ಪ್ರತಿಭಟನೆಗೆ ತಮ್ಮ ಬೆಂಬಲವನ್ನು ಘೋಷಿಸಿದವು. ಆದರೆ, ಶಿಕ್ಷಣ ಸಂಸ್ಥೆಗಳು ಮತ್ತು ಬ್ಯಾಂಕ್‌ಗಳು ಎಂದಿನಂತೆ ಕಾರ್ಯನಿರ್ವಹಿಸಿದವು.