ಹಾಸನ: ಮಿಕ್ಸರ್ ಗ್ರೈಂಡರ್ ಸ್ಫೋಟ, ಕೊರಿಯರ್ ಕಚೇರಿ ಮಾಲೀಕನಿಗೆ ಗಂಭೀರ ಗಾಯ
ಮಿಕ್ಸರ್ ಗ್ರೈಂಡರ್ ಸ್ಫೋಟಗೊಂಡ ಪರಿಣಾಮ ಕೊರಿಯರ್ ಕಚೇರಿಯ ಮಾಲೀಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಲ್ಲಿನ ಕುವೆಂಪುನಗರ ಬಡಾವಣೆಯಲ್ಲಿ ಸೋಮವಾರ ಸಂಜೆ ನಡೆದಿದೆ.
Published: 26th December 2022 11:26 PM | Last Updated: 26th December 2022 11:26 PM | A+A A-

ಕೊರಿಯರ್ ಕಚೇರಿಯ ಚಿತ್ರ
ಹಾಸನ: ಮಿಕ್ಸರ್ ಗ್ರೈಂಡರ್ ಸ್ಫೋಟಗೊಂಡ ಪರಿಣಾಮ ಕೊರಿಯರ್ ಕಚೇರಿಯ ಮಾಲೀಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಲ್ಲಿನ ಕುವೆಂಪುನಗರ ಬಡಾವಣೆಯಲ್ಲಿ ಸೋಮವಾರ ಸಂಜೆ ನಡೆದಿದೆ. ಕೊರಿಯರ್ ಮೂಲಕ ಬಂದಿದ್ದ ಹೊಸ ಮಿಕ್ಸರ್ ಟೆಸ್ಟ್ ಮಾಡುತ್ತಿರುವಾಗ ಅದು ಸ್ಫೋಟಗೊಂಡಿದೆ. ಸ್ಫೋಟದ ರಭಸಕ್ಕೆ ಕೊರಿಯರ್ ಕಚೇರಿ ಮಾಲೀಕ ಶಶಿಯ ಬಲಗೈ ನಜ್ಜುಗುಜ್ಜಾಗಿದ್ದು, ಕಚೇರಿಯ ಕಿಟಕಿಗಳು ಮುರಿದು ಬಿದ್ದಿವೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಪರಿಶೀಲನೆ ನಡೆಸಿದರು.
ಎರಡು ದಿನಗಳ ಹಿಂದೆ ಗ್ರಾಹಕರೊಬ್ಬರು ಹಿಂತಿರುಗಿಸಿದ್ದ ಪಾರ್ಸೆಲ್ ತೆರೆಯುವಾಗ ಸ್ಫೋಟ ಸಂಭವಿಸಿದೆ. ಪಾರ್ಸೆಲ್ ವಾಪಸ್ ಮಾಡಿದ ಗ್ರಾಹಕರು ಪೂರೈಕೆದಾರರಿಗೆ ತಪ್ಪು ವಿಳಾಸ ನೀಡಿರುವುದಾಗಿ ವರದಿಯಾಗಿದೆ. ಪ್ರಾಥಮಿಕ ತನಿಖೆಯಂತೆ ಸ್ಪೋಟದಲ್ಲಿ ಯಾವುದೇ ಶಂಕೆ ಇಲ್ಲವಾದರೂ ಮಂಗಳವಾರ ಮೈಸೂರಿನಿಂದ ಆಗಮಿಸಲಿರುವ ಎಫ್‌ಎಸ್‌ಎಲ್ ತಂಡಕ್ಕೆ ಮಾಹಿತಿ ನೀಡಲಾಗುವುದು ಎಂದು ಅಧಿಕಾರಿ ತಿಳಿಸಿದರು.
ಮಿಕ್ಸರ್ ಪೂರೈಸಿದ ಕಂಪನಿ ಮತ್ತು ಏಜೆನ್ಸಿ ಮತ್ತು ಗ್ರಾಹಕನ ವಿಳಾಸ ಕೊರಿಯರ್ ಬಾಯ್ ಗೆ ಗೊತ್ತಿದೆ. ಸಮಗ್ರವಾದ ತನಿಖೆ ನಂತರವೇ ಸ್ಫೋಟಕ್ಕೆ ನಿಖರವಾದ ಕಾರಣ ತಿಳಿಯಲಿದೆ ಎಂದು ಅವರು ಹೇಳಿದರು. ಘಟನೆಗೆ ಶಾರ್ಟ್ ಸರ್ಕ್ಯೂಟ್ ಇರಬಹುದೆಂದು ಜನರು ಶಂಕಿಸಿದ್ದಾರೆ. ಮಿಕ್ಸರ್ ಗ್ರೈಂಡರ್‌ನ ಭಾಗಗಳು ಸ್ಫೋಟಗೊಂಡ ನಂತರ ಕೊರಿಯರ್ ಅಂಗಡಿಯ ಮಾಲೀಕರ ಹೊಟ್ಟೆ ಮತ್ತು ಮುಖಕ್ಕೂ ಗಾಯವಾಗಿದೆ. ಪ್ಲಗ್ ಅಳವಡಿಸಿದ ನಂತರ ಜಾರ್ ತಿರುಗಿಸಲು ಯತ್ನಿಸಿದಾಗ ಮಾಲೀಕನ ಬಲಗೈ ಜಖಂಗೊಂಡಿದೆ ಎನ್ನಲಾಗಿದೆ.