ಮೀಸಲಾತಿಗೆ ಆಗ್ರಹಿಸಿ ಕುರುಬ ಸಮುದಾಯ ಪ್ರತಿಭಟನೆ: ಸಚಿವರಿಗೆ ಘೇರಾವ್ ಹಾಕಿ ಪ್ರತಿಭಟನಾಕಾರರ ಆಕ್ರೋಶ
ಕುರುಬರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ (ಎಸ್‌ಟಿ) ಸೇರಿಸುವಂತೆ ಆಗ್ರಹಿಸಿ ಮಂಗಳವಾರ ಸುವರ್ಣ ವಿಧಾನಸೌಧದ ಎದುರು ಧರಣಿ ನಡೆಸುತ್ತಿದ್ದ ಕರ್ನಾಟಕ ಪ್ರದೇಶ ಕುರುಬರ ಸಂಘದ (ಕೆಪಿಕೆಎಸ್) ಸದಸ್ಯರು ಇಬ್ಬರು ಸಚಿವರಿಗೆ ಘೇರಾವ್ ಹಾಕಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.
Published: 28th December 2022 12:13 PM | Last Updated: 28th December 2022 12:13 PM | A+A A-

ಪ್ರತಿಭಟನಾನಿರತ ಕುರುಬ ಸಮುದಾಯದ ಸದಸ್ಯರು.
ಬೆಳಗಾವಿ: ಕುರುಬರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ (ಎಸ್‌ಟಿ) ಸೇರಿಸುವಂತೆ ಆಗ್ರಹಿಸಿ ಮಂಗಳವಾರ ಸುವರ್ಣ ವಿಧಾನಸೌಧದ ಎದುರು ಧರಣಿ ನಡೆಸುತ್ತಿದ್ದ ಕರ್ನಾಟಕ ಪ್ರದೇಶ ಕುರುಬರ ಸಂಘದ (ಕೆಪಿಕೆಎಸ್) ಸದಸ್ಯರು ಇಬ್ಬರು ಸಚಿವರಿಗೆ ಘೇರಾವ್ ಹಾಕಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಸಣ್ಣ ಕೈಗಾರಿಕೆ ಸಚಿವ ಎಂಟಿಬಿ ನಾಗರಾಜ್ ಮತ್ತು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಸ್ಥಳಕ್ಕೆ ಆಗಮಿಸಿ, ಬೇಡಿಕೆಗಳ ಪರಿಶೀಲಿಸುವುದಾಗಿ ಹೇಳಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಯತ್ನಿಸಿದರು,
ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ನಾಗರಾಜ್ ನಂತರ ವೇದಿಕೆಯಿಂದ ಕೆಳಗಿಳಿದು ಹೊರಡಲು ಮುಂದಾದರು. ಈ ವೇಳೆ ಕೆಪಿಕೆಎಸ್ ಮುಖಂಡರು ನಿರ್ಗಮಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಸಚಿವರು ಹೊರಗೆ ಹೋಗದಂತೆ ಸುತ್ತಿವರೆದರು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಮ್ಮನ್ನು ಭೇಟಿ ಮಾಡುವವರೆಗೂ ಸಚಿವರನ್ನು ಬಿಡುವುದಿಲ್ಲ ಎಂದು ಹೇಳಿದರು.
ಅಷ್ಟರೊಳಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸ್ಥಳಕ್ಕಾಗಮಿಸಿ ಧರಣಿ ನಿರತರಿಗೆ ತಮ್ಮ ಬೇಡಿಕೆಗಳ ಕುರಿತು ಮುಖ್ಯಮಂತ್ರಿಗಳ ಬಳಿ ಚರ್ಚಿಸಿ ಸಂಜೆಯೊಳಗೆ ಉತ್ತರ ನೀಡುವುದಾಗಿ ಭರವಸೆ ನೀಡಿದರು. ಆದರೆ, ಇದಕ್ಕೆ ಪ್ರತಿಭಟನಾಕಾರರು ಸಮಾಧಾನಗೊಳ್ಳಲಿಲ್ಲ. ಬದಲಿಗೆ ಸುವರ್ಣ ವಿಧಾನ ಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಬೆದರಿಕೆ ಹಾಕಿದರು. ಈ ವೇಳೆ ಎದುರಾದ ಉದ್ವಿಗ್ನ ಪರಿಸ್ಥಿತಿಯಿಂದ ಸಚಿವರನ್ನು ಹೊರತರಲು ಪೊಲೀಸರು ಹರಸಾಹಸ ಪಡಬೇಕಾಯಿತು.
ಕುರುಬರ ಸಮುದಾಯ ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದೆ ಎಂದು ಪ್ರತಿಭಟನಾಕಾರರು ದೂರಿದರು.