ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಳಗಾವಿ: ಅಧಿವೇಶಕ್ಕೆ ಶಾಸಕರು ಗೈರು, ಉತ್ತರ ಕರ್ನಾಟಕ ಸಮಸ್ಯೆಗಳ ಕುರಿತು ನಡೆಯದ ಅರ್ಥಪೂರ್ಣ ಚರ್ಚೆ!

ಉತ್ತರ ಕರ್ನಾಟಕದ ಪ್ರಮುಖ ಸ್ಥಳವಾಗಿರುವ ಬೆಳಗಾವಿಯಲ್ಲಿಯೇ ಅಧಿವೇಶನ ನಡೆಸಿದರೂ, ಈ ಬಾರಿಯ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಸಮಸ್ಯೆಗಳ ಕುರಿತು ಅರ್ಥಪೂರ್ಣ ಚರ್ಚೆಗಳು ನಡೆದಿಲ್ಲ ಎಂಬುದು ನಿಜಕ್ಕೂ ವಿಪರ್ಯಾಸದ ಸಂಗತಿಯಾಗಿದೆ.
Published on

ಬೆಳಗಾವಿ: ಉತ್ತರ ಕರ್ನಾಟಕದ ಪ್ರಮುಖ ಸ್ಥಳವಾಗಿರುವ ಬೆಳಗಾವಿಯಲ್ಲಿಯೇ ಅಧಿವೇಶನ ನಡೆಸಿದರೂ, ಈ ಬಾರಿಯ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಸಮಸ್ಯೆಗಳ ಕುರಿತು ಅರ್ಥಪೂರ್ಣ ಚರ್ಚೆಗಳು ನಡೆದಿಲ್ಲ ಎಂಬುದು ನಿಜಕ್ಕೂ ವಿಪರ್ಯಾಸದ ಸಂಗತಿಯಾಗಿದೆ.

ಬೆಳಗಾವಿ ಚಳಿಗಾಲದ ಅಧಿವೇಶನ 10 ದಿನಗಳ ಕಾಲ ನಡೆಯಬೇಕಿತ್ತು. ಆದರೆ ಒಂದು ದಿನ ಮೊದಲೇ ಮೊಟಕುಗೊಳಿಸಲಾಗಿದೆ. ಡಿಸೆಂಬರ್ 30 ಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಒಂದು ದಿನ ಮೊದಲೇ ಅಧಿವೇಶನ ಮೊಟಕುಗೊಂಡಿದೆ. ಬೆಳಗಾವಿ ಅಧಿವೇಶನದಲ್ಲಿ ಸಹಜವಾಗಿ ಸಾಕಷ್ಟು ವಿಚಾರಗಳ ಬಗ್ಗೆ ಚರ್ಚೆ ಆಗುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ ರೈತರ, ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳಿಗೆ ಕೊನೆಯ ದಿನವೂ ಸೂಕ್ತ ಉತ್ತರ ಸಿಗಲಿಲ್ಲ.

225 ಸದಸ್ಯರ ಪೈಕಿ 30 ಮಂದಿ ಸದಸ್ಯರು ಕೂಡ ಚರ್ಚೆಯದಲ್ಲಿ ಹಾಜರಾಗದ ಕಾರಣ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಕುರಿತು ಅರ್ಥಪೂರ್ಣ ಚರ್ಚೆಗಳು ನಡೆಯಲಿಲ್ಲ. ಉತ್ತರ ಕರ್ನಾಟಕದ ಬಹುತೇಕ ಶಾಸಕರೇ ಅಧಿವೇಶನಕ್ಕೆ ಗೈರಾಗಿದ್ದದ್ದು ಹಲವರಲ್ಲಿ ಬೇಸರವನ್ನು ಮೂಡಿಸಿದೆ.

ಈ ಬಾರಿಯ ಅಧಿವೇಶನದ ವಿಧಾನಸಭೆ ಮತ್ತು ಪರಿಷತ್ತಿನಲ್ಲಿ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದ ಕುರಿತಂತೆಯೇ ಹೆಚ್ಚು ಚರ್ಚೆಯಾಯಿತು. ಪಕ್ಷಾತೀತವಾಗಿ ಮೇಲ್ಮನೆ ಸದಸ್ಯರು ಮಹಾರಾಷ್ಟ್ರ ಸರ್ಕಾರದ ನಿಲುವನ್ನು ಖಂಡಿಸಿದರು.

ಅಧಿವೇಶನ ಆರಂಭಕ್ಕೂ ಒಂದು ದಿನ ಮೊದಲು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಪತ್ರಿಕಾಗೋಷ್ಠಿಯಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಚರ್ಚೆಗೆ ಗರಿಷ್ಠ ಸಮಯವನ್ನು ವಿನಿಯೋಗಿಸುವುದಾಗಿ ಹೇಳಿದ್ದರು.

ಆಡಳಿತಾರೂಢ ಬಿಜೆಪಿ ಸರ್ಕಾರದ ಕೊನೆಯ ಅಧಿವೇಶನವಾಗಿರುವುದರಿಂದ ಎಲ್ಲ ಶಾಸಕರು ಕಡ್ಡಾಯವಾಗಿ ಭಾಗವಹಿಸಬೇಕು ಎಂದು ಅವರು ಹೇಳಿದ್ದರು. ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ ಅಧಿವೇಶನಕ್ಕೆ ಗೈರುಹಾಜರಾಗಲು ಅನುಮತಿ ನೀಡಲಾಗುವುದು ಎಂದು ತಿಳಿಸಿದ್ದರು.

ಸೂಚನೆ ನಡೆವಲ್ಲೂ ಮೊದಲೇ ದಿನವೇ ಬಹುತೇಕ ಶಾಸಕರು ಗೈರು ಹಾಜರಾಗಿದ್ದದ್ದು ಕಂಡು ಬಂದಿತ್ತು.

ಉತ್ತರ ಕರ್ನಾಟಕದ ವಿದ್ಯಾರ್ಥಿಗಳು ಸೇರಿದಂತೆ ಸುಮಾರು 10,000 ಜನರು ಗ್ಯಾಲರಿಯಿಂದ ಚರ್ಚೆಗೆ ಸಾಕ್ಷಿಯಾದರು.

ವಿಧಾನಸಭೆಯಲ್ಲಿ 41 ಗಂಟೆ 20 ನಿಮಿಷಗಳ ಕಾಲ ಕಲಾಪ ನಡೆದರೂ ಎರಡು ಗಂಟೆಯೂ ಕ್ಷೇತ್ರದ ಸಮಸ್ಯೆಗಳಿಗೆ ಮೀಸಲಿಡಲಾಗಲಿಲ್ಲ. ವಿಧಾನಸಭೆಯಲ್ಲಿ ರಾಜ್ಯದ ವಿವಿಧ ಮಸೂದೆಗಳು, ಪ್ರಶ್ನೆಗಳು ಮತ್ತು ಸಮಸ್ಯೆಗಳ ಕುರಿತು 45 ಗಂಟೆಗಳ ಕಾಲ ಚರ್ಚೆಗಳನ್ನು ನಡೆಸಲಾಯಿತು. ಆರು ಮಸೂದೆಗಳನ್ನು ಅಂಗೀಕರಿಸಲಾಯಿತು.

ಬುಧವಾರ ಸಂಜೆ ಮುದ್ದೇಬಿಹಾಳ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರು, ಕೃಷ್ಣಾ ಮೇಲ್ದಂಡೆ ಯೋಜನೆ ಅನುಷ್ಠಾನ, ಉತ್ತರ ಕರ್ನಾಟಕವನ್ನು ಪ್ರವಾಸೋದ್ಯಮ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವುದು, ರೈಲ್ವೆ ಯೋಜನೆ, ಬಂದರುಗಳನ್ನು ತಂದು ವ್ಯಾಪಾರ ವಹಿವಾಟು ಹೆಚ್ಚಿಸುವ ಕುರಿತು 30 ನಿಮಿಷಗಳ ಕಾಲ ಮಾತನಾಡಿದರು.

ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ ಅವರು, ಬೆಳೆಗಾರರಿಗೆ ಆಗಿರುವ ನಷ್ಟದ ಬಗ್ಗೆ ಬೆಳಕು ಚೆಲ್ಲಿದರು ಹಾಗೂ ಪರಿಹಾರ ನೀಡುವಂತೆ ಒತ್ತಾಯಿಸಿದರು.

ಶಾಸಕ ಬಂಡೆಪ್ಪ ಕಾಶಂಪೂರ್ ಮಾತನಾಡಿ, ಬೀದರ್‌ಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರು ಮಾಡಬೇಕು ಮತ್ತು ಉತ್ತರ ಕರ್ನಾಟಕದ ಅಭಿವೃದ್ಧಿಗೆ 371 ಜೆ ಕಲಂನಲ್ಲಿ ಆರ್ಥಿಕ ಸೇರ್ಪಡೆ ಮಾಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.

ಜೇವರ್ಗಿ ಶಾಸಕ ಡಾ.ಅಜಯಸಿಂಗ್ ಅವರು, ಅಲ್ಪಸಂಖ್ಯಾತರಿಗೆ ಸಮುದಾಯ ಭವನ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com