ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಅಂಕ ಕಡಿತಕ್ಕೆ ವಿರೋಧ: ಮುಖ್ಯಮಂತ್ರಿ ಬೊಮ್ಮಾಯಿಗೆ ಹೆಚ್.ಡಿ.ದೇವೇಗೌಡ ಪತ್ರ
ಗೆಜೆಟೆಡ್ ಪ್ರೊಬೇಷನರಿ ಅಧಿಕಾರಿಗಳ ಹುದ್ದೆಗಳ ಭರ್ತಿಯಲ್ಲಿ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನಡೆಸುವ ಪರೀಕ್ಷೆಗಳಲ್ಲಿ ಸಂದರ್ಶನದ ಅಂಕವನ್ನು 25ಕ್ಕೆ ಕಡಿತಗೊಳಿಸುವ ರಾಜ್ಯ ಸರ್ಕಾರದ ತೀರ್ಮಾನವನ್ನು ರಾಜ್ಯಸಭೆಯ ಜೆಡಿಎಸ್ ಸದಸ್ಯ ಎಚ್.ಡಿ. ದೇವೇಗೌಡ ವಿರೋಧಿಸಿದ್ದಾರೆ.
Published: 24th February 2022 01:32 PM | Last Updated: 24th February 2022 01:41 PM | A+A A-

ದೇವೇಗೌಡ
ಬೆಂಗಳೂರು: ಗೆಜೆಟೆಡ್ ಪ್ರೊಬೇಷನರಿ ಅಧಿಕಾರಿಗಳ ಹುದ್ದೆಗಳ ಭರ್ತಿಯಲ್ಲಿ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನಡೆಸುವ ಪರೀಕ್ಷೆಗಳಲ್ಲಿ ಸಂದರ್ಶನದ ಅಂಕವನ್ನು 25ಕ್ಕೆ ಕಡಿತಗೊಳಿಸುವ ರಾಜ್ಯ ಸರ್ಕಾರದ ತೀರ್ಮಾನವನ್ನು ರಾಜ್ಯಸಭೆಯ ಜೆಡಿಎಸ್ ಸದಸ್ಯ ಎಚ್.ಡಿ. ದೇವೇಗೌಡ ವಿರೋಧಿಸಿದ್ದು, ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಪತ್ರ ಬರೆದಿದ್ದಾರೆ.
ಪತ್ರದಲ್ಲಿ ಕೆಪಿಎಸ್‌ಸಿ ಇತ್ತೀಚಿನ ದಿನಗಳಲ್ಲಿ ಬದಲಾವಣೆಯ ನೆಪದಲ್ಲಿ ಸರ್ವಸಮ್ಮತವಾದ ಮತ್ತು ಬಹುಕಾಲದಿಂದ ಅನುಸರಿಸುತ್ತಿರುವ ಪ್ರಮಾಣಿತ ಕಾರ್ಯವಿಧಾನಗಳಿಗೆ ವಿರುದ್ಧವಾಗಿ ಸಾಗುವಂತೆ ಕಂಡು ಬರುತ್ತಿದೆ. ಇಂತಹ ದೂರದೃಷ್ಟಿಯಿಲ್ಲದ ಬದಲಾವಣೆಗಳಿಂದ ಭವಿಷ್ಯದಲ್ಲಿ ಉತ್ತಮ ಮತ್ತು ಕಾರ್ಯದಕ್ಷತೆವುಳ್ಳ ಅಧಿಕಾರಿಗಳನ್ನು ಆಯ್ಕೆಮಾಡಲು ಕಷ್ಟವಾಗಬಹುದು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕೆಪಿಎಸ್'ಸಿ ವೈವಾ ಅಂಕ ಕಡಿತಕ್ಕೆ ಸಂಪುಟ ಒಪ್ಪಿಗೆ
ಕೆಪಿಎಸ್‌ಸಿಯಲ್ಲೂ ಕಾಲಕಾಲಕ್ಕೆ ಬದಲಾವಣೆ ಅಗತ್ಯ. ಆದರೆ, ಅಂತಹ ಬದಲಾವಣೆಗಳು ಸಮ್ಮತವಾಗಿರಬೇಕು ಮತ್ತು ಕೇಂದ್ರ ಲೋಕ ಸೇವಾ ಆಯೋಗದ ಮಾದರಿಯಲ್ಲೇ ಇರಬೇಕು. ಆಯೋಗದಲ್ಲಿ ದೀರ್ಘಕಾಲದಿಂದ ಜಾರಿಯಲ್ಲಿದ್ದ ಪ್ರಮಾಣಿತ ಕಾರ್ಯವಿಧಾನವನ್ನು 2020ರ ಜೂನ್ 4ರಂದು ಬದಲಾವಣೆ ಮಾಡಲಾಗಿತ್ತು. ವ್ಯಕ್ತಿತ್ವ ಪರೀಕ್ಷೆಯ ಅಂಕಗಳನ್ನು 150 ರಿಂದ 50ಕ್ಕೆ ಇಳಿಕೆ ಮಾಡಲಾಗಿತ್ತು. ಈಗ ಅದನ್ನು 25ಕ್ಕೆ ಇಳಿಸುವ ತೀರ್ಮಾನ ಮಾಡಲಾಗಿದೆ. ಇಂತಹ ತೀರ್ಮಾನದಿಂದ ಗ್ರಾಮೀಣ ಪ್ರದೇಶದ ಸ್ಪರ್ಧಾ ಆಕಾಂಕ್ಷಿಗಳಿಗೆ ಸಮಸ್ಯೆ ಆಗಲಿದೆ ತಿಳಿಸಿದ್ದಾರೆ.
ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗೆಗಳಿಂದ ಕೆಪಿಎಸ್‌ಸಿ ಕುರಿತು ಸಾರ್ವಜನಿಕರಲ್ಲಿ ಗೌರವ ಕಡಿಮೆಯಾಗುವುದರಲ್ಲಿ ಸಂಶಯವಿಲ್ಲ. ಈ ಎಲ್ಲ ತೀರ್ಮಾನಗಳನ್ನು ಕೈಬಿಡಬೇಕು. ಕೇಂದ್ರ ಲೋಕಸೇವಾ ಆಯೋಗದ ಮಾದರಿಯಲ್ಲೇ ಮುಖ್ಯ ಪರೀಕ್ಷೆಯ ಅಂಕಗಳು ಮತ್ತು ವ್ಯಕ್ತಿತ್ವ ಪರೀಕ್ಷೆಯ ಅಂಕಗಳನ್ನು ನಿಗದಿಪಡಿಸಬೇಕೆಂದು ಆಗ್ರಹಿಸಿದ್ದಾರೆ.