ಹುಬ್ಬಳ್ಳಿಯಲ್ಲಿ ಇಂದು ಮಧ್ಯಾಹ್ನ ಚಂದ್ರಶೇಖರ ಗುರೂಜಿ ಅಂತ್ಯಕ್ರಿಯೆ, ಸಾರ್ವಜನಿಕ ದರ್ಶನಕ್ಕೆ ಅವಕಾಶ

ಆಪ್ತ ಶಿಷ್ಯರಿಂದಲೇ ನಿನ್ನೆ ಮಂಗಳವಾರ ಮಧ್ಯಾಹ್ನ ಹುಬ್ಬಳ್ಳಿಯ ಹೊಟೇಲ್ ನಲ್ಲಿ ಭೀಕರವಾಗಿ ಹತ್ಯೆಗೀಡಾಗಿರುವ ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿಯವರ ಅಂತ್ಯಕ್ರಿಯೆ ಹುಬ್ಬಳ್ಳಿಯ ಅವರ ಜಮೀನಿನಲ್ಲಿ ಇಂದು ಬುಧವಾರ ಮಧ್ಯಾಹ್ನ ವೀರಶೈವ ಲಿಂಗಾಯತ ಸಂಪ್ರದಾಯದಂತೆ ನೆರವೇರಲಿದೆ ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ.
ಚಂದ್ರಶೇಖರ ಗುರೂಜಿ ಹತ್ಯೆಯಾದ ಹುಬ್ಬಳ್ಳಿಯ ಹೊಟೇಲ್
ಚಂದ್ರಶೇಖರ ಗುರೂಜಿ ಹತ್ಯೆಯಾದ ಹುಬ್ಬಳ್ಳಿಯ ಹೊಟೇಲ್

ಹುಬ್ಬಳ್ಳಿ: ಆಪ್ತ ಶಿಷ್ಯರಿಂದಲೇ ನಿನ್ನೆ ಮಂಗಳವಾರ ಮಧ್ಯಾಹ್ನ ಹುಬ್ಬಳ್ಳಿಯ ಹೊಟೇಲ್ ನಲ್ಲಿ ಭೀಕರವಾಗಿ ಹತ್ಯೆಗೀಡಾಗಿರುವ ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿಯವರ ಅಂತ್ಯಕ್ರಿಯೆ ಹುಬ್ಬಳ್ಳಿಯ ಅವರ ಜಮೀನಿನಲ್ಲಿ ಇಂದು ಬುಧವಾರ ಮಧ್ಯಾಹ್ನ ವೀರಶೈವ ಲಿಂಗಾಯತ ಸಂಪ್ರದಾಯದಂತೆ ನೆರವೇರಲಿದೆ ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ.

ಇಂದು ಬೆಳಗ್ಗೆ ಜೆಸಿಬಿ ಜಮೀನಿಗೆ ಬಂದು ಗಿಡಗಳನ್ನು ಮತ್ತು ಅಂತ್ಯಕ್ರಿಯೆ ನೆರವೇರುವ ಸ್ಥಳವನ್ನು ಸ್ವಚ್ಛಗೊಳಿಸಲಾಗುತ್ತಿದ್ದು ಅಲ್ಲಿ ಸಕಲ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಅಂತಿಮ ಸಂಸ್ಕಾರ ವಿಧಿ ವಿಧಾನಗಳಿಗೆ ತಯಾರಿ ಮಾಡಿಕೊಳ್ಳಲಾಗುತ್ತಿದೆ.  ಹುಬ್ಬಳ್ಳಿಯ ಸುಳ್ಳಾ ರಸ್ತೆಯಲ್ಲಿರುವ ಸ್ವಂತ ಜಮೀನಿನಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ. 

ಅದಕ್ಕೂ ಮುನ್ನ ಗುರೂಜಿಯವರ ಭಕ್ತಾದಿಗಳು ಮತ್ತು ಅನುಯಾಯಿಗಳಿಗೆ ಅಂತಿಮ ದರ್ಶನಕ್ಕೆ ಕೂಡ ವ್ಯವಸ್ಥೆ ಮಾಡಲಾಗಿದೆ. 

ಹುಬ್ಬಳ್ಳಿಯ ಹೊಟೇಲ್ ನಲ್ಲಿ ನಿನ್ನೆ ಏನಾಗಿತ್ತು?: ನಿನ್ನೆ ಹುಬ್ಬಳ್ಳಿಯ ಖಾಸಗಿ ಹೊಟೇಲ್ ನಲ್ಲಿ ಚಂದ್ರಶೇಖರ ಗುರೂಜಿ ತಂಗಿದ್ದರು. ಆ ವೇಳೆ ತಮ್ಮ ಸಮಸ್ಯೆಗೆ ಪರಿಹಾರ ಕೇಳುವ ನೆಪದಲ್ಲಿ ಹೊಟೇಲ್ ಗೆ ಹಂತಕರು ಪೂರ್ವಸಂಚು ರೂಪಿಸಿಕೊಂಡು ಬಂದಿದ್ದರು. ಸ್ವಾಮೀಜಿಗೆ ರಿಸೆಪ್ಷನ್ ಬಳಿ ಫೋನ್ ಮಾಡಿ ಕೆಳಗೆ ಬರಲು ತಿಳಿಸಿದ್ದರು. ರಿಸೆಪ್ಷನಿಸ್ಟ್ ಕರೆ ಮಾಡಿದ ತಕ್ಷಣ ಚಂದ್ರಶೇಖರ ಗುರೂಜಿ ರೂಮ್ ನಂಬರ್ 220ರಿಂದ ರಿಸೆಪ್ಷನ್ ಕಡೆಗೆ ಬಂದಿದ್ದಾರೆ, ಅಲ್ಲಿ ಹಂತಕರಾದ ಮಹಾಂತೇಶ್ ಮತ್ತು ಮಂಜುನಾಥ್ ಕುಳಿತಿದ್ದರು.

ಗುರೂಜಿ ಬಂದು ಕುಳಿತ ನಂತರ ಮಂಜುನಾಥ್ ಅವರ ಕಾಲಿಗೆ ಬೀಳಲು ಹೋಗುತ್ತಾರೆ, ಆಗ ಸಂದರ್ಭ ನೋಡಿಕೊಂಡು ಮಹಾಂತೇಶ್ ಮನಸೋ ಇಚ್ಛೆ ಚಾಕುವಿನಿಂದ ಇರಿಯುತ್ತಾನೆ.  ಇಬ್ಬರೂ ಸೇರಿ 60ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿಯುತ್ತಾರೆ. ಕೇವಲ 40-45 ಸೆಕೆಂಡುಗಳಲ್ಲಿ ಈ ಹತ್ಯೆ ಘಟನೆ ನಡೆದುಹೋಗಿರುತ್ತದೆ. ಚಾಕುವಿನಿಂದ ಇರಿದು ಅಲ್ಲಿಂದ ಪರಾರಿಯಾದ ಮಹಾಂತೇಶ್ ಮತ್ತು ಮಂಜುನಾಥ್ ನಂತರ ಪೊಲೀಸರ ತೀವ್ರ ಕಾರ್ಯಾಚರಣೆ ನಂತರ ನಾಲ್ಕೈದು ಗಂಟೆಗಳಲ್ಲಿ ಸಿಕ್ಕಿಬಿದ್ದಿದ್ದಾರೆ.

ಸದ್ಯ ಚಂದ್ರಶೇಖರ ಗುರೂಜಿಯವರ ಶವ ಇಟ್ಟಿರುವ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಶವಾಗಾರ ಬಳಿ ಹತ್ತಿರದ ಸಂಬಂಧಿಕರು ಬರುತ್ತಿದ್ದಾರೆ. ಗುರೂಜಿ 15 ದಿನಗಳ ಹಿಂದಷ್ಟೇ ತಮ್ಮ ಎರಡನೇ ಪತ್ನಿಯ ಊರಿನಲ್ಲಿದ್ದರು, ಕಳೆದೊಂದು ವಾರ ಶಿವಮೊಗ್ಗದ ಹೆಮ್ಮಕ್ಕಿ ಗ್ರಾಮದಲ್ಲಿ ಜ್ವರ ಬಂದು ತಂಗಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com