
ರಾಷ್ಟ್ರೀಯ ಹೆದ್ದಾರಿ 66ರ ಚಿತ್ರ
ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ಮುಂದುವರಿದಿದ್ದು, ಹಲವು ಸ್ಥಳಗಳು ಜಲಾವೃತಗೊಂಡಿವೆ. ಐಎನ್‌ಎಸ್ ಕದಂಬ ನೌಕಾನೆಲೆ ಬಳಿಯ ಚೆಂಡಿಯೆ ಗ್ರಾಮದಲ್ಲಿ ಅತಿ ಹೆಚ್ಚು ಮಳೆ ಸುರಿದಿದೆ.
ಭಾರೀ ಮಳೆಯಿಂದ ಹಲವಾರು ಗ್ರಾಮಗಳು ಸಂಪರ್ಕ ಕಡಿತಗೊಂಡಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಕಾರವಾರ ಪಟ್ಟಣ ಹಾಗೂ ಹೊರವಲಯದಲ್ಲಿನ ಹಲವು ಕಾಲುವೆಗಳು, ಜಲಾಶಯಗಳು ತುಂಬಿ ಹರಿಯುತ್ತಿವೆ. ಶೇರವಾಡ ರೈಲು ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿದ್ದು, ವಾಹನಗಳು ನೀರಿನಲ್ಲಿಯೇ ಸಂಚರಿಸಿದವು. ಯಾವುದೇ ರೀತಿಯ ಘರ್ಷಣೆ ಸಂಭವಿಸದಂತೆ ಟ್ರಾಫಿಕ್ ಪೊಲೀಸರನ್ನು ನಿಯೋಜಿಸಲಾಗಿತ್ತು.
ಹೊನ್ನಾವರ ಅರಣ್ಯ ಪ್ರದೇಶದ ಗ್ರಾಮಗಳು ಹೊರ ಜಗತ್ತಿನ ಸಂಪರ್ಕವಿಲ್ಲದೆ ದ್ವೀಪಗಳಾಗಿ ಮಾರ್ಪಟ್ಟಿವೆ. ಅಘನಾಶಿನಿ, ಗಂಗವಳ್ಳಿ ಮತ್ತು ಕಾಳಿ ನದಿಗಳಲ್ಲಿ ತೀವ್ರ ಒಳಹರಿವಿದೆ. ರಾಷ್ಟ್ರೀಯ ಹೆದ್ದಾರಿ ಜಲಾವೃತದೊಂದಿಗೆ ಕಾರವಾರ ಬಳಿಯ ಬಿಣಗಾದಲ್ಲಿ ಹೆಚ್ಚಿನ ಸಮಸ್ಯೆ ಕಂಡುಬಂದಿತು. ಆಮೆಗತಿಯ ವಾಹನ ಸಂಚಾರದಿಂದ ಜನರು ಬಹಳ ಹೊತ್ತು ಕಾಯುವಂತಾಯಿತು.
ಇದನ್ನೂ ಓದಿ: ಮಳೆ ಪೀಡಿತ 13 ಜಿಲ್ಲೆಗಳ ಜಿಲ್ಲಾಡಳಿತದೊಂದಿಗೆ ಸಿಎಂ ವಿಡಿಯೋ ಕಾನ್ಫರೆನ್ಸ್: ಹಾನಿ, ಪರಿಹಾರ ಕುರಿತು ಚರ್ಚೆ
ಮಳೆಯಿಂದಾಗಿ 100 ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿದ್ದು, 14 ತೀವ್ರವಾಗಿ ಅಥವಾ ಸಂಪೂರ್ಣವಾಗಿ ಹಾನಿಗೊಳಗಾಗಿವೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ತಿಳಿಸಿದ್ದಾರೆ. ಐಎನ್‌ಎಸ್ ಕದಂಬ ನೌಕಾನೆಲೆ ಬಳಿಯಿರುವ ಚೆಂಡಿಯೆ ಗ್ರಾಮದಲ್ಲಿ ಗುರುವಾರ ರಾತ್ರಿ ಮತ್ತು ಶುಕ್ರವಾರದ ಆರಂಭದಲ್ಲಿ 260 ಮಿ.ಮೀ.ನಷ್ಟು ಮಳೆ ಸುರಿದಿದೆ. ಜಿಲ್ಲಾಡಳಿತದಿಂದ ಗುರುವಾರದಿಂದ ಎರಡು ಪರಿಹಾರ ಕೇಂದ್ರಗಳನ್ನು ಆರಂಭಿಸಲಾಗಿದೆ.