ಕೋವಿಡ್ ಸಂದರ್ಭದಲ್ಲಿ ಪಿಎಂ ಪರಿಹಾರ ನಿಧಿಗೆ ಸಂಗ್ರಹಿಸಿದ ಸಾವಿರಾರು ಕೋಟಿ ರೂ ಎಲ್ಲಿ ಹೋಯಿತು: ಸಿದ್ದರಾಮಯ್ಯ

ಸರ್ಕಾರಿ ಶಾಲಾ ಮಕ್ಕಳಿಗೆ ನಮ್ಮ ಸರ್ಕಾರವಿದ್ದಾಗ ಶೂ, ಸಾಕ್ಸ್ ವಿತರಿಸುತ್ತಿದ್ದೆವು. ಬಿಜೆಪಿ ಸರ್ಕಾರದಲ್ಲಿ ಅದನ್ನು ನಿಲ್ಲಿಸಲು ನೋಡಿದ್ದರು. ನಾವು ಒತ್ತಾಯ ಮಾಡಿದ್ದಾಗ ವಿಧಿಯಿಲ್ಲದೆ ಈಗ ನೀಡಲು ಮುಂದಾಗಿದ್ದಾರೆ, ಸಂತೋಷ ಕೊಡಲಿ, ಮಕ್ಕಳಿಗೆ ಸಾಕ್ಸ್, ಶೂಗಳನ್ನು ನೀಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಂಗಳೂರು: ಸರ್ಕಾರಿ ಶಾಲಾ ಮಕ್ಕಳಿಗೆ ನಮ್ಮ ಸರ್ಕಾರವಿದ್ದಾಗ ಶೂ, ಸಾಕ್ಸ್ ವಿತರಿಸುತ್ತಿದ್ದೆವು. ಬಿಜೆಪಿ ಸರ್ಕಾರದಲ್ಲಿ ಅದನ್ನು ನಿಲ್ಲಿಸಲು ನೋಡಿದ್ದರು. ನಾವು ಒತ್ತಾಯ ಮಾಡಿದ್ದಾಗ ವಿಧಿಯಿಲ್ಲದೆ ಈಗ ನೀಡಲು ಮುಂದಾಗಿದ್ದಾರೆ, ಸಂತೋಷ ಕೊಡಲಿ, ಮಕ್ಕಳಿಗೆ ಸಾಕ್ಸ್, ಶೂಗಳನ್ನು ನೀಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಅಮರನಾಥ ಯಾತ್ರೆಗೆ ಹೋಗಿರುವ ಕನ್ನಡಿಗರು ಸುರಕ್ಷತೆಯಿಂದ ವಾಪಸ್ಸಾಗಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಅಲ್ಲಿಗೆ ಹೋಗಿ ಕರೆದುಕೊಂಡು ಬರುವ ಕೆಲಸ ಮಾಡಬೇಕು ಎಂದರು.

ಸರ್ಕಾರ ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ಕೊಡದಿದ್ದರೆ ನಾವು ಭಿಕ್ಷೆ ಬೇಡಿ ಹಣ ಸಂಗ್ರಹಿಸಿ ನೀಡುತ್ತೇವೆ ಎಂದು ಡಿ ಕೆ ಶಿವಕುಮಾರ್ ಹೇಳಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಕಾಂಗ್ರೆಸ್ ಜನರಿಂದ ಸಂಗ್ರಹಿಸಿದ ಒಂದು ಕೋಟಿ ರೂಪಾಯಿ ಎಲ್ಲಿಗೆ ಹೋಯಿತು ಎಂದು ಮುಖ್ಯಮಂತ್ರಿ ಬೊಮ್ಮಾಯಿ ಕೇಳಿದ್ದ ಪ್ರಶ್ನೆ ಬಗ್ಗೆ ಸುದ್ದಿಗಾರರು ಕೇಳಿದಾಗ, ಕೋವಿಡ್ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ಕೋವಿಡ್ ನಿಧಿ ಎಂದು ಸಾವಿರಾರು ಕೋಟಿ ರೂಪಾಯಿ ಸಂಗ್ರಹಿಸಿದ್ದರು, ಅದು ಎಲ್ಲಿಗೆ ಹೋಯಿತು ಎಂದು ಕೇಳಿದರು.

ಸರ್ಕಾರ ಈಗಾಗಲೇ ಯೂನಿಫಾರ್ಮ್, ಪಠ್ಯಪುಸ್ತಕ, ಶೂ, ಸಾಕ್ಸ್ ನೀಡಬೇಕಾಗಿತ್ತು. ಶಾಲೆಗಳು ಆರಂಭವಾಗಿ ವಾರಗಳಾಗಿವೆ. ಇನ್ನಾದರೂ ತಡಮಾಡದೆ ನೀಡಲಿ ಎಂದು ಆಗ್ರಹಿಸಿದರು.

ಉಸ್ತುವಾರಿ ಸಚಿವರುಗಳು ಎಲ್ಲಿ?: ರಾಜ್ಯಾದ್ಯಂತ ವ್ಯಾಪಕ ಮಳೆಯಾಗುತ್ತಿದ್ದರೂ, ಮಳೆ ಸಂಬಂಧಿ ಹಾನಿಗಳಿಂದ ಜನರು ಕಷ್ಟದಲ್ಲಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರುಗಳು ಸ್ಥಳಕ್ಕೆ ಹೋಗಿಲ್ಲ. ಇಲ್ಲಿ ಬೆಂಗಳೂರಿನಲ್ಲಿ ಸಭೆ ನಡೆಸಿದರೆ ಏನು ಪ್ರಯೋಜನ, ಕಳೆದೊಂದು ವಾರದಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರುಗಳು ಹೋಗಿ ಸ್ಥಳದಲ್ಲಿಯೇ ಬೀಡುಬಿಟ್ಟು ಅಲ್ಲಿ ಜನರಿಗೆ ಆಗಬೇಕಾದ ಕೆಲಸ, ಪರಿಹಾರ ಕಾರ್ಯಗಳನ್ನು ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಮುಖ್ಯಮಂತ್ರಿ ಬೊಮ್ಮಾಯಿಯವರು ಸಹ ಮಳೆ ಸಂಬಂಧಿ ಅನಾಹುತಗಳಾದ ಜಿಲ್ಲೆಗಳಿಗೆ ಹೋಗಿ ಅಲ್ಲಿನ ಜನರ ಕಷ್ಟ ಆಲಿಸಬೇಕು, ಪರಿಹಾರ ಕಾರ್ಯಗಳನ್ನು ಒದಗಿಸಬೇಕು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com