ರಾಜ್ಯದ ಹಲವು ಜಿಲ್ಲೆಗಳಲ್ಲಿ ವರುಣಾರ್ಭಟ: ಕೊಡಗು, ಕರಾವಳಿ ಜಿಲ್ಲೆಗಳಿಗೆ ಸಿಎಂ ಬೊಮ್ಮಾಯಿ ನಾಳೆಯಿಂದ ಎರಡು ದಿನ ಪ್ರವಾಸ

ರಾಜ್ಯದ ದಕ್ಷಿಣ ಕನ್ನಡ, ಕೊಡಗು, ಉಡುಪಿ, ಚಿಕ್ಕಮಗಳೂರು, ಉತ್ತರ ಕನ್ನಡ, ಹಾಸನ ಸೇರಿದಂತೆ 10 ಜಿಲ್ಲೆಗಳಲ್ಲಿ  ಮಹಾಮಳೆಯಾಗುತ್ತಿದ್ದು, ಅತಿ ಹೆಚ್ಚಿನ ಹಾನಿಯುಂಟಾಗಿರುವ ಜಿಲ್ಲೆಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಸ್ವತಃ ಭೇಟಿ ನೀಡಲಿದ್ದಾರೆ. 
ಆಗುಂಬೆ ಘಾಟಿಯ ಎರಡು ಕಡೆ ಉಂಟಾದ ಭೂಕುಸಿತ, ಬಲಚಿತ್ರದಲ್ಲಿ ಸಿಎಂ ಬೊಮ್ಮಾಯಿ ಸಂಗ್ರಹ ಚಿತ್ರ
ಆಗುಂಬೆ ಘಾಟಿಯ ಎರಡು ಕಡೆ ಉಂಟಾದ ಭೂಕುಸಿತ, ಬಲಚಿತ್ರದಲ್ಲಿ ಸಿಎಂ ಬೊಮ್ಮಾಯಿ ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದ ದಕ್ಷಿಣ ಕನ್ನಡ, ಕೊಡಗು, ಉಡುಪಿ, ಚಿಕ್ಕಮಗಳೂರು, ಉತ್ತರ ಕನ್ನಡ, ಹಾಸನ ಸೇರಿದಂತೆ 10 ಜಿಲ್ಲೆಗಳಲ್ಲಿ  ಮಹಾಮಳೆಯಾಗುತ್ತಿದ್ದು, ಅತಿ ಹೆಚ್ಚಿನ ಹಾನಿಯುಂಟಾಗಿರುವ ಜಿಲ್ಲೆಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಸ್ವತಃ ಭೇಟಿ ನೀಡಲಿದ್ದಾರೆ. 

ಭಾರೀ ಮಳೆಯಿಂದ ಜಿಲ್ಲೆಗಳು ತತ್ತರಿಸಿ ಹೋಗಿರುವ ಕೊಡಗು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ಸಿಎಂ ಬೊಮ್ಮಾಯಿ ನಾಳೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಉತ್ತರ ಕನ್ನಡ ಜಿಲ್ಲೆಗೂ ಸಿಎಂ ಬೊಮ್ಮಾಯಿ ಭೇಟಿ ನೀಡಲಿದ್ದಾರೆ.

ರಾಜ್ಯದ 10 ಜಿಲ್ಲೆಗಳಲ್ಲಿ ಮಹಾ ಮಳೆ ಕಾಡುತ್ತಿದ್ದು, ಹವಾಮಾನ ಇಲಾಖೆ ನಾಲ್ಕು ಜಿಲ್ಲೆಗಳಲ್ಲಿ ರೆಡ್​ ಅಲರ್ಟ್​ ನೀಡಿದೆ. 6 ಜಿಲ್ಲೆಗಳಲ್ಲಿ ಆರೆಂಜ್​​ ಅಲರ್ಟ್​ ಘೋಷಣೆ ಮಾಡಿ ಶಾಲೆಗಳಿಗೆ ಎರಡು ದಿನ ರಜೆ ಘೋಷಣೆ ಮಾಡಲಾಗಿದೆ. 

ಸಿಎಂ ಹೇಳಿಕೆ: ಕಳೆದ 10 ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ವ್ಯಾಪಕವಾಗಿ ಕೊಡಗು, ಕರಾವಳಿ, ಮಲೆನಾಡು, ಉತ್ತರ ಕನ್ನಡ ಮತ್ತು ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಆಗಿದೆ. ಈಗಾಗಲೇ ಮಳೆಯಿಂದ ಆಗಿರುವ ಹಾನಿಯ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ, ಪರಿಹಾರ ಕಂಡುಕೊಳ್ಳಲು ಜಿಲ್ಲಾಧಿಕಾರಿಗಳಿಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಮತ್ತು ದೂರವಾಣಿ ಮೂಲಕ ಮಾತನಾಡಿ ಸೂಚನೆ ನೀಡಿದ್ದೇನೆ. 

ನಾಳೆ ಕೊಡಗು, ದಕ್ಷಿಣ ಕನ್ನಡ, ಉಡುಪಿ ಮತ್ತು ಕಾರವಾರ ಜಿಲ್ಲೆಗಳಿಗೆ ಭೇಟಿ ನೀಡಲಿದ್ದೇನೆ. ಅಲ್ಲಿ ಆಗಿರುವಂತಹ ಭೂಕುಸಿತ, ಮನೆಗಳ ಕುಸಿತ, ಕಡಲ್ಕೊರೆತ ಇತ್ಯಾದಿಗಳನ್ನು ಪರಿಶೀಲನೆ ಮಾಡಿ ಸ್ಥಳದಲ್ಲಿಯೇ ಕೆಲವು ಸೂಚನೆಗಳನ್ನು ನೀಡುತ್ತೇನೆ. ಅಲ್ಲಿ ಸಭೆಗಳನ್ನು ಮಾಡಿ ಪರಿಹಾರಗಳನ್ನು ಘೋಷಿಸುತ್ತೇನೆ, ನಾಳೆ ಮಂಗಳೂರಿನಲ್ಲಿ ಉಳಿದುಕೊಂಡು ನಾಡಿದ್ದು ಉಡುಪಿ, ಕಾರವಾರ ಪ್ರವಾಸ ನಡೆಸುತ್ತೇನೆ ಎಂದು ಬೊಮ್ಮಾಯಿ ತಿಳಿಸಿದರು.

ಮೀನುಗಾರರಿಗೆ ಎಚ್ಚರಿಕೆ: ರಾಜ್ಯದ ಕರಾವಳಿಯ ಎಲ್ಲಾ ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಗಳ ಅವಧಿಯಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಭಾಗದಲ್ಲಿ ಬಿರುಗಾಳಿಯ ವೇಗ ಪ್ರತಿ ಗಂಟೆಗೆ 45 ರಿಂದ 55 ಕಿಲೋಮೀಟರ್ ಇರಲಿದ್ದು, 65 ಕಿಲೋಮೀಟರ್ ತಲುಪುವ ಸಾಧ್ಯತೆಯಿದೆ. ಹೀಗಾಗಿ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಇಲಾಖೆ ಎಚ್ಚರಿಕೆ ನೀಡಿದೆ.

ರೆಡ್ ಅಲರ್ಟ್ ಘೋಷಣೆ: ಮಲೆನಾಡು ಹಾಗೂ ಕರಾವಳಿ ಭಾಗಗಳಲ್ಲಿ ಮಳೆಯ ಆರ್ಭಟ ಮತ್ತೆ ಮುಂದುವರೆದಿದೆ. ಹೀಗಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಿದ್ದು, ಅಪಾರ ಪ್ರಮಾಣದ ಆಸ್ತಿಪಾಸ್ತಿಗೆ ಹಾನಿಯಾಗಿದೆ. ಕರಾವಳಿಯಲ್ಲಿ ಇಂದು ಸಹ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ  ಮುನ್ಸೂಚನೆ ನೀಡಿದ್ದು, ‘ರೆಡ್ ಅಲರ್ಟ್’ ಘೋಷಿಸಿದೆ. 

ಉತ್ತರಕನ್ನಡ ಜಿಲ್ಲೆಯಲ್ಲಿ ನೆರೆಹಾವಳಿಯಿಂದ ತೊಂದರೆಗೊಳಗಾದವರಿಗೆ ಕುಮಟಾ, ಕಾರವಾರ ಹಾಗೂ ಹೊನ್ನಾವರಗಳಲ್ಲಿ ಒಟ್ಟು ಏಳು ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರ ಮಾಹಿತಿ ನೀಡಿದೆ. ಜಿಲ್ಲೆಯ ಪ್ರಮುಖ ನದಿಗಳಾದ ಕಾಳಿ, ಗಂಗಾವಳಿ, ಶರಾವತಿ, ಹಾಗೂ ಅಘನಾಶಿನಿ ತುಂಬಿ ಹರಿಯುತ್ತಿದೆ. 

ಚಿಕ್ಕಮಗಳೂರು ಜಿಲ್ಲೆಯಲ್ಲಿ ಸತತ ಮಳೆಯಾಗುತ್ತಿದೆ. ಕೆಲ ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗಿದೆ. ನಿರಂತರ ಮಳೆಯಿಂದಾಗಿ ಜಿಲ್ಲೆಯ 6 ತಾಲ್ಲೂಕುಗಳಲ್ಲಿ ಇಂದು ಮತ್ತು ನಾಳೆ ಶಾಲಾ ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಣೆ ಮಾಡಿದೆ. ಜಿಲ್ಲೆಯ ಚಾರ್ಮುಡಿ ಘಾಟ್‌ನ 8ನೇ ತಿರುವಿನಲ್ಲಿ ಮರ ರಸ್ತೆಗೆ ಉರುಳಿಬಿದ್ದು, ಸಂಚಾರಕ್ಕೆ ಕೆಲ ಕಾಲ ತೊಂದರೆಯಾಗಿತ್ತು. ಕೊಡಗು ಜಿಲ್ಲೆಯಲ್ಲಿ ಸತತ 7ನೇ ದಿನವೂ ಮಳೆ  ಮುಂದುವರೆದಿದೆ. ಅನೇಕ ಗ್ರಾಮಗಳಿಗೆ ನದಿ ನೀರು ನುಗ್ಗಿ ಗ್ರಾಮಗಳು ದ್ವೀಪದಂತಾಗಿವೆ.

ಆಗುಂಬೆ ಘಾಟಿಯ ರಾಷ್ಟ್ರೀಯ ಹೆದ್ದಾರಿ 169ಎಯಲ್ಲಿ ಭೂಕುತದಿಂದ ರಸ್ತೆ ಸಂಚಾರಕ್ಕೆ ಅಡ್ಡಿಯುಂಟಾಗಿದೆ ತೀವ್ರ ಪರಿಣಾಮ ಬೀರಿದೆ. ಉಡುಪಿ-ಶಿವಮೊಗ್ಗ ಸಂಪರ್ಕಿಸುವ ರಸ್ತೆ ಸಂಚಾರವನ್ನು ನಾಳೆಯವರೆಗೆ ನಿರ್ಬಂಧಿಸಲಾಗಿದೆ. 

ಕೃಷ್ಣರಾಜಸಾಗರ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ನದಿಗೆ ಹೆಚ್ಚಿನ ಪ್ರಮಾಣದ ನೀರು ಹರಿಯಬಿಡುವ ಸಂಭವ ಇರುವುದರಿಂದ ಕಾವೇರಿ ನದಿ ದಂಡೆ ಪಾತ್ರದಲ್ಲಿ ವಾಸಮಾಡುವ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮನವಿ ಮಾಡಲಾಗಿದೆ.

ನೆರೆಯ ಕೇರಳದಲ್ಲಿಯೂ ಭಾರೀ ಮಳೆ: ಕೇರಳ ರಾಜ್ಯದ ವಿವಿಧೆಡೆ ಭಾರೀ ಮಳೆ ಸುರಿಯುತ್ತಿದ್ದು, ಕೋಯಿಕ್ಕೋಡ್, ವಯನಾಡು, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಆರೆಂಜ್ ಆಲರ್ಟ್ ಘೋಷಿಸಲಾಗಿದೆ. ತೆಲಂಗಾಣದಲ್ಲೂ ಧಾರಾಕಾರ ಮಳೆಯಾಗುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಇಂದಿನಿಂದ ಮೂರು ದಿನಗಳ ಕಾಲ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com