ಬೆಂಗಳೂರು: ಅನಧಿಕೃತ ಬ್ರ್ಯಾಂಚ್; ಪ್ರತಿಷ್ಠಿತ ಶಾಲೆ ವಿರುದ್ಧ ಎಫ್ ಐ ಆರ್ ದಾಖಲು!

ರಾಜ್ಯದಲ್ಲಿ ಅನಧಿಕೃತ ಶಾಲೆಗಳು ನಾಯಿಕೊಡೆಗಳಂತೆ ತಲೆ ಎತ್ತಿವೆ. ಕೋವಿಡ್-19 ಸಾಂಕ್ರಾಮಿಕ ನಂತರ ಇಂತಹ ಶಾಲೆಗಳ  ಹಾವಳಿ  ವಿಪರೀತವಾಗಿದ್ದು, ಪೋಷಕರಿಂದ ಹಣ ಸುಲಿಗೆಯ ವಸೂಲಿಗೆ ಇಳಿದಿವೆ.
ಆರ್ಕಿಡ್ ಇಂಟರ್ ನ್ಯಾಷನಲ್ ಸ್ಕೂಲ್
ಆರ್ಕಿಡ್ ಇಂಟರ್ ನ್ಯಾಷನಲ್ ಸ್ಕೂಲ್

ಬೆಂಗಳೂರು: ರಾಜ್ಯದಲ್ಲಿ ಅನಧಿಕೃತ ಶಾಲೆಗಳು ನಾಯಿಕೊಡೆಗಳಂತೆ ತಲೆ ಎತ್ತಿವೆ. ಕೋವಿಡ್-19 ಸಾಂಕ್ರಾಮಿಕ ನಂತರ ಇಂತಹ ಶಾಲೆಗಳ ಹಾವಳಿ  ವಿಪರೀತವಾಗಿದ್ದು, ಪೋಷಕರಿಂದ ಹಣ ಸುಲಿಗೆಯ ವಸೂಲಿಗೆ ಇಳಿದಿವೆ. ಸರ್ಕಾರದಿಂದ ಮಾನ್ಯತೆ ಪಡೆಯದಿದ್ದರೂ ಶಿಕ್ಷಣದ ನೆಪದಲ್ಲಿ ಮಾಂಟೆಸರಿಯಿಂದಲೇ ಲಕ್ಷಾಂತರ ರೂಪಾಯಿ ಪೀಕುವ ಮೂಲಕ ಮಕ್ಕಳು ಹಾಗೂ ಪೋಷಕರ ಜೊತೆಗೆ ಚೆಲ್ಲಾಟ ವಾಡುತ್ತಿವೆ. ನಗರದ ಆರ್ಕಿಡ್ ದಿ ಇಂಟರ್ ನ್ಯಾಷನಲ್ ಸ್ಕೂಲ್ ಕೂಡಾ ಮೇಲೂ ಇಂತಹ ಆರೋಪ ಕೇಳಿಬಂದಿದೆ. 

ಶಿಕ್ಷಣ ಇಲಾಖೆಯಿಂದ ಅನುಮತಿ ಪಡೆಯದೆ ಪೋಷಕರಿಂದ ಹಣ ಪಡೆದು ಮಕ್ಕಳನ್ನು ದಾಖಲಾತಿ ಮಾಡಿಕೊಂಡಿದ್ದ ಮಾಗಡಿ ರಸ್ತೆ ಹೊಸಹಳ್ಳಿ ಗೊಲ್ಲರಪಾಳ್ಯದ ಆರ್ಕಿಡ್ ದಿ ಇಂಟರ್ ನ್ಯಾಷನಲ್ ಸ್ಕೂಲ್ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ. ಈ ಶಾಲೆಯನ್ನು ಇದೀಗ ಬಂದ್ ಮಾಡಲಾಗಿದ್ದು, ಅಲ್ಲಿ ವ್ಯಾಸಂಗ ಮಾಡುತ್ತಿರುವ ಸುಮಾರು 60 ವಿದ್ಯಾರ್ಥಿಯರನ್ನು ಸುತ್ತಮುತ್ತಲಿನ ಅಧಿಕೃತ ಶಾಲೆಗಳಿಗೆ ಸ್ಥಳಾಂತರ ಮಾಡಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ತಿಳಿಸಿದ್ದಾರೆ.

ಈ ಮಧ್ಯೆ ಫೀಸ್ ಸಂಗ್ರಹಿಸುವ ನೆಪದಲ್ಲಿ ಹಣವನ್ನು ಶಾಲೆ ದುರ್ಬಳಕೆ ಮಾಡಿಕೊಂಡಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ಸಂಬಂಧ ಪೋಷಕರಿಂದ 20ಕ್ಕೂ ಹೆಚ್ಚು ಕೇಸ್ ಗಳು ದಾಖಲಾಗಿದೆ. ಬಿಇಒ ನೀಡಿದ ದೂರಿನ ಆಧಾರದ ಮೇಲೆ ಶಾಲೆ ವಿರುದ್ಧ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೂರ್ವ ಡಿಸಿಪಿ ಲಕ್ಷ್ಮಣ್ ನಿಂಬರ್ಗಿ ಹೇಳಿದ್ದಾರೆ.

ನ್ಯಾಯಾಲಯದ ಆದೇಶ ಪಾಲಿಸದಿರುವುದು ಮಾತ್ರವಲ್ಲದೇ, ರೆರಾ ಕಾಯ್ದೆ ಉಲ್ಲಂಘನೆ ಮತ್ತು ಶಾಲೆ ವಿರುದ್ಧ ಶಿಕ್ಷಕರು ಶಿಕ್ಷಣ ಇಲಾಖೆಗೆ ಅನೇಕ ದೂರುಗಳನ್ನು ಸಲ್ಲಿಸಿದ ನಂತರ ಬಿಇಒ ಕ್ರಮ ಕೈಗೊಂಡಿದ್ದಾರೆ. 

ಮುಂಬೈನಲ್ಲಿ ಕೇಂದ್ರ ಕಚೇರಿ ಹೊಂದಿರುವ ಈ ಶಾಲೆಯ ಹಲವು ಬ್ರಾಂಚ್ ಗಳು ನಗರದಲ್ಲಿದ್ದು, ಬೆಂಗಳೂರಿನಲ್ಲಿ ನಡೆಯುತ್ತಿರುವ ಅನೇಕ ಬ್ರಾಂಚ್ ಗಳಲ್ಲಿ ಹಲವಾರು ಅಸಂಗತತೆಯನ್ನು ಪೋಷಕರು, ಹೋರಾಟಗಾರರು ಗಮನಿಸಿದ್ದಾರೆ. ಶಾಲೆಯನ್ನು ನೋಂದಾಯಿಸಲಾಗಿದೆಯೇ ಅಥವಾ ಸಂಬಂಧಿತ ಅಗ್ನಿ ಸುರಕ್ಷತೆ ಮತ್ತು ಕಟ್ಟಡ ಸುರಕ್ಷತೆಯ ಅನುಮೋದನೆಗಳನ್ನು ಹೊಂದಿದ್ದಾರೆಯೇ ಎಂಬುದನ್ನು ತನಿಖೆ ನಡೆಸಿದ್ದಾರೆ.

ಅನೇಕ ಶಾಲೆಗಳಲ್ಲಿ ಇಂತಹ ಸಮಸ್ಯೆಗಳು ಸಾಮಾನ್ಯವಾಗಿದೆ. ವಿಶೇಷವಾಗಿ ಆರ್ಕಿಡ್ ಇಂಟರ್ ನ್ಯಾಷನಲ್  ನಂತಹ ಶಾಲೆಯಲ್ಲಿ ಇದು ಹೆಚ್ಚಾಗಿದೆ. ಹಣ ದುರುಪಯೋಗ ಸಂಬಂಧ ಶಾಲೆಯ ಪ್ರಿನ್ಸಿಪಾಲ್ ಮತ್ತು ಕಾರ್ಯದರ್ಶಿಯನ್ನು ಕೂಡಲೇ ಬಂಧಿಸಬೇಕಾಗಿದೆ ಎಂದು ಕರ್ನಾಟಕ ರಾಜ್ಯ ಖಾಸಗಿ ಶಾಲೆ ಮತ್ತು ಕಾಲೇಜು ಪೋಷಕರ ಸಂಘಗಳ ಸಮನ್ವಯ ವೇದಿಕೆ ಅಧ್ಯಕ್ಷ ಬಿ ಎನ್ ಯೋಗಾನಂದ್ ಒತ್ತಾಯಿಸಿದ್ದಾರೆ.

ಆರ್ಕಿಡ್ಸ್ ಇಂಟರ್ ನ್ಯಾಷನಲ್ ಸ್ಕೂಲ್ ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಿ, ಶಾಲಾ ಶಾಖೆಯು ಎಲ್ಲಾ ಅಗತ್ಯ ಅನುಮತಿಗಳಿಗಾಗಿ ಅರ್ಜಿ ಸಲ್ಲಿಸಿತ್ತು, ಆದರೆ ಇತ್ತೀಚೆಗೆ ಅದನ್ನು ತಿರಸ್ಕರಿಸಲಾಗಿದೆ ಎಂದು ತಿಳಿಸಿತು. "ನಾವು ರಾಜ್ಯ ಶಿಕ್ಷಣ ಇಲಾಖೆಯಿಂದ ಅಗತ್ಯವಿರುವ ಎಲ್ಲಾ ಅನುಮತಿಗಳು, ಪರವಾನಗಿಗಳು ಮತ್ತು ಅಧಿಕಾರಗಳಿಗೆ ಅರ್ಜಿ ಸಲ್ಲಿಸಿದ್ದೇವೆ ಮತ್ತು ನಾವು ಅನುಮೋದನೆಗೆ ನಿರೀಕ್ಷಿಸುತ್ತಿದ್ದೆವು. ನಮ್ಮ ನಡೆಯುತ್ತಿರುವ ನಿರ್ಮಾಣ ಕಾರ್ಯವನ್ನು ನೋಡಿ ಮತ್ತು ನಮ್ಮ ಮೂಲಸೌಕರ್ಯ ಮತ್ತು ಬ್ರಾಂಡ್ ಹೆಸರನ್ನು ನೋಡಿ, ಅನೇಕ ಪೋಷಕರು ಅವರ ಮಕ್ಕಳನ್ನು ಶಾಲೆಗೆ ಸೇರಿಸಲು ಆಸಕ್ತಿ ತೋರಿಸಿದ್ದಾರೆ. ಕೆಲವು ಸ್ಪಷ್ಟೀಕರಣಗಳ ಅಗತ್ಯವಿರುವ ಕಾರಣವಾಗಿ ನಮ್ಮ ಅಗತ್ಯ ಅನುಮತಿಗಳಿಗೆ ಅನುಮೋದನೆ ಸಿಕ್ಕಿಲ್ಲ. ನಾವು ಮತ್ತೆ ಅರ್ಜಿ ಸಲ್ಲಿಸಿ ಎಲ್ಲಾ ಅನುಮೋದನೆಗಳಿಗೆ ಮನವಿ ಮಾಡಿದ್ದೇವೆ.” ಎಂದು ಶಾಲೆ ಪ್ರತಿಕ್ರಿಯಿಸಿದೆ. ಈ ಮಧ್ಯೆ, ದಾಖಲಾತಿಗಾಗಿ ಪೋಷಕರನ್ನು ನಮ್ಮದೇ ಶಾಲೆಯ ಇತರ ಬ್ರ್ಯಾಂಚ್ ಗಳಿಗೆ ಕಳಿಸಲಾಗಿದೆ ಎಂದು ಶಾಲೆ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com