
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಶಶಿಕಲಾ ಜೊಲ್ಲೆ, ಗೋವಿಂದ ಕಾರಜೋಳ ಮತ್ತಿತರರು
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದು ರಾಜ್ಯದಿಂದ ಕಾಶಿ ಯಾತ್ರೆ ಕೈಗೊಂಡ ಯಾತ್ರಾರ್ಥಿಗಳಿಗೆ ಸಹಾಯಧನವನ್ನು ಡಿಬಿಟಿ ಮೂಲಕ ಆನ್ ಲೈನ್ ನಲ್ಲಿ ವರ್ಗಾವಣೆ ಮಾಡಿದರು. ಇತ್ತೀಚೆಗೆ ಕಾಶಿಯಾತ್ರೆಗೆ ತೆರಳಿದ್ದ 10 ಜನ ಯಾತ್ರಾರ್ಥಿಗಳಿಗೆ ಸಾಂಕೇತಿಕವಾಗಿ ಸಹಾಯಧನ ವಿತರಿಸಲಾಯಿತು.
ನಂತರ ಮಾತನಾಡಿದ ಮುಖ್ಯಮಂತ್ರಿ, ದಿವ್ಯ ಕಾಶಿ – ಭವ್ಯ ಕಾಶಿಯಾಗಿ ಅನಾವರಣಗೊಂಡಿರುವ ಕಾಶಿಯನ್ನು ರಾಜ್ಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸಂದರ್ಶಿಸಲಿ ಎನ್ನುವ ಉದ್ದೇಶದಿಂದ ಸಹಾಯಧನ ಯೋಜನೆ ಪ್ರಾರಂಭಿಸಲಾಗಿದೆ. ಈ ಬಾರಿಯ ಆಯವ್ಯಯದಲ್ಲಿ ಇದಕ್ಕಾಗಿ ಅಗತ್ಯ ಅನುದಾನವನ್ನೂ ನೀಡಲಾಗಿದೆ. ಯಾತ್ರಾರ್ಥಿಗಳು ಸುಲಭವಾಗಿ ಸಹಾಯಧನ ಪಡೆದುಕೊಳ್ಳುವುದಕ್ಕೆ ಅನುವು ಮಾಡಿಕೊಡುವ ವೆಬ್‌ಪೋರ್ಟಲ್‌ನ್ನು ಸೇವಾಸಿಂಧು ವೆಬ್‌ಪೋರ್ಟ್‌ಲ್‌ನಲ್ಲಿ ಸಿದ್ದಪಡಿಸಲಾಗಿದೆ. ಯಾತ್ರಾರ್ಥಿಗಳು ಕಾಶಿಗೆ ಭೇಟಿ ನೀಡಿದ ಸಂಧರ್ಭದಲ್ಲಿ ಅಲ್ಲಿನ ಕರ್ನಾಟಕ ಛತ್ರದಲ್ಲಿ ತಮ್ಮ ಹೆಸರು ನೊಂದಣಿ ಮಾಡಿಸಿಕೊಂಡು ಅಗತ್ಯ ದಾಖಲಾತಿಗಳನ್ನು ವೆಬ್‌ಪೋರ್ಟ್‌ಲ್ ಮೂಲಕ ಸಲ್ಲಿಸಬಹುದು ಎಂದು ಹೇಳಿದರು.
ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವರಾದ ಶಶಿಕಲಾ ಜೊಲ್ಲೆ ಮಾತನಾಡಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮುಜರಾಯಿ ಇಲಾಖೆಗೆ ಬಹಳಷ್ಟು ಸಹಕಾರ ನೀಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ದೇವಾಲಯಗಳ ಸಮಗ್ರ ಅಭಿವೃದ್ದಿಯ ಕನಸನ್ನ ನನಸು ಮಾಡುವ ನಿಟ್ಟಿನಲ್ಲಿ ಹೆಚ್ಚಿನ ಬಲ ತುಂಬಿದ್ದಾರೆ. ಕಳೆದ 10 ವರ್ಷಗಳಿಗೆ ಹೋಲಿಸಿದಲ್ಲಿ ಅತಿಹೆಚ್ಚು ಅನುದಾನ ಈ ಆರ್ಥಿಕ ವರ್ಷದಲ್ಲಿ ನೀಡಿದ್ದಾರೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ 693 ಕೋಟಿ ರೂಪಾಯಿಗಳಷ್ಟು ಬೃಹತ್ ಅನುದಾನ ನೀಡಿದ್ದಾರೆ ಎಂದು ತಿಳಿಸಿದರು.
ಇಂದು ಮಾನ್ಯ ಮುಖ್ಯಮಂತ್ರಿ ಶ್ರೀ @BSBommai ಅವರು ಕರ್ನಾಟಕ ಮುಜರಾಯಿ ಇಲಾಖೆಯ ವತಿಯಿಂದ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಆಯೋಜಿಸಿರುವ ರಾಜ್ಯದಿಂದ ಕಾಶಿ ಯಾತ್ರೆ ಕೈಗೊಂಡ ಯಾತ್ರಾರ್ಥಿಗಳಿಗೆ ಸಹಾಯಧನವನ್ನು ನೇರವಾಗಿ ಡಿ.ಬಿ.ಟಿ. ಮೂಲಕ ಆನ್ ಲೈನ್ ನಲ್ಲಿ ವರ್ಗಾವಣೆ ಮಾಡಿದರು.
— CM of Karnataka (@CMofKarnataka) July 14, 2022
1/2 pic.twitter.com/1b7NnvYVGu
ಜೀವನದಲ್ಲಿ ಒಮ್ಮೆಯಾದರೂ ಕಾಶಿಗೆ ಭೇಟಿ ಮಾಡಬೇಕು ಎನ್ನುವುದು ಬಹಳಷ್ಟು ಜನರ ಅಭಿಲಾಷೆಯಾಗಿರುತ್ತದೆ. ಅದಕ್ಕೆ ಪ್ರೋತ್ಸಾಹ ಧನ ನೀಡಬೇಕು ಎನ್ನುವುದು ನನ್ನ ಬಹಳದಿನದ ಆಶಯವಾಗಿತ್ತು. ಇದಕ್ಕೆ ಸೂಕ್ತವಾಗಿ ಸ್ಪಂದಿಸಿದ ಮುಖ್ಯಮಂತ್ರಿಗಳು ಆಯವ್ಯಯದಲ್ಲಿ ಘೋಷಣೆ ಮಾಡಿದರು. ಅಲ್ಲದೇ, ಸೂಕ್ತ ಅನುದಾನವನ್ನೂ ಒದಗಿಸಿದ್ದಾರೆ. ಹಾಗೆಯೇ, ಭಾರತ್ ಗೌರವ್ ಯೋಜನೆ ಪ್ರಾರಂಭಕ್ಕೂ ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ರಾಜ್ಯದ 30 ಸಾವಿರ ಕಾಶಿ ಯಾತ್ರಾರ್ಥಿಗಳಿಗೆ ತಲಾ 5 ಸಾವಿರ ರೂ. ಸಹಾಯಧನ: ಮಾರ್ಗಸೂಚಿ ಬಿಡುಗಡೆ
ಏಪ್ರಿಲ್ 1, 2022 ರಿಂದ ಜುಲೈ 20, 2022 ರ ವರೆಗೆ ಕಾಶಿ ಯಾತ್ರೆಯನ್ನು ಕೈಗೊಂಡಿರುವ ಜನರು ಆಫ್‌ಲೈನ್ ಅರ್ಜಿಗಳನ್ನು ಮುಜರಾಯಿ ಆಯುಕ್ತರ ಕಚೇರಿಗೆ ಸಲ್ಲಿಸುವ ಮೂಲಕ ಸಹಾಯಧನ ಪಡೆದುಕೊಳ್ಳಬಹುದಾಗಿದೆ. ಇದುವರೆಗೂ 500 ಕ್ಕೂ ಹೆಚ್ಚು ಆಫ್‌ಲೈನ್ ಅರ್ಜಿಗಳು ಸಲ್ಲಿಕೆಯಾಗಿವೆ.
ಇನ್ನು ಮುಂದೆ ಕಾಶಿ ಯಾತ್ರೆಯನ್ನು ಕೈಗೊಂಡು ಸರ್ಕಾರದ ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸುವ ಯಾತ್ರಾರ್ಥಿಗಳು ಸರ್ಕಾರದ ಮಾರ್ಗಸೂಚಿಯ ಅನ್ವಯ ಸಂಬಂಧಿಸಿದ ದಾಖಲಾತಿಗಳನ್ನು ಇಲಾಖೆಯ ವೆಬ್‌ಸೈಟ್ https://itms.kar.nic.in/ ಮತ್ತು ಸೇವಾ ಸಿಂಧು ಮೂಲಕ ವೆಬ್ ಪೊರ್ಟ್‌ಲ್‌ನಲ್ಲಿ (https://sevasindhu.karnataka.gov.in/) ಅಪ್‌ಲೋಡ್ ಮಾಡಬೇಕು. ಈ ರೀತಿಯಾಗಿ ಅಪ್‌ಲೋಡ್ ಮಾಡಲಾದ ದಾಖಲೆಗಳನ್ನು ಪರಿಶೀಲಿಸಿ ಅರ್ಜಿದಾರರ ಆಧಾರ್ ಲಿಂಕ್ ಹೊಂದಿರತಕ್ಕಂತಹ ಬ್ಯಾಂಕ್ ಖಾತೆಗೆ ರೂ. 5,000 ಗಳ ಸಹಾಯಧನವನ್ನು ನೇರವಾಗಿ ಡಿ.ಬಿ.ಟಿ ಮೂಲಕ ಜಮಾ ಮಾಡಲಾಗುವುದು ಎಂದು ಮಾಹಿತಿ ನೀಡಿದರು.