ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ಮತ್ತೆ ಕಂಪಿಸಿದ ಭೂಮಿ, ಧಾರಾಕಾರ ಮಳೆ ಮುಂದುವರಿಕೆ

ಜಿಲ್ಲೆಯ ಹಲವು ಗ್ರಾಮಗಳ ಜನತೆಗೆ ಇಂದು ಮತ್ತೆ ಭೂಮಿ ಕಂಪಿಸಿದ ಅನುಭವವಾಗಿದೆ. ಇಂದು ಬೆಳಗ್ಗೆ 10.10ರ ಸುಮಾರಿಗೆ ಚೆಂಬು, ಪೆರಾಜೆ, ಗೂನಡ್ಕ ವ್ಯಾಪ್ತಿಯ ಜನರಿಗೆ ಭೂಕಂಪನದ ಅನುಭವವಾಗಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೊಡಗು: ಜಿಲ್ಲೆಯ ಹಲವು ಗ್ರಾಮಗಳ ಜನತೆಗೆ ಇಂದು ಮತ್ತೆ ಭೂಮಿ ಕಂಪಿಸಿದ ಅನುಭವವಾಗಿದೆ. ಇಂದು ಬೆಳಗ್ಗೆ 10.10ರ ಸುಮಾರಿಗೆ ಚೆಂಬು, ಪೆರಾಜೆ, ಗೂನಡ್ಕ ವ್ಯಾಪ್ತಿಯ ಜನರಿಗೆ ಭೂಕಂಪನದ ಅನುಭವವಾಗಿದೆ. 

ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಗ್ರಾಮಗಳಾಗಿದ್ದು, ಜನರು ಆತಂಕಗೊಂಡಿದ್ದಾರೆ. ಕಳೆದ ಕೆಲದಿನಗಳಿಂದ ವ್ಯಾಪಕ ಮಳೆಯಾಗುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕು ಹಾಗೂ ಕೊಡಗು ಜಿಲ್ಲೆ ಮಡಿಕೇರಿ ಪ್ರದೇಶದ ಹಲವೆಡೆ ಕಳೆದ ಭಾನುವಾರವಷ್ಟೇ ಭೂಮಿ ಕಂಪಿಸಿತ್ತು. ಬೆಳಗ್ಗೆ 6.22ಕ್ಕೆ ಸಂಭವಿಸಿದ ಲಘು ಭೂಕಂಪದ ಕೇಂದ್ರ ಸುಳ್ಯ ತಾಲೂಕಿನ ಅರಂತೋಡು ಆಗಿತ್ತು. 

ಕಲ್ಲುಗುಂಡಿ ಮಠದಮೂಲೆ ಸಮೀಪ ತಾಜುದ್ದೀನ್‌ ಟರ್ಲಿ ಅವರ ಮನೆಯ ಹಿಂಬದಿ ಭೂಕಂಪನದ ಸಮಯದಲ್ಲಿ ಭೂಮಿ ಬಿರುಕು ಬಿಟ್ಟಿದ್ದು ಬರೆ ಕುಸಿದಿದೆ. ಮನೆಯ ಮೇಲೆ ಬರೆ ಕುಸಿದು ಬೀಳುವ ಆತಂಕದಲ್ಲಿದೆ. ಕೊಡಗಿನ ಗಡಿ ಗ್ರಾಮ ಚೆಂಬುವಿನ ಸುತ್ತಮುತ್ತ ಪ್ರದೇಶಗಳಲ್ಲಿ ಭೂಮಿ ಕಂಪಿಸಿರುವ ಅನುಭವ ಉಂಟಾಗಿದೆ. ಶನಿವಾರ ರಾತ್ರಿ ಭೂಮಿಯಿಂದ ಜೋರು ಶಬ್ದ ಕೇಳಿ ಬಂದಿತ್ತೆಂದು ಗ್ರಾಮಸ್ಥರು ಮಾಹಿತಿ ನೀಡಿದ್ದು, ಕಳೆದ ಭಾನುವಾರ ಬೆಳಗ್ಗೆ ಮತ್ತೆ ಜೋರಾದ ಶಬ್ದದೊಂದಿಗೆ ಭೂಕಂಪ ಸಂಭವಿಸಿತ್ತು. ಗೂನಡ್ಕ, ಕೊಯಿನಾಡಿನಲ್ಲೂ ಭೂಕಂಪದ ಅನುಭವವಾಗಿತ್ತು. 

ಭೂಕಂಪ ಅಧ್ಯಯನಕ್ಕೆ ಸಿಎಂ ಸೂಚನೆ: ಮೊನ್ನೆ ಕೊಡಗು ಜಿಲ್ಲೆ ಪ್ರವಾಸ ಮಾಡಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿದ್ದ ಸಿಎಂ ಬೊಮ್ಮಾಯಿ, ಭಾರಿ ಮಳೆಯಿಂದ ಭೂಕುಸಿತ ಮತ್ತು ಭೂಕಂಪನ ಸಂಭವಿಸಿರುವ ಕೊಡಗು ಜಿಲ್ಲೆಯಲ್ಲಿ 4 ಸಂಸ್ಥೆಗಳಿಂದ ಅಧ್ಯಯನ ನಡೆಸಲಾಗುವುದು ಎಂದು ಹೇಳಿದ್ದರು. 

ಭಾರೀ ಮಳೆ: ಈ ವರ್ಷ ಜೂನ್‌ನಿಂದ ಜಿಲ್ಲೆಯಲ್ಲಿ ಸುಮಾರು 40 ಇಂಚುಗಳಷ್ಟು ಮಳೆ ಬಿದ್ದು ಕೊಡಗಿನಾದ್ಯಂತ ಹಾನಿಯನ್ನುಂಟುಮಾಡಿದೆ. ಜಿಲ್ಲೆಯ ಹಲವು ಹೋಬಳಿಗಳಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.500 ರಷ್ಟು ಅಧಿಕ ಮಳೆಯಾಗಿದೆ.

ಜಿಲ್ಲೆಯು ಆರೆಂಜ್ ಅಲರ್ಟ್‌ನಲ್ಲಿದ್ದು, ಆಸ್ತಿ ಮತ್ತು ರಸ್ತೆಗಳ ಹಾನಿಯ ಪ್ರಮಾಣವು ಹೆಚ್ಚುತ್ತಿದೆ. ಸೋಮವಾರಪೇಟೆ ತಾಲೂಕಿನ ಶಾಂತಳ್ಳಿ ಹೋಬಳಿಯಲ್ಲಿ ಈ ವರ್ಷ ಶೇ.577ರಷ್ಟು ಅಧಿಕ ಮಳೆಯಾಗಿದೆ. ಹಾರಂಗಿ ಜಲಾಶಯದ ನೀರಿನ ಮಟ್ಟ 2,854.17 ಅಡಿಗಳಷ್ಟಿದ್ದು ಗರಿಷ್ಠ ಸಾಮರ್ಥ್ಯದ 2,859 ಅಡಿ ಸಾಮರ್ಥ್ಯಕ್ಕೆ 13,166 ಕ್ಯೂಸೆಕ್ ಹೊರಹರಿವು ಇದೆ.

ಹಲವು ಸಣ್ಣಪುಟ್ಟ ಭೂಕುಸಿತಗಳು ವರದಿಯಾಗಿವೆ. ಮಂಗಳೂರು-ಮಡಿಕೇರಿ ಹೆದ್ದಾರಿ, ಭಾಗಮಂಡಲ-ಕರಿಕೆ, ತಾಳತ್ಮನೆ-ಮಡಿಕೇರಿ, ಮಡಿಕೇರಿ-ಕುಟ್ಟ ಹೆದ್ದಾರಿ ಮತ್ತು ಹಟ್ಟಿಹೊಳೆ ರಸ್ತೆ ಸೇರಿದಂತೆ ಹಲವಾರು ಗ್ರಾಮೀಣ ರಸ್ತೆಗಳು ಭೂಕುಸಿತದಿಂದ ಹಾನಿಗೊಳಗಾಗಿವೆ.

ಲೋಕೋಪಯೋಗಿ ಇಲಾಖೆಗೆ 2,975.50 ಲಕ್ಷ ರೂ.ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಮೊನ್ನೆ ಬುಧವಾರದವರೆಗೆ, ನಿರಂತರ ಮಳೆಯಿಂದಾಗಿ ನೂರಕ್ಕೂ ಹೆಚ್ಚು ಮನೆಗಳು ತೀವ್ರ ಮತ್ತು ಭಾಗಶಃ ಹಾನಿಗೊಳಗಾಗಿವೆ. ಮಡಿಕೇರಿ, ವಿರಾಜಪೇಟೆ ಮತ್ತು ಕುಶಾಲನಗರ ತಾಲೂಕಿನ ನಿವಾಸಿಗಳು ಸೇರಿದಂತೆ ಒಟ್ಟು 41 ಕುಟುಂಬಗಳನ್ನು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com