ಭಾರಿ ಮಳೆ: ಕೊಡಗು ಜಿಲ್ಲಾಡಳಿತ ಕಚೇರಿಯ ತಡೆಗೋಡೆ ಕುಸಿಯುವ ಭೀತಿ!

ಮುಂಜಾಗ್ರತಾ ಕ್ರಮವಾಗಿ ಮಡಿಕೇರಿಯ ಜಿಲ್ಲಾಧಿಕಾರಿ ಕಚೇರಿಗೆ 7 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ತಡೆಗೋಡೆಯೂ ಕೂಡ ಇದೀಗ ಕುಸಿಯುವ ಹಂತದಲ್ಲಿದ್ದು, ಮುಂಜಾಗ್ರತಾ ಕ್ರಮವಾಗಿ ಸಂಚಾರ ನಿರ್ಬಂಧಿಸಲಾಗಿದೆ. 
ತಡೆಗೋಡೆ ಕುಸಿಯುವ ಭೀತಿ
ತಡೆಗೋಡೆ ಕುಸಿಯುವ ಭೀತಿ

ಮಡಿಕೇರಿ: ಮುಂಜಾಗ್ರತಾ ಕ್ರಮವಾಗಿ ಮಡಿಕೇರಿಯ ಜಿಲ್ಲಾಧಿಕಾರಿ ಕಚೇರಿಗೆ 7 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ತಡೆಗೋಡೆಯೂ ಕೂಡ ಇದೀಗ ಕುಸಿಯುವ ಹಂತದಲ್ಲಿದ್ದು, ಮುಂಜಾಗ್ರತಾ ಕ್ರಮವಾಗಿ ಸಂಚಾರ ನಿರ್ಬಂಧಿಸಲಾಗಿದೆ. 

ಹೌದು.. ಕೊಡಗು ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಒಂದಷ್ಟು ತಗ್ಗಿದ್ದರೂ ಆಗುತ್ತಿರುವ ಸಮಸ್ಯೆಗಳು ಮಾತ್ರ ಕಡಿಮೆ ಏನಲ್ಲ. ಜಿಲ್ಲೆಯ ಮಳೆಹಾನಿಯನ್ನು ನಿಭಾಯಿಸಲು ಸಜ್ಜಾಗಿರುವ ಜಿಲ್ಲಾಡಳಿತ ಭವನದ ಬುಡದಲ್ಲಿಯೇ ಸಮಸ್ಯೆ ಎದುರಾಗಿದೆ. 2018 ರಲ್ಲಿ ಸಣ್ಣ ಪ್ರಮಾಣದಲ್ಲಿ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಕುಸಿತವಾಗಿತ್ತು. ಅದು ಮತ್ತಷ್ಟು ಕುಸಿಯದಂತೆ ಕೋಟ್ಯಂತರ ರೂಪಾಯಿ ವ್ಯಯಿಸಿ ತಡೆಗೋಡೆ ಮಾಡಲಾಗುತ್ತಿತ್ತು. ಆದರೆ ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಇಲ್ಲಿ ತಡೆಗೋಡೆ ಕುಸಿದು ಬೀಳುವ ಸ್ಥಿತಿ ಎದುರಾಗಿದೆ. ತಡೆಗೋಡೆಗೆ ಅಳವಡಿಸಿದ್ದ ಸ್ಲ್ಯಾಬ್ ಗಳು ಸಂಪೂರ್ಣ ಹೊರಕ್ಕೆ ಭಾಗಿದ್ದು ಯಾವುದೇ ಕ್ಷಣದಲ್ಲಾದರೂ ಹೆದ್ದಾರಿ 275 ಕ್ಕೆ ಅಡ್ಡಲಾಗಿ ತಡೆಗೋಡೆ ಕುಸಿದು ಬೀಳುವ ಸಾಧ್ಯತೆ ನಿಚ್ಚಳವಾಗಿದೆ.

ಕೋಟಿ ಕೋಟಿ ವ್ಯಯಿಸಿ ಮಾಡುತ್ತಿದ್ದ ತಡೆಗೋಡೆ ಕುಸಿದು ಬಿದ್ದಿದ್ದೇ ಆದಲ್ಲಿ ಹೆದ್ದಾರಿಯ ಕೆಳಭಾಗದಲ್ಲೇ ಇರುವ ಐದಾರು ಮನೆಗಳು ಸಾವಿರಾರು ಲೋಡ್ ಮಣ್ಣಿನಲ್ಲಿ ಸಮಾಧಿಯಾಗಿ ಬಿಡುವ ಆತಂಕವಿದೆ. ಕೊಡಗು ಜಿಲ್ಲೆಯಲ್ಲಿ ಭೂಕುಸಿತ ಪ್ರಕರಣಗಳು 2018 ರಿಂದಲೂ ನಿರಂತರವಾಗಿ ನಡೆಯುತ್ತಲೇ ಇವೆ.

ತಡೆಗೋಡೆಯಲ್ಲಿ ಬಿರುಕು ಮೂಡಿದ್ದ ಹಿನ್ನೆಲೆಯಲ್ಲಿ ಸ್ಲ್ಯಾಬ್ ಗಳಿಗೆ ರಂಧ್ರಗಳನ್ನು ಕೊರೆದು ಅವುಗಳಿಗೆ ಕೆಲವು ಬೋಲ್ಟ್ ಗಳನ್ನು ಹಾಕಲು ಪ್ರಯತ್ನಿಸಲಾಗಿತ್ತು. ಆದರೆ ಅವುಗಳು ಅತೀ ಹೆಚ್ಚು ಹೊರಕ್ಕೆಬಾಗಿದ್ದರಿಂದ ತಕ್ಷಣವೇ ಎಚ್ಚೆತ್ತುಕೊಂಡು ಅಧಿಕಾರಿಗಳು ಅಷ್ಟಕ್ಕೇ ಕೆಲಸವನ್ನು ನಿಲ್ಲಿಸಿ ಮಡಿಕೇರಿಯಿಂದ ಮಂಗಳೂರು ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ವಾಹನಗಳ ಸಂಚಾರವನ್ನು ಸಂಪೂರ್ಣ ನಿಷೇಧಿಸಿದ್ದರು.

ಆಗಸ್ಟ್ 2020 ರಲ್ಲಿ, ಕೊಡಗು ಜಿಲ್ಲಾಡಳಿತ, ಡಿಸಿ ಕಚೇರಿ ಸ್ಥಳದಲ್ಲಿ ಸಣ್ಣ ಭೂಕುಸಿತ ವರದಿಯಾಗಿತ್ತು. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕಛೇರಿ ಪ್ರದೇಶದ ಹಿಂಭಾಗದಲ್ಲಿ ಭೂಮಿ ಕುಸಿದಿದ್ದು, ಇದನ್ನು ಟಾರ್ಪಾಲಿನ್ ಹೊದಿಕೆಗಳನ್ನು ಬಳಸಿ ರಕ್ಷಿಸುವವರೆಗೂ ಡಿಸಿ ಕಚೇರಿಯನ್ನು ಸ್ಥಳಾಂತರಿಸಲಾಗಿತ್ತು.  ಇದಲ್ಲದೆ, ಡಿಸಿ ಅನ್ನೀಸ್ ಕಣ್ಮಣಿ ಜಾಯ್ ಅವರ ಅವಧಿಯಲ್ಲಿ ಡಿಸಿ ಕಚೇರಿ ಕಟ್ಟಡವನ್ನು ರಕ್ಷಿಸಲು ರೂ 7 ಕೋಟಿ ರಿಟೈನಿಂಗ್ ವಾಲ್ ಯೋಜನೆಯನ್ನು ಮಂಜೂರು ಮಾಡಲಾಗಿತ್ತು. ಈ ಯೋಜನೆಯು ಜನವರಿ 2022 ರೊಳಗೆ ಪೂರ್ಣಗೊಳ್ಳುವ ಭರವಸೆ ನೀಡಿದ್ದರೂ, ಈ ಕಾಮಗಾರಿ ಇನ್ನೂ ನಡೆಯುತ್ತಿದೆ. ಅದಾಗಲೇ ಮತ್ತೆ ಮಳೆಯಿಂದಾಗಿ ಈ ಗೋಡೆ ಕುಸಿಯುವ ಭೀತಿ ಎದುರಾಗಿದೆ.

ಭಾರೀ ಮಳೆಯ ನಂತರ ಜರ್ಮನ್ ತಂತ್ರಜ್ಞಾನದೊಂದಿಗೆ ನಿರ್ಮಿಸಲಾಗುತ್ತಿರುವ ಈ ತಡೆಗೋಡೆ ಈಗ ಕುಸಿಯುವ ಭೀತಿ ಎದುರಾಗಿದೆ. 40 ಅಡಿ ಎತ್ತರ 140 ಮೀಟರ್ ಉದ್ದದ ತಡೆಗೋಡೆಯ ಸ್ಲ್ಯಾಬ್‌ಗಳು ಉಬ್ಬುತ್ತಿದ್ದು, ಕುಸಿಯುವ ಅಪಾಯವಿದೆ. ಕಾಮಗಾರಿ ಅಪೂರ್ಣವಾದ ಗೋಡೆಯ ಮೇಲೆ ಟಾರ್ಪೌಲಿನ್‌ಗಳನ್ನು ಹೊದಿಸಲಾಗಿದ್ದು, ಗೋಡೆಯೊಳಗೆ ನೀರು ಸೋರಿಕೆಯಾಗಿ ಗೋಡೆ ಸಡಿಲಗೊಂಡಿದೆ ಎನ್ನಲಾಗಿದೆ.  

ಸಂಚಾರ ನಿರ್ಬಂಧ
ಮುಂಜಾಗ್ರತಾ ಕ್ರಮವಾಗಿ ನಗರದ ತಿಮ್ಮಯ್ಯ ವೃತ್ತದಿಂದ ಮಡಿಕೇರಿ-ಮಂಗಳೂರು ರಸ್ತೆ (ತಡೆಗೋಡೆ ಪಕ್ಕ) ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಮಡಿಕೇರಿ-ಮಂಗಳೂರು ಎನ್‌ಎಚ್ 275 ತಲುಪಲು ಪ್ರಯಾಣಿಕರು ಈಗ ಮೇಕೇರಿ ರಸ್ತೆಯ ಮೂಲಕ ತಾಳತ್ಮನೆ ಕಡೆಗೆ ಹೋಗಬೇಕಾದ ಅನಿವಾರ್ಯತೆ ಇದೆ. ಭಾನುವಾರದಂದು ಮೇಕೇರಿ ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಾಯಿತು. ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಲ್ಲಿಯೇ ಮಂಗಳೂರು ರಸ್ತೆಗೆ ಅಡ್ಡಲಾಗಿ ಬ್ಯಾರಿಕೇಡ್ ಹಾಕಿ ಸಂಚಾರ ನಿರ್ಬಂಧಿಸಲಾಗಿದೆ. ಬದಲಾಗಿ ಮಡಿಕೇರಿಯಿಂದ ವಿರಾಜಪೇಟೆ ರಸ್ತೆಯಲ್ಲಿ ಮೇಕೇರಿವರೆಗೆ ಸಾಗಿ ನಂತರ ಭಾಗಮಂಡಲ ರಸ್ತೆಗೆ ಹೋಗಿ ಪುನಃ ಮಂಗಳೂರು ರಸ್ತೆಗೆ ಬಂದು ಸೇರಬೇಕಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಡಿಸಿ ಬಿ.ಸಿ.ಸತೀಶ್ ಅವರು, ಯೋಜನೆಯನ್ನು ಲೋಕೋಪಯೋಗಿ ಇಲಾಖೆ ಕೈಗೆತ್ತಿಕೊಂಡಿದೆ. ಕೆಲವು ಎಂಜಿನಿಯರ್‌ಗಳು ಸ್ಥಳ ಪರಿಶೀಲನೆ ನಡೆಸಿದ್ದು, ಹಿರಿಯ ಎಂಜಿನಿಯರ್‌ಗಳು ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ಪರಿಶೀಲನೆ ನಂತರ ತಾತ್ಕಾಲಿಕ ಪರಿಹಾರ ಕಾಮಗಾರಿ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಅಂತೆಯೇ ತಾತ್ಕಾಲಿಕ ಪರಿಹಾರವಾಗಿ ಸ್ಥಳದಲ್ಲಿ ಮರಳು ಚೀಲಗಳು ಮತ್ತು ಇತರ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸಂಬಂಧಿಸಿದ ಪಿಡಬ್ಲ್ಯುಡಿ ಎಂಜಿನಿಯರ್ ದೃಢಪಡಿಸಿದರು. ಆದರೆ, ಸತತ ಮಳೆಯಿಂದಾಗಿ ಈ ಕಾರ್ಯಕೂಡ ವಿಳಂಬವಾಗುತ್ತಿದೆ ಎನ್ನಲಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com