ಕೊಲೆ ತಡೆಯದ ಬೊಮ್ಮಾಯಿ ಅವರು 'ಬುಲ್ಡೋಜರ್' ಬಗ್ಗೆ ಮಾತನಾಡುತ್ತಿದ್ದಾರೆ: ಎಚ್.ಡಿ. ಕುಮಾರಸ್ವಾಮಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾರದಿಂದೀಚೆಗೆ 3ನೇ ಕೊಲೆ ನಡೆದಿದ್ದು, ಸದ್ಯ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಾಗಿದೆ. ಬಿಜೆಪಿ ಯುವ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಯ ಬೆನ್ನಲ್ಲೇ ಮಂಗಳೂರು ಹೊರವಲಯ ಸುರತ್ಕಲ್ ನಲ್ಲಿ ಕಳೆದ ರಾತ್ರಿ ಫಾಜಿಲ್ ಮಂಗಲಪೇಟೆ ಎಂಬ 23 ವರ್ಷದ ಮುಸ್ಲಿಂ ಯುವಕನನ್ನು ದುಷ್ಕರ್ಮಿಗಳು ಅಟ್ಟಾಡಿಸಿಕೊಂಡು ಕೊಂದಿದ್ದಾರೆ.
ಎಚ್.ಡಿ. ಕುಮಾರಸ್ವಾಮಿ
ಎಚ್.ಡಿ. ಕುಮಾರಸ್ವಾಮಿ
Updated on

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಾಗಿದೆ. ಎರಡು ವಾರದ ಅಂತರದಲ್ಲಿ ಮೂವರ ಕೊಲೆಯಾಗಿದ್ದು, ಕಾನೂನು ಸುವ್ಯವಸ್ಥೆಯ ಬಗ್ಗೆ ಪ್ರಶ್ನೆಗಳು ಏಳುತ್ತಿವೆ. ಹೀಗಿರುವಾಗ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕೂಡ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಶಿಕ್ಷಣ, ಬ್ಯಾಂಕಿಂಗ್, ಕೈಗಾರಿಕೆ, ಸೃಜನಶೀಲತೆ, ಉದ್ಯಮಶೀಲತೆಯ ತವರು ಕರಾವಳಿ ಈಗ ಕೊಲೆಗಳ ಆಡುಂಬೋಲವಾಗಿದೆ. 10 ದಿನಗಳ ಅವಧಿಯಲ್ಲಿ 3 ಕೊಲೆ!. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ, ಆಂತರಿಕ ಭದ್ರತೆ ಸಂಪೂರ್ಣವಾಗಿ ಕುಸಿದಿರುವುದಕ್ಕೆ ಇದೇ ಸಾಕ್ಷಿ ಎಂದಿರುವ ಅವರು ಕರಾವಳಿಯಲ್ಲಿ ಶಾಂತಿ ನೆಲೆಸಲಿ ಎಂಬ ಹ್ಯಾಷ್ ಟ್ಯಾಗ್ ಹಾಕಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳೂರಿನಲ್ಲಿ ಇರುವಾಗಲೇ 3ನೇ ಕೊಲೆ ಆಗಿದೆ. ಅಷ್ಟರಲ್ಲಿ ಸಿಎಂ ಸಾಹೇಬರು ಜಿಲ್ಲೆಯಿಂದ ಕಾಲ್ಕಿತ್ತಿದ್ದಾರೆ. ಅಲ್ಲೇ ಉಳಿದು ಪರಿಸ್ಥಿತಿ ಅವಲೋಕಿಸಿ, ಕೊಲೆಗಡುಕರನ್ನು ಹೆಡೆಮುರಿ ಕಟ್ಟುವಂತೆ ಕಟ್ಟಾಜ್ಞೆ ಮಾಡುವ ಧೈರ್ಯವನ್ನು ತೋರಲಿಲ್ಲ. ಅವರ ಅಧೈರ್ಯಕ್ಕೆ ಕಾರಣವೇನು? ಕಾಣದ ಕೈಗಳ ಒತ್ತಡವೇನಾದರೂ ಉಂಟಾ? ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ಅಗತ್ಯ ಬಿದ್ದರೆ ಯೋಗಿ ಮಾಡೆಲ್ ರೂಲ್ಸ್ ಜಾರಿ, ಕೋಮು ಸೌಹಾರ್ದ ಕದಡುವ ಶಕ್ತಿಗಳಿಗೆ ಕಡಿವಾಣ: ಸಿಎಂ ಬೊಮ್ಮಾಯಿ
 
ಕರಾವಳಿ ಜಿಲ್ಲೆಯು ಶಿಕ್ಷಣದ ಕಾಶಿ, ದೇಗುಲಗಳ ಪುಣ್ಯನೆಲ, ಪ್ರಾಕೃತಿಕ ಸೌಂದರ್ಯದ ಬೀಡು, ಪ್ರವಾಸೋದ್ಯಮದಲ್ಲಿ ಕರ್ನಾಟಕದ ಕೀರ್ತಿಕಳಸ. ಇಂಥ ನೆಲದಲ್ಲಿ ದಿನಕ್ಕೊಂದು ಕೊಲೆ!! ಈ ಕೊಲೆಗಳನ್ನು ಹತ್ತಿಕ್ಕುವ ಬದಲು ಬೊಮ್ಮಾಯಿ ಅವರು ʼಬುಲ್ಡೋಜರ್ʼ ಬಗ್ಗೆ ಮಾತನಾಡುತ್ತಿದ್ದಾರೆ. ಕರಾವಳಿ ಮತ್ತು ಕರ್ನಾಟಕವನ್ನು ʼಜಂಗಲ್ ರಾಜ್ʼ ಮಾಡುವ ಹುನ್ನಾರವಷ್ಟೇ ಇದು. ಮನೆ, ಮನಗಳಲ್ಲಿ ಮಾತ್ರ ಇರಬೇಕಿದ್ದ ಧರ್ಮವನ್ನು ʼವ್ಯಸನʼವನ್ನಾಗಿಸಿ ಕೈಗೆ ದೊಣ್ಣೆ, ಶೂಲ ಕೊಟ್ಟು ಯುವಕರ ನಿಷ್ಕಲ್ಮಶ ಮುಗ್ಧ ಮನಸ್ಸಿಗೆ ʼಕೊಮುಪ್ರಾಷನʼ ಮಾಡಿದ ದುಷ್ಪರಿಣಾಮವೇ ಸರಣಿ ಕೊಲೆಗಳು. ಧರ್ಮನಿರಪೇಕ್ಷತೆ ತತ್ತ್ವವನ್ನು ನಿರ್ನಾಮ ಮಾಡಿದ್ದೇ ಇದಕ್ಕೆಲ್ಲ ಮೂಲ ಕಾರಣ ಎಂದು ಆರೋಪಿಸಿದ್ದಾರೆ.

ಮಸೂದ್, ಪ್ರವೀಣ್ ನೆಟ್ಟಾರು, ಈಗ ಫಾಸಿಲ್. ಇನ್ನೆಷ್ಟು ಕೊಲೆಗಳು ನಡೆದರೆ ಸರ್ಕಾರಕ್ಕೆ ತೃಪ್ತಿ? ಸರಣಿ ಕೊಲೆಗಳಿಂದ ಕರಾವಳಿಗೆ ಮಾತ್ರವಲ್ಲ, ಕರ್ನಾಟಕದ ಪ್ರತಿಷ್ಠೆಗೆ ಪೆಟ್ಟು ಬಿದ್ದಿದೆ. ಈ ಅರಾಜಕತೆಯಿಂದ ಇಡೀ ಕರಾವಳಿಯ ಆರ್ಥಿಕತೆಯೇ ಬುಡಮೇಲಾಗುತ್ತಿದೆ. ಆದರೆ, ಬಿಜೆಪಿ ಸರ್ಕಾರ ಸಾವಿನಲ್ಲೂ ʼಕೊಲೆಗೆಡುಕ ರಾಜಕಾರಣʼ ಮಾಡುತ್ತಿದೆ. ಕೊಲೆಗಳ ಹಿಂದಿನ ಕಾರಣ ಬೇಧಿಸಿ ಕೊಲೆಗೆಡುಕರನ್ನು ಹತ್ತಿಕ್ಕುವ ಕೆಲಸ ಮಾಡಬೇಕಿದ್ದ ಸರ್ಕಾರ, ಪ್ರತೀ ಕೊಲೆಗೂ ತಾನೇ ಮುಂದೆ ನಿಂತು ಹೊಸ ಹೊಸ ಟ್ವಿಸ್ಟ್ ನೀಡುತ್ತಿದೆ. ಸರ್ಕಾರದ ಕೆಲಸ ಬಿಗಿ ಆಡಳಿತ ನಡೆಸುವುದೇ ಹೊರತು ಬೀದಿಯಲ್ಲಿ ನಿಂತು ಗಂಟಲು ಹರಿದುಕೊಳ್ಳುವುದಲ್ಲ ಎಂದಿದ್ದಾರೆ.

ಕರಾವಳಿಯಲ್ಲಿ ನೆಮ್ಮದಿ ನೆಲೆಸಬೇಕಾದರೆ, ಪೊಲೀಸ್ ವ್ಯವಸ್ಥೆಗೆ ಶಕ್ತಿ ತುಂಬಬೇಕು. ಕಾಣದ ಕೈಗಳ ಸಂಕೋಲೆಯಿಂದ ಇಲಾಖೆಯನ್ನು ಮುಕ್ತಗೊಳಿಸಿ ಅಧಿಕಾರಿಗಳು ಸ್ವತಂತ್ರವಾಗಿ ಕರ್ತವ್ಯ ನಿರ್ವಹಿಸುವ ವಾತಾವರಣ ನಿರ್ಮಿಸಬೇಕು. ಇಲ್ಲವಾದರೆ, ಡಬಲ್ ಎಂಜಿನ್ ಸರ್ಕಾರಕ್ಕೆ ಜನರೇ ಬೆಂಕಿ ಹಾಕಿಯಾರು ಎಂದು ಕಿಡಿಕಾರಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com