
ಮಂಗಳೂರು: ಕರಾವಳಿ ಜಿಲ್ಲೆ ಸರಣಿ ಹತ್ಯೆಯಿಂದ ಬೂದಿ ಮುಚ್ಚಿದ ಕೆಂಡದಂತಾಗಿದೆ. ಬಿಜೆಪಿ ಯುವ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಯ ಬೆನ್ನಲ್ಲೇ ಮಂಗಳೂರು ಹೊರವಲಯ ಸುರತ್ಕಲ್ ನಲ್ಲಿ ಕಳೆದ ರಾತ್ರಿ ಫಾಜಿಲ್ ಮಂಗಲಪೇಟೆ ಎಂಬ 23 ವರ್ಷದ ಮುಸ್ಲಿಂ ಯುವಕನನ್ನು ದುಷ್ಕರ್ಮಿಗಳು ಅಟ್ಟಾಡಿಸಿಕೊಂಡು ಹೋಗಿ ಕೊಂದು ಹಾಕಿದ್ದಾರೆ.
ಫಾಜಿಲ್ ಮಂಗಲಪೇಟೆ ಹತ್ಯೆ ಹಿನ್ನೆಲೆಯಲ್ಲಿ ಮಂಗಳೂರು ನಗರದ ಸುರತ್ಕಲ್, ಮುಲ್ಕಿ ಪೊಲೀಸ್ ಠಾಣೆ, ಬಜ್ಪೆ, ಪಣಂಬೂರು ಠಾಣಾ ವ್ಯಾಪ್ತಿಯಲ್ಲಿ ಸೆಕ್ಷನ್ 144 ವಿಧಿಸಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ವ್ಯಾಪಕ ಪೊಲೀಸ್ ಬಂದೋಬಸ್ತ್ ಹಾಕಲಾಗಿದ್ದು, ಸುರತ್ಕಲ್ನ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ನಿರಂತರ ಗಸ್ತು ತಿರುಗುತ್ತಿದ್ದಾರೆ. ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಮಂಗಳೂರು ಸುತ್ತಮುತ್ತ ಸೂಕ್ಷ್ಮ ಪ್ರದೇಶಗಳ ಮಸೀದಿಗಳಲ್ಲಿ ಇಂದು ಪ್ರಾರ್ಥನೆ ಬೇಡ ಎಂದು ಮುಸ್ಲಿಮರಿಗೆ ಪೊಲೀಸರು ಮನವಿ ಮಾಡುತ್ತಿದ್ದಾರೆ. ಮನೆಗಳಲ್ಲಿ ಅಥವಾ ನಿಷೇಧಾಜ್ಞೆ ಇಲ್ಲದ ಮಸೀದಿಗಳಲ್ಲಿ ಪ್ರಾರ್ಥನೆ ಮಾಡುವಂತೆ ಪೊಲೀಸರು ವಿನಂತಿಸಿದ್ದಾರೆ.
ಶಾಲೆ-ಕಾಲೇಜುಗಳಿಗೆ ರಜೆ: ಇಂದು ಸುರತ್ಕಲ್, ಮೂಲ್ಕಿ, ಪಣಂಬೂರು, ಬಜ್ಪೆಗಳಲ್ಲಿ ಮುನ್ನೆಚ್ಚರಿಕೆ, ಭದ್ರತೆ ಕ್ರಮವಾಗಿ ಸುರಕ್ಷತೆ ಹಿತದೃಷ್ಟಿಯಿಂದ ಇಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ ಮಂಗಳೂರು ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಸಿಆರ್‌ಪಿಸಿ ಸೆಕ್ಷನ್ 144 ರ ಅಡಿಯಲ್ಲಿ ಮಂಗಳೂರು ನಗರದಲ್ಲಿ ನಾಳೆ ಬೆಳಗ್ಗೆ 6 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಇಂದು ನಗರದಲ್ಲಿ ಮದ್ಯದಂಗಡಿ ಬಂದ್ ಆಗಿರುತ್ತದೆ.
12 ಮಂದಿ ಬಂಧನ: ಕಳೆದ ರಾತ್ರಿ ಫಾಜಿಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಪೊಲೀಸರು ವಿಚಾರಣೆ ತೀವ್ರಗೊಳಿಸಿದ್ದು ಇಂದು 12 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸುತ್ತಿದ್ದಾರೆ.
Advertisement