
ಮೃತಪಟ್ಟ ಆನೆ ಭೋಗೇಶ್ವರ್.
ಮೈಸೂರು: ಮೈಸೂರಿನ ಹೆಚ್.ಡಿ.ಕೋಟೆ ತಾಲೂಕಿನ ಕಬಿನಿಯಲ್ಲಿ ನೀಳ ದಂತ ಹೊಂದಿದ್ದ ಆನೆ ಭೋಗೇಶ್ವರ್ ಶನಿವಾರ ಮೃತಪಟ್ಟಿದೆ ಎಂದು ತಿಳಿದುಬಂದಿದೆ.
ಉದ್ದನೆಯ ದಂತಗಳಿಂದ ಪ್ರಖ್ಯಾತವಾಗಿದ್ದ ಭೋಗೇಶ್ವರ ಗಂಡಾನೆ ನಾಗರಹೊಳೆ, ಬಂಡೀಪುರ ವ್ಯಾಪ್ತಿಯಲ್ಲಿ ಹೆಚ್ಚು ಕಾಣಿಸುತ್ತಿತ್ತು. ಸಫಾರಿ ವೇಳೆ ಪ್ರವಾಸಿಗರಿಗೆ ಆಗಾಗ ಕಾಣಿಸಿಕೊಳ್ಳುತ್ತಿತ್ತು. ವನ್ಯಜೀವಿ ಪ್ರಿಯರ ನೆಚ್ಚಿನ ಅನೆಯಾಗಿತ್ತು. ಕಬಿನಿಗೆ ಹೋಗುತ್ತಿದ್ದ ಪ್ರವಾಸಿಗರು ಈ ಆನೆ ಸಿಕ್ಕರೇ ಸಾಕು ಅಂತಿದ್ದರು. ಆದರೆ ಕೆಲವರಿಗೆ ಮಾತ್ರ ಕಾಣಿಸುತ್ತಿತ್ತು.
ಇದೀಗ ಈ ಆನೆ ಬಂಡೀಪುರ ವ್ಯಾಪ್ತಿಯ ಗುಂಡ ವಲಯದ ಅರಣ್ಯದಲ್ಲಿ ಸಾವನ್ನಪ್ಪಿದೆ. ವಯೋಸಹಜವಾಗಿ ಆನೆ ಸಾವನ್ನಪ್ಪಿದೆ ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ.
ವಾರದ ಹಿಂದಿನಿಂದಲು ಭೋಗೇಶ್ವರ್ ಆರೋಗ್ಯದಲ್ಲಿ ಏರುಪೇರು ಕಂಡುಬಂದಿತ್ತು. ಕಳೆದ ವಾರ ಮತ್ತೊಂದು ಆನೆ ಜೊತೆಗೆ ಜಗಳಕ್ಕಿಳಿದಿತ್ತು. ಇದೀಗ ವಯೋಸಹಜವಾಗಿ ಆನೆ ಸಾವನ್ನಪ್ಪಿದ್ದು, ದೇಹದಲ್ಲಿ ಯಾವುದೇ ಗಾಯಗಳೂ ಕಂಡು ಬಂದಿಲ್ಲ ಎಂದು ತಿಳಿಸಿದ್ದಾರೆ.
ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ನಿಗದಿಪಡಿಸಿದ ಕಾರ್ಯವಿಧಾನಗಳ ಪ್ರಕಾರ, 2.58-2.35 ಮೀಟರ್ ಇದ್ದ ಆನೆಯ ದಂತಗಳನ್ನು ತೆಗೆದು ಹೆಚ್ಚಿನ ಪರೀಕ್ಷೆಗಾಗಿ ಮೈಸೂರು ಡಿಪೋಗೆ ಕಳುಹಿಸಲಾಗಿದೆ. ಆನೆ ಸತ್ತಿರುವ ಜಾಗದಲ್ಲಿಯೇ ಶವವನ್ನು ರಣಹದ್ದುಗಳಿಗೆ ಆಹಾರಕ್ಕಾಗಿ ಬಿಡಲಾಗಿದೆ, ಅರಣ್ಯ ಇಲಾಖೆಯ ಸಂಪ್ರದಾಯದಂತೆ ಕಾಡಿನಲ್ಲಿ ಸತ್ತಿರುವ ಪ್ರಾಣಿಗಳನ್ನು ಕಾಡು ಪ್ರಾಣಿಗಳಿಗೆ ಆಹಾರವಾಗಿ ನೀಡಲಾಗುತ್ತದೆ ಎಂದಿದ್ದಾರೆ.
ದೇವಾಲಯ ಮತ್ತು ಕಳ್ಳಬೇಟೆಗಳ ತಡೆಯಲು ಇರಿಸಲಾಗಿದ್ದ ಶಿಬಿರದ ಬಳಿಕ ಆಗಾಗ್ಗೆ ಈ ಆನೆ ಕಾಣಿಸಿಕೊಳ್ಳುತ್ತಿತ್ತು. ಬಳಿಕ ಆನೆಗೆ ಅರಣ್ಯ ಇಲಾಖೆಯ ಸಿಬ್ಬಂದಿಗಳು, ಬುಡಕಟ್ಟು ಜನರು ಭೋಗೇಶ್ವರ್ ಎಂದು ಹೆಸರಿಟ್ಟಿದ್ದರು.
ಕಬಿನಿಯಲ್ಲಿ ಹುಲಿಗಳು ಕಾಣಿಸದಿದ್ದರೆ ನೀಳದಂತವುಳ್ಳ ಈ ಆನೆಯನ್ನು ನೋಡಿ ಸಾಕಷ್ಟು ಪ್ರವಾಸಿಗರು ರೋಮಾಂಚನಗೊಳ್ಳುತ್ತಿದ್ದರು. ಭೋಗೇಶ್ವರ್ ಕೆಲ ಖಾಸಗಿ ಸಂಸ್ಥಗಳು ನಿರ್ಮಿಸಿದ್ದ ಹಲವಾರು ವನ್ಯಜೀವಿ ಸಾಕ್ಷ್ಯಚಿತ್ರಗಳು ಹಾಗೂ ಸಿನಿಮಾಗಳಲ್ಲೂ ಕಾಣಿಸಿಕೊಂಡಿದ್ದ ಎಂದು ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.