ಬಿಜೆಪಿಗೆ ಬಿಸಿ ತುಪ್ಪವಾಗುತ್ತಿದೆಯೇ ಪಂಚಮಸಾಲಿಗಳ ಮುನಿಸು?

ವೀರಶೈವ ಲಿಂಗಾಯತ ಪಂಚಮಸಾಲಿ ಸಮುದಾಯದ 2 ಎ ಮೀಸಲಾತಿ ಬೇಡಿಕೆ ಪರಿಣಾಮ ಚುನಾವಣೆಗಳ ಫಲಿತಾಂಶಗಳ ಮೇಲೆ ಆಗುತ್ತಿದೆಯೇ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಜೋರಾಗಿ ಕೇಳಿಬರುತ್ತಿದೆ. ಇದು ಪಕ್ಷಕ್ಕೆ ಬಿಸಿ ತುಪ್ಪವಾಗುತ್ತಿದೆ ಎನ್ನುವ ಆತಂಕ ಬಿಜೆಪಿ ವಲಯದಲ್ಲಿ ಶುರುವಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ವೀರಶೈವ ಲಿಂಗಾಯತ ಪಂಚಮಸಾಲಿ ಸಮುದಾಯದ 2 ಎ ಮೀಸಲಾತಿ ಬೇಡಿಕೆಯು ಚುನಾವಣೆ ಫಲಿತಾಂಶಗಳ ಮೇಲೆ ಪರಿಣಾಮ ಬೀರುತ್ತಿದೆಯೇ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಜೋರಾಗಿ ಕೇಳಿಬರುತ್ತಿದೆ. ಇದು ಪಕ್ಷಕ್ಕೆ ಬಿಸಿ ತುಪ್ಪವಾಗುತ್ತಿದೆ ಎನ್ನುವ ಆತಂಕ ಬಿಜೆಪಿ ವಲಯದಲ್ಲಿ ಶುರುವಾಗಿದೆ.

ಪಂಚಮಸಾಲಿ ಸಮುದಾಯ ಮೀಸಲಾತಿಗಾಗಿ ನಡೆಸುತ್ತಿರುವ ಹೋರಾಟದ ನಂತರ ರಾಜ್ಯದಲ್ಲಿ ಎದುರಾದ ಚುನಾವಣೆಗಳಲ್ಲಿ ಈ ಸಮುದಾಯ ಬಿಜೆಪಿ ವಿರುದ್ಧ ಮತ ಚಲಾಯಿಸಿದ್ದು, ಫಲಿತಾಂಶದಲ್ಲಿ ಗೋಚರಿಸಿದೆ.

ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಾಜಿ ಕೇಂದ್ರ ಸಚಿವ ದಿವಂಗತ ಸುರೇಶ್ ಅಂಗಡಿ ಅವರ ಪತ್ನಿ ಮಂಗಳಾ ಅಂಗಡಿ ಅವರ ವಿರುದ್ಧ ಕಾಂಗ್ರೆಸ್ ನಿಂದ ಲಿಂಗಾಯತೇತರ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಸ್ಪರ್ಧೆ ಮಾಡಿದ್ದರು. ಆದಾಗ್ಯೂ, ಪಂಚಮಸಾಲಿ ಸಮುದಾಯ ಮೀಸಲಾತಿಗಾಗಿ ಒತ್ತಡ ಹೇರುವ ನಿಟ್ಟಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿದ್ದರು ಎನ್ನಲಾಗಿದೆ. 

ತದನಂತರ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿಗೆ ನಡೆದ ಚುನಾವಣೆಗಳಲ್ಲಿ ಪಂಚಮಸಾಲಿ ಸಮುದಾಯ ಹೆಚ್ಚಿರುವ ಕಿತ್ತೂರು ಕರ್ನಾಟಕ (ಹಿಂದಿನ ಮುಂಬೈ ಕರ್ನಾಟಕ) ಭಾಗದಲ್ಲಿ ಪಂಚಮಸಾಲಿ ಸಮುದಾಯ ಬಿಜೆಪಿ ವಿರುದ್ಧ ಮತ ಚಲಾಯಿಸಿರುವುದು ಸ್ಪಷ್ಪವಾಗಿದೆ.

ಬೆಳಗಾವಿಯಲ್ಲಿ ವೀರಶೈವ ಲಿಂಗಾಯತ ಜಂಗಮ ಸಮುದಾಯದ ಬಿಜೆಪಿ ಅಭ್ಯರ್ಥಿಯಾಗಿದ್ದ ಮಹಾಂತೇಶ ಕವಠಗಿ ಮಠ ಅವರ ಸೋಲಿಗೂ ಪಂಚಮಸಾಲಿ ಸಮುದಾಯದ ಅಸಮಾಧಾನವೇ ಕಾರಣ ಎಂಬ ಮಾತುಗಳು ಕೇಳಿಬಂದಿದ್ದವು. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಪಂಚಮ ಸಾಲಿ ಸಮುದಾಯದ ಚನ್ನರಾಜ್ ಹಟ್ಟಿಹೊಳಿ ಅತಿ ಹೆಚ್ಚು ಮತ ಪಡೆದು ಗೆಲುವು ಸಾಧಿಸಲು ಸಮುದಾಯದ ಒಗ್ಗಟ್ಟು ಕಾರಣ ಎಂದು ಹೇಳಲಾಗಿತ್ತು.

ಈಗ ನಡೆದಿರುವ ವಾಯುವ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಇಬ್ಬರೂ ಅಭ್ಯರ್ಥಿಗಳು ವೀರಶೈವ ಲಿಂಗಾಯತ ಸಮುದಾಯದವರೇ ಆಗಿದ್ದರೂ ಪಂಚಮಸಾಲಿ ಸಮುದಾಯದ ಶಿಕ್ಷಕರು ಅದೇ ಸಮುದಾಯಕ್ಕೆ ಸೇರಿರುವ ಕಾಂಗ್ರೆಸ್ ಪಕ್ಷದ ಪ್ರಕಾಶ್ ಹುಕ್ಕೇರಿ ಅವರಿಗೆ ಸಂಪೂರ್ಣ ಮತ ಚಲಾಯಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ವೀರಶೈವ ಲಿಂಗಾಯತ ಬಣಜಿಗ ಸಮುದಾಯಕ್ಕೆ ಸೇರಿರುವ ಅರುಣ್ ಶಹಾಪುರ್ ಸೋಲಿಗೆ ಕಾರಣವಾಯಿತು ಎನ್ನುವ ಮಾತುಗಳು ಬಿಜೆಪಿ ವಲಯದಲ್ಲೇ ಕೇಳಿಬರುತ್ತಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com