ಬೆಂಗಳೂರು ಅಭಿವೃದ್ಧಿಗೆ ಡಬಲ್ ಇಂಜಿನ್ ಸರ್ಕಾರ ಬದ್ಧ, 40 ವರ್ಷಗಳಲ್ಲಿ ಆಗದ್ದನ್ನು ಕೆಲವೇ ತಿಂಗಳಲ್ಲಿ ಮಾಡುತ್ತೇವೆ: ಪ್ರಧಾನಿ ಮೋದಿ
ಬೆಂಗಳೂರಿನ ಸಬ್ ಅರ್ಬನ್ ರೈಲು ಯೋಜನೆ ಜಾರಿಗೆ 40 ವರ್ಷಗಳಿಂದ ಚರ್ಚೆಯಲ್ಲೇ ಕಾಲ ಕಳೆಯಲಾಯಿತು. ಆದರೆ ನಾವು ಆ ರೀತಿ ಅಲ್ಲ, 40 ತಿಂಗಳಲ್ಲಿ ಕಾರ್ಯಕ್ರಮಗಳನ್ನು ಪೂರ್ಣಗೊಳಿಸಿದ್ದೇವೆ.
Published: 20th June 2022 04:24 PM | Last Updated: 20th June 2022 05:22 PM | A+A A-

ಕೊಮ್ಮಘಟ್ಟದಲ್ಲಿ ಸಮಾವೇಶವನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ಮೋದಿ
ಬೆಂಗಳೂರು: ಬೆಂಗಳೂರಿನ ಸಬ್ ಅರ್ಬನ್ ರೈಲು ಯೋಜನೆ ಜಾರಿಗೆ 40 ವರ್ಷಗಳಿಂದ ಚರ್ಚೆಯಲ್ಲೇ ಕಾಲ ಕಳೆಯಲಾಯಿತು. ಆದರೆ ನಾವು ಆ ರೀತಿ ಅಲ್ಲ, 40 ತಿಂಗಳಲ್ಲಿ ಕಾರ್ಯಕ್ರಮಗಳನ್ನು ಪೂರ್ಣಗೊಳಿಸಿದ್ದೇವೆ. ಕೆಲವೇ ತಿಂಗಳಲ್ಲಿ ನಗರ ರೈಲು ಯೋಜನೆ ಪೂರ್ಣಗೊಳಿಸಲು ಪಣ ತೊಟ್ಟಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ನಗರದ ಕೊಮ್ಮಘಟ್ಟದಲ್ಲಿ 33 ಸಾವಿರ ಕೋಟಿ ರೂಪಾಯಿ ಮೌಲ್ಯದ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಬೆಂಗಳೂರು, ಇಲ್ಲಿನ ಯುವ ಶಕ್ತಿ, ಉದ್ಯಮಶೀಲತೆಯನ್ನು ಹಾಡಿ ಹೊಗಳಿದ್ದಾರೆ.
ಡಬಲ್ ಇಂಜಿನ್ ಸರ್ಕಾರ ನಿರಂತರವಾಗಿ ಕೆಲಸ ಮಾಡುತ್ತಿದೆ. ಬೆಂಗಳೂರಿನ ಟ್ರಾಫಿಕ್ ಜಾಮ್ ಗೆ ಮುಕ್ತಿ ನೀಡಲು, ಬೆಂಗಳೂರಿನ ಅಭಿವೃದ್ಧಿಗೆ ಡಬಲ್ ಇಂಜಿನ್ ಸರ್ಕಾರ ಸದಾ ಬದ್ಧವಾಗಿದೆ. ನಿಮ್ಮ ಸೇವೆಗೆ ನಾವು ಸದಾ ಸಿದ್ಧರಿದ್ದೇವೆ ಎಂದು ಮೋದಿ ಹೇಳಿದ್ದಾರೆ.
ಇದನ್ನೂ ಓದಿ: ಕರ್ನಾಟಕ ಪ್ರವಾಸಕ್ಕೆ ಪ್ರಧಾನಿ ಮೋದಿ ಆಗಮನ: ಸಾಲು ಸಾಲು ಪ್ರಶ್ನೆ ಮುಂದಿಟ್ಟ ವಿಪಕ್ಷ ನಾಯಕ ಸಿದ್ದರಾಮಯ್ಯ
ಬೆಂಗಳೂರು ಕನಸುಗಳ ನಗರ. ಅಭಿವೃದ್ಧಿಯೇ ಬೆಂಗಳೂರು ಯುವ ಜನತೆ ಕನಸಾಗಿದೆ. ಸರ್ಕಾರದ ನೆರವು ಸಿಕ್ಕರೆ ಬೆಂಗಳೂರಿನ ಯುವಕರು ಏನನ್ನು ಬೇಕಾದರೂ ಸಾಧಿಸುತ್ತಾರೆ. ಇಲ್ಲಿ ಅಂತಹ ಉದ್ಯಮಶೀಲತೆಯ ಶಕ್ತಿ ಇದೆ. ಬೆಂಗಳೂರು ನಗರ ಆತ್ಮನಿರ್ಭರ್ ಭಾರತ್ ಶಕ್ತಿಗೆ ಪ್ರೇರಣೆ ನೀಡಿದೆ. ಇಂತಹ ನಗರಕ್ಕೆ 40 ವರ್ಷಗಳ ಹಿಂದೆಯೇ ಸಬ್ ಅರ್ಬನ್ ರೈಲು ಸೇರಿದಂತೆ, ಪ್ರಯಾಣ ಸಮಯವನ್ನು ಕಡಿಮೆಗೊಳಿಸುವ, ಟ್ರಾಫಿಕ್ ಜಾಮ್ ನಿಂದ ಮುಕ್ತಿ ನೀಡುವ ಇತರ ಯೋಜನೆಗಳು ಲಭ್ಯವಾಗಿದ್ದಿದ್ದರೆ ಕಥೆಯೇ ಬೇರೆ ಇರುತ್ತಿತ್ತು. ನನ್ನ ನಂಬಿ ನೀವು ಜವಾಬ್ದಾರಿ ಕೊಟ್ಟಿದ್ದೀರಿ, ಪ್ರತಿ ಕ್ಷಣವನ್ನೂ ನಿಮ್ಮ ಸೇವೆಗೆ ಮೀಸಲಿಟ್ಟಿದ್ದೇನೆ. ನಾನು ಸಮಯ ವ್ಯರ್ಥ ಮಾಡಲು ಹೋಗೊದಿಲ್ಲ ಎಂದು ಮೋದಿ ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಪ್ರಧಾನಿ ಮೋದಿ: ಐಐಎಸ್ಸಿಯಲ್ಲಿ ಮೆದುಳು ಸಂಶೋಧನಾ ಕೇಂದ್ರ ಉದ್ಘಾಟನೆ
ರಾಜ್ಯಕ್ಕೆ 5 ರಾಷ್ಟ್ರೀಯ ಹೆದ್ದಾರಿ ಯೋಜನೆ ನೀಡಿದ್ದೇವೆ, 7 ರೈಲು ಯೋಜನೆಗಳಿಗೆ ಚಾಲನೆ ನೀಡಿದ್ದೇವೆ, 8 ವರ್ಷದಿಂದ ನಿರಂತರವಾಗಿ ಅಭಿವೃದ್ಧಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. 12 ಸಾವಿರ ಕಿ.ಮೀ ರೈಲು ಮಾರ್ಗ ನಿರ್ಮಿಸಿದ್ದೇವೆ. ಒಂದು ಭಾರತ ಶ್ರೇಷ್ಠ ಭಾರತ ಸಾಲಿಗೆ ಬೆಂಗಳೂರು ಮಾದರಿಯಾಗಿದೆ. 8 ವರ್ಷಗಳಿಂದ ರೈಲು ಯೋಜನೆಗಳಲ್ಲಿ ಆಮೂಲಾಗ್ರ ಬದಲಾವಣೆ ಮಾಡಿದ್ದೇವೆ ಸ್ವಚ್ಛ, ಸುರಕ್ಷಾ, ಜನಸ್ನೇಹಿ ರೈಲು ಸಂಚಾರದ ಸುಧಾರಣೆ ಮಾಡಿದ್ದೇವೆ ಎಂದು ಕೇಂದ್ರ ಸರ್ಕಾರದಿಂದ ನಡೆದ ಅಭಿವೃದ್ಧಿಯ ಬಗ್ಗೆ ಸಾರ್ವಜನಿಕ ಸಭೆಯಲ್ಲಿ ತಿಳಿಸಿದ್ದಾರೆ. ಈ ಸಭೆಯ ಬಳಿಕ ಪ್ರಧಾನಿ ಮೋದಿ ಮೈಸೂರಿಗೆ ತೆರಳಿದ್ದು, ನಾಳೆ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.