ಪಠ್ಯಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ರಾಜ್ಯ ಸರ್ಕಾರ ಜನರಿಗೆ ಸುಳ್ಳು ಹೇಳುತ್ತಿದೆ: ಸಿದ್ದರಾಮಯ್ಯ

ಪಠ್ಯಪುಸ್ತಕ ಪರಿಷ್ಕರಣೆ ಹೆಸರಿನಲ್ಲಿ ಚಿಕ್ಕ ಮಕ್ಕಳ ಮನಸನ್ನು ವಿಷಪೂರಿತಗೊಳಿಸುವಲ್ಲಿ ಸಂಘ ಪರಿವಾರ ರಹಸ್ಯವಾಗಿ ವರ್ತಿಸುತ್ತಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಶನಿವಾರ ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ
ಸಿದ್ದರಾಮಯ್ಯ
Updated on

ಬೆಂಗಳೂರು: ಪಠ್ಯಪುಸ್ತಕ ಪರಿಷ್ಕರಣೆ ಹೆಸರಿನಲ್ಲಿ ಚಿಕ್ಕ ಮಕ್ಕಳ ಮನಸನ್ನು ವಿಷಪೂರಿತಗೊಳಿಸುವಲ್ಲಿ ಸಂಘ ಪರಿವಾರ ರಹಸ್ಯವಾಗಿ ವರ್ತಿಸುತ್ತಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಶನಿವಾರ ವಾಗ್ದಾಳಿ ನಡೆಸಿದರು. ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಮುಖ್ಯಸ್ಥ ರೋಹಿತ್ ಚಕ್ರತೀರ್ಥ ಅವರ ತಪ್ಪುಗಳನ್ನು ಸಮರ್ಥಿಸಿಕೊಳ್ಳುವ ಮೂಲಕ ಸರ್ಕಾರ ಬೇಜವಾಬ್ದಾರಿಯಿಂದ ವರ್ತಿಸಿದೆ. ಈ ಕುರಿತು ಪರಿಶೀಲನೆ ನಡೆಸಲು ತಜ್ಞರ ಸಮಿತಿ ರಚಿಸಬೇಕು ಎಂದರು.

ಸಾಮಾಜಿಕ ನ್ಯಾಯ, ಲಿಂಗ ಸಮಾನತೆ ಮತ್ತು ಪ್ರಾದೇಶಿಕ ಒಳಗೊಳ್ಳುವಿಕೆಯ ತತ್ವಗಳನ್ನು ಪ್ರತಿಪಾದಿಸುವ ಪಠ್ಯಗಳನ್ನು ಪಠ್ಯಪುಸ್ತಕಗಳಿಂದ ತೆಗೆಯುವುದು ಕ್ಷಮಿಸಲಾಗದು. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಬಿಜೆಪಿ ಸರ್ಕಾರ  ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸದ ಚಕ್ರತೀರ್ಥರನ್ನು ಪಠ್ಯಪುಸ್ತಕ ಸಮಿತಿಯ ಮುಖ್ಯಸ್ಥರನ್ನಾಗಿ ಕೇಳಿತ್ತು. ಈ ಪರಿಷ್ಕರಣೆ ಅಸಂವಿಧಾನಿಕ ಮತ್ತು ಸಂವಿಧಾನದ ಆಶಯವನ್ನು ಉಲ್ಲಂಘಿಸುತ್ತದೆ ಎಂದು ಹಲವಾರು ತಜ್ಞರು ಹೇಳಿರುವುದಾಗಿ ಮಾಜಿ ಸಿಎಂ ತಿಳಿಸಿದರು.

ಶಿಕ್ಷಣ ಆಯೋಗದ ಸಲಹೆ ಉಲ್ಲಂಘಿಸಿದ ಕಾರಣ ಮೂಡಂಬಡಿತ್ತಾಯ ಸಮಿತಿಯ ಪಠ್ಯಪುಸ್ತಕಗಳನ್ನು  ಬರಗೂರು ರಾಮಚಂದ್ರಪ್ಪ ಅವರ ಅಧ್ಯಕ್ಷತೆಯಲ್ಲಿ ನಮ್ಮ ಸರ್ಕಾರ  ಪರಿಷ್ಕರಿಸಿದೆ. ಸಂವಿಧಾನ ಮತ್ತು ಶಿಕ್ಷಣ ಆಯೋಗದ ಆಶಯವನ್ನು ಗಮನದಲ್ಲಿಟ್ಟುಕೊಂಡು ಪಠ್ಯಪುಸ್ತಕಗಳನ್ನು ಪರಿಷ್ಕರಿಸುವಂತೆ ಬರಗೂರು ರಾಮಚಂದ್ರಪ್ಪ ಸಮಿತಿಗೆ ಮನವಿ ಮಾಡಿದ್ದೆವು.

ಇತ್ತೀಚಿನ ಪರಿಷ್ಕರಣೆಯಲ್ಲಿ, 21 ಶೂದ್ರ, ಆರು ದಲಿತ ಮತ್ತು ಎಂಟು ಲಿಂಗಾಯತ ಕವಿಗಳು ಮತ್ತು ಲೇಖಕರ ಬರಹಗಳನ್ನು ಕನ್ನಡ ಭಾಷೆಯ ಪಠ್ಯಪುಸ್ತಕಗಳಿಂದ ಕೈಬಿಡಲಾಗಿದೆ, ಆದರೆ 28 ಜನರ ಪಠ್ಯಗಳನ್ನು ಸೇರಿಸಲಾಗಿದೆ. ಇದರಲ್ಲಿ ಶೇ.95ರಷ್ಟು ಲೇಖಕರು ಬ್ರಾಹ್ಮಣರು ಎಂದು ಆರೋಪಿಸಿದರು. “ಪಠ್ಯಪುಸ್ತಕಗಳು ಶೂದ್ರರು, ದಲಿತರು ಮತ್ತು ಅಲ್ಪಸಂಖ್ಯಾತರನ್ನು ದ್ವೇಷಿಸುವವರಿಂದ ಪಾಠಗಳನ್ನು ಒಳಗೊಂಡಿವೆ ಮತ್ತು ಹೆಚ್ಚಿನವರು ಆರ್‌ಎಸ್‌ಎಸ್‌ಗೆ ಸೇರಿದವರಾಗಿದ್ದಾರೆ. ಅವರಲ್ಲಿ ಹೆಚ್ಚಿನವರು ಮನುವಾದಿ ಕಾರ್ಯಸೂಚಿಯ ವಕ್ತಾರರು ಎಂದು  ಆರೋಪಿಸಿದರು.

ಕುವೆಂಪು ಅವರನ್ನು ಪರಿಚಯಿಸುವಾಗ ‘ರಾಷ್ಟ್ರಕವಿ ಕುವೆಂಪು’ ಎಂದು ಹೇಳುವ ಬದಲು ಎರಡನೇ ರಾಷ್ಟ್ರಕವಿ ಕುವೆಂಪು (ಮೊದಲನೆಯವರು ಗೋವಿಂದ ಪೈ) ಎಂದು ಬರೆಯಲಾಗಿದೆ. 7ನೇ ತರಗತಿಯ ಕನ್ನಡ ಪಠ್ಯಪುಸ್ತಕದಲ್ಲಿನ ಏಕೀಕರಣ ಚಳವಳಿಯ ಪಾಠದಿಂದ ಕುವೆಂಪು ಅವರ ಭಾವಚಿತ್ರವನ್ನು ತೆಗೆದು ಗೋವಿಂದ ಪೈ ಅವರ ಭಾವಚಿತ್ರವನ್ನು ಹಾಕಲಾಗಿದೆ. ನಾಡಪ್ರಭು ಕೆಂಪೇಗೌಡರ ಕುರಿತು ಪಾಠ ಕೈಬಿಡಲಾಗಿದೆ ಎಂದರು. 

ಮೈಸೂರು ಒಡೆಯರ ಸಮಗ್ರ ವಿವರವನ್ನು ಬರಗೂರು ಸಮಿತಿಯು ಸೇರಿಸಿದೆ, ಆದರೆ ಚಕ್ರತೀರ್ಥ ಸಮಿತಿಯು ಒಡೆಯರ್, ಸರ್ ಎಂ ವಿಶ್ವೇಶ್ವರಯ್ಯ ಮತ್ತು ಸರ್ ಮಿರ್ಜಾ ಇಸ್ಮಾಯಿಲ್ ಅವರ ಪ್ರಮುಖ ಸಾಧನೆಗಳನ್ನು 7 ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ತೆಗೆದುಹಾಕಿದೆ. ಅವರ ಪಾಠಗಳನ್ನು ಕೈಬಿಡುವುದರ ಹಿಂದೆ ಶೂದ್ರ ವಿರೋಧಿ ಮನಸ್ಥಿತಿ ಕೆಲಸ ಮಾಡಿದೆ ಎಂಬುದು ಸ್ಪಷ್ಟವಾಗಿದೆ. ಚಕ್ರತೀರ್ಥ ಸಮಿತಿಯು ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಮತ್ತು ಆದಿಚುಂಚನಗಿರಿ ಮಠದ ಬಾಲಗಂಗಾಧರನಾಥ ಸ್ವಾಮೀಜಿ ಅವರ ವಿವರಗಳನ್ನು ಏಕೆ ತೆಗೆದುಹಾಕಿದೆ ಎಂದು ಅವರು ಪ್ರಶ್ನಿಸಿದರು.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com