ದಲಿತಳೆಂಬ ಕಾರಣಕ್ಕೆ ಮನೆಯೊಳಗೆ ಸೇರಿಸುತ್ತಿಲ್ಲ, ಕರ್ತವ್ಯ ಹೇಗೆ ನಿರ್ವಹಿಸಲಿ: ಕಣ್ಣೀರಿಟ್ಟ ಆಶಾ ಕಾರ್ಯಕರ್ತೆ

ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಕಾನನಕಟ್ಟೆ ಗ್ರಾಮದಲ್ಲಿ ಕಳೆದ ಕೆಲ ದಿನಗಳಿಂದ ನಿಗೂಢ ಜ್ವರ ಕಾಣಿಸಿಕೊಂಡಿದ್ದರೂ ದಲಿತಳೆಂಬ ಕಾರಣಕ್ಕೆ ಆಶಾ ಕಾರ್ಯಕರ್ತೆಯೊಬ್ಬರಿಗೆ ನೀರಿನ ಮಾದರಿ ಸಂಗ್ರಹಿಸಲು ಗ್ರಾಮಸ್ಥರು ಅವಕಾಶ ನೀಡಿದೆ ಇರುವ ಘಟನೆ ಬೆಳಕಿಗೆ ಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ದೇವನಗರಿ: ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಕಾನನಕಟ್ಟೆ ಗ್ರಾಮದಲ್ಲಿ ಕಳೆದ ಕೆಲ ದಿನಗಳಿಂದ ನಿಗೂಢ ಜ್ವರ ಕಾಣಿಸಿಕೊಂಡಿದ್ದರೂ ದಲಿತಳೆಂಬ ಕಾರಣಕ್ಕೆ ಆಶಾ ಕಾರ್ಯಕರ್ತೆಯೊಬ್ಬರಿಗೆ ನೀರಿನ ಮಾದರಿ ಸಂಗ್ರಹಿಸಲು ಗ್ರಾಮಸ್ಥರು ಅವಕಾಶ ನೀಡಿದೆ ಇರುವ ಘಟನೆ ಬೆಳಕಿಗೆ ಬಂದಿದೆ. 

ಕಾನನಕಟ್ಟೆ ಗ್ರಾಮದ ಗ್ರಾಮಸ್ಥರು ನಿಗೂಢ ಜ್ವರದಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ತಹಶೀಲ್ದಾರ್ ಸಂತೋಷ್ ಕುಮಾರ್, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮೀಪತಿ, ತಾಲೂಕು ಆರೋಗ್ಯಾಧಿಕಾರಿ ನಾಗರಾಜ್, ಆರೋಗ್ಯ ರಕ್ಷಾ ಸಮಿತಿ ಸದಸ್ಯ ಪೂಜಾರ ಸಿದ್ದಪ್ಪ ಕಾನನಕಟ್ಟೆಗೆ ಭೇಟಿ ನೀಡಿದ್ದರು. ಈ ವೇಳೆ ಆಶಾ ಕಾರ್ಯಕರ್ತೆ ತಮ್ಮ ನೋವು ಹೇಳಿಕೊಂಡಿದ್ದಾರೆ.

ಇಡೀ ಗ್ರಾಮ ನಿಗೂಢ ಜ್ವರದಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಅಣಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಗ್ರಾಮದಲ್ಲಿ ಲಾರ್ವಾ ಸಮೀಕ್ಷೆ ನಡೆಸಲಾಗುತ್ತಿದೆ. ಆಶಾ ಕಾರ್ಯಕರ್ತೆಯಾಗಿರುವ ಶಾರದಮ್ಮ ನೀರಿನ ಮಾದರಿಗಳನ್ನು ಸಂಗ್ರಹಿಸಲು ಮನೆಗಳಿಗೆ ಹೋಗಬೇಕಾಗಿತ್ತು, ಆದರೆ ಗ್ರಾಮಸ್ಥರು ಆಕೆ ದಲಿತಳೆಂಬ ಕಾರಣಕ್ಕೆ ಮನೆ ಪ್ರವೇಶಿಸಲು ವಿರೋಧಿಸಿದ್ದಾರೆ. 

ಈ ಬಗ್ಗೆ ಶಾರದಮ್ಮ ಅವರು, ತಹಶೀಲ್ದಾರ್ ಸಂತೋಷ್ ಕುಮಾರ್ ಮತ್ತು ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮೀಪತಿ ಅವರಿಗೆ ದೂರು ನೀಡಿದ್ದು, ಅಧಿಕಾರಿಗಳು ಗ್ರಾಮಸ್ಥರ ಮನವೊಲಿಸುವ ಪ್ರಯತ್ನ ಮಾಡಿದ ನಂತರ ಶಾರದಮ್ಮ ಅವರಿಗೆ ಮನೆಗಳಲ್ಲಿ ಮಾದರಿಗಳನ್ನು ಸಂಗ್ರಹಿಸಲು ಅನುಮತಿ ನೀಡಿದರು.

ಕೆಲವು ಮೇಲ್ವರ್ಗದ ಗ್ರಾಮಸ್ಥರು ತಮ್ಮ ಮನೆಗಳಿಗೆ ಪ್ರವೇಶ ನಿರಾಕರಿಸುತ್ತಿದ್ದಾರೆ. ಆದರೆ ಮೇಲಧಿಕಾರಿಗಳ ಒತ್ತಡವಿರುವುದರಿಂದ ನಾನು ನನ್ನ ಕರ್ತವ್ಯ ನಿರ್ವಹಿಸಲೇಬೇಕಾಗಿದೆ. ಗ್ರಾಮಸ್ಥರ ಅಸಹಕಾರದಿಂದಾಗಿ, ನಾನು ಮನೆಗಳಿಂದ ಮಾದರಿಗಳನ್ನು ಸಂಗ್ರಹಿಸಲು ಸಾಧ್ಯವಾಗಿಲ್ಲ ಎಂದು ಶಾರದಮ್ಮ ಅಧಿಕಾರಿಗಳ ಬಳಿ ಹೇಳಿಕೊಂಡಿದ್ದಾರೆ. 

ತಹಶೀಲ್ದಾರ್ ಸಂತೋಷ್ ಕುಮಾರ್ ಅವರು ಪ್ರತಿಕ್ರಿಯೆ ನೀಡಿ, ಈ ಸಂಬಂಧ ನಾವು ಗ್ರಾಮಸ್ಥರೊಂದಿಗೆ ಸಭೆ ನಡೆಸಿದ್ದೇವೆ ಮತ್ತು ಆಶಾ ಕಾರ್ಯಕರ್ತೆಯೊಂದಿಗೆ ಸಹಕರಿಸುವಂತೆ ವಿನಂತಿಸಿದ್ದೇವೆ. ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ಕಂಡುಬಂದಿದೆ. ಇದೀಗ ಶಾರದಮ್ಮ ಅವರಿಗೆ ಕರ್ತವ್ಯ ನಿರ್ವಹಿಸುವಂತೆ ಸೂಚಿಸಿದ್ದೇವೆ ಮತ್ತು ಅದರ ಪ್ರಗತಿಯ ಬಗ್ಗೆ ವರದಿಯನ್ನೂ ಮಾಡಿದ್ದಾರೆಂದು ಹೇಳಿದ್ದಾರೆ. 

ಜಿಲ್ಲಾ ಸರ್ವೆಲೆನ್ಸ್ ಅಧಿಕಾರಿ ಡಾ.ಜಿ.ಡಿ.ರಾಘವನ್ ಮಾತನಾಡಿ, ಇದು ನಿಗೂಢ ಜ್ವರವಲ್ಲ. ಗ್ರಾಮಸ್ಥರು ವೈದ್ಯರ ಸಲಹೆ ಪಡೆಯದೆಯೇ ಔಷಧಗಳನ್ನು ಸೇವಿಸಿದ್ದಾರೆ. ಇದರಿಂದ ಸಮಸ್ಯೆ ಉಲ್ಬಣಗೊಂಡಿದೆ. ”ಗ್ರಾಮದಲ್ಲಿ ಇದುವರೆಗೆ ಆರು ಚಿಕೂನ್‌ಗುನ್ಯಾ ಮತ್ತು ಎರಡು ಡೆಂಗ್ಯೂ ಪ್ರಕರಣಗಳು ವರದಿಯಾಗಿದ್ದು, ರೋಗಿಗಳು ಮಲ್ಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ಗ್ರಾಮದಲ್ಲಿನ ಅನೈರ್ಮಲ್ಯವೇ, ಶುದ್ಧ ನೀರಿನ ಕೊರತೆ ಜ್ವರಕ್ಕೆ ಕಾರಣ. ಈದು ಪ್ರಕರಣಗಳಲ್ಲಿ ಉಲ್ಬಣವನ್ನು ಉಂಟುಮಾಡುತ್ತಿದೆ. ಚಿಕೂನ್‌ಗುನ್ಯಾ ವೈರಸ್‌ ಹೊತ್ತು ತರುವ ಈಡಿಸ್‌ ಈಜಿಪ್ಟಿ ಸೊಳ್ಳೆ ಸ್ನಾನಗೃಹಗಳು, ಅಡುಗೆ ಕೋಣೆಗಳು ಮತ್ತು ಇತರ ಪ್ರದೇಶಗಳಲ್ಲಿನ ಸಿಹಿನೀರಿನಲ್ಲಿ ವೇಗವಾಗಿ ಸಂತಾನೋತ್ಪತ್ತಿ ಮಾಡುತ್ತಿದೆ ಎಂದು ತಿಳಿಸಿದ್ದಾರೆ. 

ಮನೆ ಪ್ರವೇಶ ನಿರಾಕರಿಸಿದ್ದರ ಕುರಿತು ಪ್ರತಿಕ್ರಿಯೆ ನೀಡಿರುವ ಶಾರದಮ್ಮ ಅವರು, ನೀರಿನ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸುವುದು ನಮ್ಮ ಕರ್ತವ್ಯ. ಗ್ರಾಮಸ್ಥರು ಸಹಕರಿಸುವಂತೆ ಮನವಿ ಮಾಡಿದ್ದೇವೆಂದು ತಿಳಿಸಿದ್ದಾರೆ. 

ಇದೀಗ ಅಧಿಕಾರಿಗಳು ಶಾರದಮ್ಮ ಅವರ ಜೊತೆಗೆ ಮತ್ತೊಬ್ಬ ಕಾರ್ಯಕರ್ತೆ ಮತ್ತು ಅರೆವೈದ್ಯಕೀಯ ಸಿಬ್ಬಂದಿಯನ್ನು ಸಮೀಕ್ಷೆ ಕಾರ್ಯಕ್ಕೆ ನಿಯೋಜಿಸಿದ್ದಾರೆಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com