ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸರಳ ತಂತ್ರಜ್ಞಾನ ಬಳಕೆ; ನೀರಿನ ಬಿಲ್ ಶೇ.20 ರಷ್ಟು ಕಡಿತ!
ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಅಳವಡಿಸಲಾದ ಸರಳ ತಂತ್ರಜ್ಞಾನದಿಂದಾಗಿ ನೀರಿನ ಬಳಕೆಯಲ್ಲಿ ಶೇ.20 ರಷ್ಟು ಕಡಿಮೆಯಾಗಿದ್ದು ಮಾಸಿಕ ನೀರಿನ ಬಿಲ್ ನಲ್ಲಿ ಬರೊಬ್ಬರಿ 39,280 ರೂಪಾಯಿ ಉಳಿತಾಯವಾಗಿದೆ.
Published: 28th June 2022 01:33 PM | Last Updated: 28th June 2022 01:52 PM | A+A A-

ನಲ್ಲಿಗೆ ಏರೇಟರ್ ಸಹಿತ ಫಿಲ್ಟರ್ ನ್ನು ಅಳವಡಿಸಿರುವುದು
ಬೆಂಗಳೂರು: ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಅಳವಡಿಸಲಾದ ಸರಳ ತಂತ್ರಜ್ಞಾನದಿಂದಾಗಿ ನೀರಿನ ಬಳಕೆಯಲ್ಲಿ ಶೇ.20 ರಷ್ಟು ಕಡಿಮೆಯಾಗಿದ್ದು ಮಾಸಿಕ ನೀರಿನ ಬಿಲ್ ನಲ್ಲಿ ಬರೊಬ್ಬರಿ 39,280 ರೂಪಾಯಿ ಉಳಿತಾಯವಾಗಿದೆ.
ಕಚೇರಿಯ ಆವರಣದಲ್ಲಿರುವ 90 ನಲ್ಲಿಗಳಿಗೆ ಈ ಸರಳ ತಂತ್ರಜ್ಞಾನ ಅಳವಡಿಸಲಾಗಿದೆ. ನಲ್ಲಿಗೆ ಏರೇಟರ್ ಸಹಿತ ಫಿಲ್ಟರ್ ನ್ನು ಅಳವಡಿಸುವುದು ಈ ಸರಳ ತಂತ್ರಜ್ಞಾನವಾಗಿದ್ದು, ಪ್ರತಿ ವ್ಯಕ್ತಿಗೆ ತಿಂಗಳಿಗೆ ಸರಾಸರಿ 349 ಲೀಟರ್ ಗಳಷ್ಟು ನೀರನ್ನು ಉಳಿತಾಯ ಮಾಡಲು ಸಾಧ್ಯವಾಗಿದ್ದು ಜೂನ್ ನಲ್ಲಿ ಬಂದಿರುವ ಮೇ ತಿಂಗಳ ನೀರಿನ ಬಿಲ್ ನಲ್ಲಿ ಸಾಕಷ್ಟು ಉಳಿತಾಯ ಮಾಡಲಾಗಿದೆ.
ಡಿಸಿಪಿ ನಿಶಾ ಜೇಮ್ಸ್ (ಆಡಳಿತ) ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಈ ಬಗ್ಗೆ ಮಾತನಾಡಿದ್ದು, ಈಗ ನಾವು ನಗರದಲ್ಲಿರುವ ಎಲ್ಲಾ 23 ಡಿಸಿಪಿ ಕಚೇರಿಗಳಲ್ಲಿಯೂ ಇದನ್ನು ಅಳವಡಿಸಲು ಯೋಜಿಸಿದ್ದೇವೆ. ಜೊತೆಗೆ ನಮ್ಮ ಕ್ವಾರ್ಟರ್ಸ್ ನಲ್ಲಿ ಸಿಬ್ಬಂದಿಗಳ ಮನೆಗಳಲ್ಲಿಯೂ ಇದನ್ನು ಅಳವಡಿಸಲು ಉತ್ತೇಜಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಬಿಡಬ್ಲ್ಯುಎಸ್ಎಸ್ ಬಿ ಗೆ ಬರಬೇಕಿದೆ 355 ಕೋಟಿ ರೂಪಾಯಿ ಬಾಕಿ ಮೊತ್ತ: ಸರ್ಕಾರಿ ಇಲಾಖೆಗಳೇ ಮುಂಚೂಣಿ ಸುಸ್ತಿದಾರರು!
ಎಸ್ಟೇಟ್ ಇನ್ ಚಾರ್ಜ್ ನಾಗರಾಜ್ ಕಣಿಕರ್ ಮಾತನಾಡಿ, ಏರೇಟರ್ ಗಳನ್ನು ಅಳವಡಿಸುವುದಕ್ಕೆ ಪ್ರತಿ ನಲ್ಲಿಗೆ 68 ರೂಪಾಯಿ ಖರ್ಚಾಗಲಿದೆ. 90 ನಲ್ಲಿಗಳಿಗೆ 6,120 ರೂಪಾಯಿಗಳು ಖರ್ಚಾಯಿತು. ಈ ತಂತ್ರಜ್ಞಾನದ ಅಳವಡಿಕೆಗೂ ಮುನ್ನ ಏಪ್ರಿಲ್ ತಿಂಗಳ ನೀರಿನ ಬಿಲ್ 17.29 ಲಕ್ಷ ಲೀಟರ್ ಗಳಿಗೆ 1,90,846 ರೂಪಾಯಿಗಳಷ್ಟಾಗಿತ್ತು. ಅಳವಡಿಕೆಯ ನಂತರ ಮೇ ತಿಂಗಳಲ್ಲಿ 13.86 ಲಕ್ಷ ಲೀಟರ್ ನಷ್ಟು ನೀರಿಗೆ 1,49,671 ರೂಪಾಯಿಗಳಷ್ಟು ಬಿಲ್ ಬಂದಿದೆ ಎಂದು ಮಾಹಿತಿ ನೀಡಿದ್ದಾರೆ.
ಹೆಚ್ಎಸ್ಆರ್ ಲೇಔಟ್ ನಲ್ಲಿರುವ ಎವ್ರಿಥಿಂಗ್ ಇಕೋ (EverythingECO) ಎಂಬ ಕಂಪನಿಯಿಂದ ಇಲಾಖೆ ಈ ತಂತ್ರಜ್ಞಾನದ ಸೇವೆಗಳನ್ನು ಪಡೆದಿದೆ.
ಈ ತಂತ್ರಜ್ಞಾನದ ಕಾರ್ಯನಿರ್ವಹಣೆಯ ಬಗ್ಗೆ ಮಾಹಿತಿ ನೀಡಿರುವ ಸಂಸ್ಥೆಯ ನಿರ್ದೇಶಕ ಕರುಣ್ ಸಿ ಕನಾವಿ, ಸಾಮಾನ್ಯವಾದ ನಲ್ಲಿಗಳಲ್ಲಿ ನೀರಿನ ಹರಿವು ಪ್ರತಿ ನಿಮಿಷಕ್ಕೆ 10 ಲೀಟರ್ ಗಳಷ್ಟಿರುತ್ತದೆ. ಕೆಲವೊಮ್ಮೆ ಇದು 13-14 ಲೀಟರ್ ಗಳಷ್ಟೂ ಆಗಬಹುದು. ಏರೇಟರ್ ಅಳವಡಿಕೆಯಿಂದಾಗಿ ನೀರಿನ ಹರಿವು ನಿಮಿಷಕ್ಕೆ 3 ಲೀಟರ್ ಗಳಿಗೆ ಇಳಿಕೆಯಾಗಲಿದೆ. ನಲ್ಲಿಯಿಂದ ಪೋಲಾಗುವ ನೀರಿನಲ್ಲಿ ಶೇ.50 ಅಥವಾ ಅದಕ್ಕಿಂತ ಹೆಚ್ಚು ಪ್ರಮಾಣದ ನೀರನ್ನು ಉಳಿಸಬಹುದು ಎಂದು ಹೇಳಿದ್ದಾರೆ.