ಶೀಘ್ರದಲ್ಲೇ ಸಚಿವ ಸಂಪುಟ ವಿಸ್ತರಣೆ: 10-11 ಹೊಸ ಮುಖಗಳ ಸೇರ್ಪಡೆ ಸಾಧ್ಯತೆ

ವಿಧಾನಸಭೆ ಚುನಾವಣೆಗೆ ಇನ್ನು ಕೇವಲ ಆರು ತಿಂಗಳಷ್ಟೇ ಬಾಕಿ ಉಳಿದಿದ್ದು, ಶೀಘ್ರದಲ್ಲೇ ರಾಜ್ಯ ಸಚಿವ ಸಂಪುಟ ವಿಸ್ತರಣೆ ಹಾಗೂ ಪುನಾರಚನೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಸಿಎಂ ಬೊಮ್ಮಾಯಿ
ಸಿಎಂ ಬೊಮ್ಮಾಯಿ

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಇನ್ನು ಕೇವಲ ಆರು ತಿಂಗಳಷ್ಟೇ ಬಾಕಿ ಉಳಿದಿದ್ದು, ಶೀಘ್ರದಲ್ಲೇ ರಾಜ್ಯ ಸಚಿವ ಸಂಪುಟ ವಿಸ್ತರಣೆ ಹಾಗೂ ಪುನಾರಚನೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಚುನಾವಣೆ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ಪಕ್ಷದಲ್ಲಿನ ಹೆಚ್ಚಿನ ಕಾರ್ಯ ನಿರ್ವಹಿಸುವ ಅಗತ್ಯವಿದ್ದು, ಈ ಬಾರಿ ಸಂಪುಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಚಿವರನ್ನು ಸೇರ್ಪಡೆಗೊಳಿಸುವ ಸಾಧ್ಯತೆಗಳಿದ್ದು, ಹೊಸ ಮುಖಗಳಿಗೆ ಅವಕಾಶ ನೀಡಲಾಗುತ್ತಿದೆ ಎನ್ನಲಾಗಿದೆ.

ಸಂಪುಟದಲ್ಲಿ ಈಗಾಗಲೇ ಕೆಲ ಜಿಲ್ಲೆಗಳಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಲಾಗಿದ್ದು, ಈ ಬಾರಿ ಸಂಪುಟ ವಿಸ್ತರಣೆ ಅಥವಾ ಪುನಾರಚನೆಯಲ್ಲಿ ಇನ್ನೂ ಕೆಲ ಜಿಲ್ಲೆಗಳಿಗೆ ಪ್ರಾತಿನಿಧ್ಯ ನೀಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಪಕ್ಷದ ಹೈಕಮಾಂಡ್‌ನಿಂದ ಗ್ರೀನ್ ಸಿಗ್ನಲ್ ಬಂದ ತಕ್ಷಣ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.

ಸಂಪುಟ ವಿಸ್ತರಣೆ-ಪುನಾರಚನೆ ಸಂಬಂಧ ಚರ್ಚೆ ನಡೆಸಲು ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕೇಂದ್ರದ ನಾಯಕರೊಂದಿಗೆ ಸಮಯ ಕೇಳಿದ್ದು, ಶೀಘ್ಲದಲ್ಲಿಯೇ ಭೇಟಿಗೆ ಸಮಯ ನಿಗದಿಯಾಗಲಿದೆ ಎನ್ನಲಾಗಿದೆ.

ಈ ಬಾರಿಯ ಸಂಪುಟ ವಿಸ್ತರಣೆ ವೇಳೆ ಕಾರ್ಯನಿರ್ವಹಿಸದ ಕೆಲ ಸಚಿವರನ್ನು ಕೈಬಿಡಲು ಚಿಂತನೆ ನಡೆಸಲಾಗಿದ್ದು, 10-11 ಹೊಸ ಮುಖಗಳಿಗೆ ಅವಕಾಶ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಹೈಕಮಾಂಡ್ ಯಾವಾಗ ಪಟ್ಟಿಗೆ ಒಪ್ಪಿಗೆ ನೀಡುತ್ತದೆ ಎಂಬುದು ಇನ್ನೂ ಖಚಿತವಾಗಿಲ್ಲ. ಮೃತ ಸಚಿವರ ಖಾತೆಗಳೂ ಕೂಡ ಬೊಮ್ಮಾಯಿ ಯವರ ಬಳಿಯೇ ಇದ್ದು, ಅತ್ಯಂತ ಕಾರ್ಯನಿರತರಾಗಿರುವುದರಿಂದ ಈ ಖಾತೆಗಳಿಗೆ ಸೂಕ್ತ ರೀತಿಯಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ.

ಬಿಜೆಪಿ ಎಂಎಲ್‌ಸಿಯೊಬ್ಬರು ಮಾತನಾಡಿ, ಒಂದು ಸಚಿವಾಲಯವು ಮುಖ್ಯಮಂತ್ರಿಯ ಅಧೀನದಲ್ಲಿದ್ದರೆ, ಅದು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ. ಮುಖ್ಯಮಂತ್ರಿಗಳು ಬೇರೆ ಕಾರ್ಯಗಳಲ್ಲಿ ಕಾರ್ಯನಿರತರಾಗಿರುವ ಕಾರಣ ಈ ಸಚಿವಾಲಯದ ಮೇಲೆ ಗಮನ ಹರಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಅಂತಹ ಸಚಿವಾಲಯಗಳು ಆಟೋ ಪೈಲಟ್ ನಲ್ಲಿದ್ದಂತಿರುತ್ತದೆ ಎಂದು ಹೇಳಿದ್ದಾರೆ.

ಇನ್ನು ಕರ್ನಾಟಕ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ಪ್ರಧಾನಮಂತ್ರಿಗಳ ಇತರೆ ಕಾರ್ಯಕ್ರಮಗಳಲ್ಲಿ ಕಾರ್ಯನಿರತರಾಗಿರುವುದರಿಂದ ಈ ಸಂಬಂಧ ಪ್ರತಿಕ್ರಿಯೆ ನೀಡಲು ಸಂಪರ್ಕಕ್ಕೆ ಸಿಕ್ಕಿಲ್ಲ. ಆದರೆ, ಸಂಪುಟ ವಿಸ್ತರಣೆ ಹತ್ತಿರದಲ್ಲಿಯೇ ಇದೆ ಎಂದು ಸಚಿವರೊಬ್ಬರು ಹೇಳುತ್ತಿದ್ದಾರೆ. ಆದರೆ, ಅದು ಯಾವಾಗ ಎಂಬುದೇ ದೊಡ್ಡ ಪ್ರಶ್ನೆಯಾಗಿ ಉಳಿದಿದೆ.

ಸಿಎಂ ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಸಂಪುಟ ರಚನೆ ಮಾಡಿ 16 ತಿಂಗಳುಗಳು ಕಳೆದಿದ್ದು, ಇದೀಗ ಸಂಪುಟ ಪುನಾರಚನೆ ಕುರಿತು ಮಾಹಿತಿಗಳು ಹೊರ ಬೀಳುತ್ತಿದ್ದಂತೆಯೇ ಆಕಾಂಕ್ಷಿಗಳ ಪಟ್ಟಿ ಕೂಡ ದೊಡ್ಡದಾಗಿ ಬೆಳೆಯುತ್ತಿದೆ. ಯಡಿಯೂರಪ್ಪ ಅವರು ತಮ್ಮ ನಿಷ್ಠಾವಂತರಿಗೆ ಸಚಿವ ಸ್ಥಾನ ಕೊಡಿಸಲು ಪ್ರಯತ್ನಗಳನ್ನು ಮಾಡುತ್ತಿದ್ದು, ಈ ಪಟ್ಟಿಯಲ್ಲಿ ಬಿ.ಎಲ್.ಸಂತೋಷ್ ಇದ್ದಾರೆನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com