ಬೆಂಗಳೂರು: ಅಪ್ರಾಪ್ತ ಸಹೋದರರ ಮೇಲೆ ಹಲ್ಲೆ, ಹಣೆಗೆ ಗನ್ ಇಟ್ಟು ಮನೆ ಮಾಲೀಕನ ಪುಂಡಾಟ; ಇಬ್ಬರ ಬಂಧನ

ಮನೆ ಖಾಲಿ ಮಾಡುವ ವಿಚಾರಕ್ಕೆ ನಡೆದ ಜಗಳ ವಿಕೋಪಕ್ಕೆ ತಿರುಗಿ ಬಾಡಿಗೆದಾರ ಸಹೋದರರಿಬ್ಬರನ್ನು ಕೊಠಡಿಯಲ್ಲಿ ಕೂಡಿ ಹಾಕಿ ಮಾರಣಾಂತಿಕ ಹಲ್ಲೆ ನಡೆಸಿ ಹಣೆಗೆ ಪಿಸ್ತೂಲ್‌ ಇಟ್ಟು ಬೆದರಿಕೆ ಹಾಕಿರುವ ಪ್ರಕರಣ ಮುದ್ದಿನ ಪಾಳ್ಯದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಮನೆ ಖಾಲಿ ಮಾಡುವ ವಿಚಾರಕ್ಕೆ ನಡೆದ ಜಗಳ ವಿಕೋಪಕ್ಕೆ ತಿರುಗಿ ಬಾಡಿಗೆದಾರ ಸಹೋದರರಿಬ್ಬರನ್ನು ಕೊಠಡಿಯಲ್ಲಿ ಕೂಡಿ ಹಾಕಿ ಮಾರಣಾಂತಿಕ ಹಲ್ಲೆ ನಡೆಸಿ ಹಣೆಗೆ ಪಿಸ್ತೂಲ್‌ ಇಟ್ಟು ಬೆದರಿಕೆ ಹಾಕಿರುವ ಪ್ರಕರಣ ಮುದ್ದಿನ ಪಾಳ್ಯದಲ್ಲಿ ನಡೆದಿದೆ.

ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಗಿಡದಕೋನೇನಹಳ್ಳಿಯ ಎಂವಿ ಲೇಔಟ್‌ನಲ್ಲಿ 19 ವರ್ಷದ ಪದವಿ ವಿದ್ಯಾರ್ಥಿ ಮತ್ತು ಅವರ 17 ವರ್ಷದ ಸಹೋದರನಿಗೆ ಅವರ ಮನೆ ಮಾಲೀಕರು ಬಂದೂಕು ತೋರಿಸಿ ಬೆದರಿಸಿದ್ದಾರೆ.

ಆರೋಪಿಗಳು, ಅಪ್ರಾಪ್ತ ಸಹೋದರರ ಬಟ್ಟೆ ಬಿಚ್ಚಿಸಿ ಕೋಣೆಯಲ್ಲಿ ಕೂಡಿ ಹಾಕಿ ಕಬ್ಬಿಣದ ರಾಡ್  ನಿಂದ  ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಪಿ ಕೌಶಿಕ್ ಚಿರಾಗ್ ಮತ್ತು ಅಪ್ರಾಪ್ತ ಸಹೋದರ  ಹಾಗೂ ಪೋಷಕರು ಈ ವರ್ಷದ ಆರಂಭದಲ್ಲಿ 8 ಲಕ್ಷ ರೂಪಾಯಿಗಳನ್ನು ನೀಡಿ ಲೀಸ್ ಗೆ ಮನೆ ಪಡೆದಿದ್ದರು. ಆದರೆ ಮಾಲೀಕರೊಂದಿಗೆ ಭಿನ್ನಾಭಿಪ್ರಾಯದಿಂದಾಗಿ, ಅವರು ಮನೆ ಖಾಲಿ ಮಾಡಲು ನಿರ್ಧರಿಸಿದರು.

ಖಾಲಿ ಮಾಡುವ ಸಮಯದಲ್ಲಿ 1 ಲಕ್ಷ ರೂಪಾಯಿ ನೀಡಲು ಮಾಲೀಕರು ಒಪ್ಪಿದರು ಹಾಗೂ ಉಳಿದ ಹಣವನ್ನು ಹಿಂತಿರುಗಿಸಲು ಸಮಯ ಕೋರಿದರು, ಅದಕ್ಕಾಗಿ ಅವರು ಎರಡು ಪೋಸ್ಟ್ ಡೇಟೆಡ್ ಚೆಕ್ ನೀಡುವುದಾಗಿ ಹೇಳಿದರು. ಆದರೆ ಬಾಡಿಗೆದಾರರು ಸಂಪೂರ್ಣ ಹಣಕ್ಕೆ ಬೇಡಿಕೆ ಇಟ್ಟಿದ್ದು, ಮನಸ್ತಾಪಕ್ಕೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರ್.ಅನಿಲ್, ಭರತ್, ರಾಜು, ಚಂದನ್ ಮತ್ತಿತರರ ವಿರುದ್ಧ ಕೌಶಿಕ್ ಸೋಮವಾರ ದೂರು ದಾಖಲಿಸಿದ್ದಾರೆ. ಗಿಡದಕೋನೇನಹಳ್ಳಿಯ ಮುದಿನಪಾಳ್ಯ ಮುಖ್ಯರಸ್ತೆಯಲ್ಲಿರುವ ಅನಿಲ್ ಅವರ ಕಚೇರಿಯಲ್ಲಿ ಸಹೋದರರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ದೂರಿನಲ್ಲಿಉಲ್ಲೇಖಿಸಲಾಗಿದೆ.

ಅನಿಲ್‌ ಅವರ ತಂದೆ ರಾಮಚಂದ್ರಪ್ಪ ಅವರ ಹೆಸರಿನಲ್ಲಿರುವ ಮನೆಯನ್ನು ಕೌಶಿಕ್‌ ಕುಟುಂಬ ಭೋಗ್ಯಕ್ಕೆ ಹಾಕಿಸಿಕೊಂಡು ವಾಸವಿತ್ತು. ಕೌಶಿಕ್‌ ತಾಯಿ ಮನೆಯಲ್ಲಿ ಒಂಟಿಯಾಗಿದ್ದಾಗ ರಾಮಚಂದ್ರಪ್ಪ ಮತ್ತು ಅವರ  ಮೊಮ್ಮಗ ಭರತ್ ಮನೆಗೆ ಬಂದು  ಮನೆ ಯಾವಾಗ ಖಾಲಿ ಮಾಡುತ್ತಿರಾ ಎಂದು ಕೇಳಿದ್ದಾರೆ. ಹಣ ಪೂರ್ತಿ ಕೊಟ್ಟ ಮೇಲೆ ಮನೆ ಖಾಲಿ ಮಾಡುವುದಾಗಿ ಕೌಶಿಕ್ ತಾಯಿ ಹೇಳಿದ್ದಾರೆ. ಕೌಶಿಕ್‌ ತಾಯಿ, ರಾಮಚಂದ್ರಪ್ಪ ಅವರ ಮೊಮ್ಮಗ ಭರತ್‌ ನಡುವೆ ಜಗಳ ನಡೆದಿತ್ತು. ಈ ವಿಚಾರವಾಗಿ ನಡೆದ ವಾಗ್ವಾದ ತಾರಕಕ್ಕೇರಿದೆ.

ಮಾರನೇ ದಿನ ಈ ಜಗಳದ ವಿಚಾರ ಕೌಶಿಕ್‌ಗೆ ಗೊತ್ತಾಗಿ ತನ್ನ ಸಹೋದರ, ಮತ್ತೊಬ್ಬ ಸ್ನೇಹಿತನ ಜತೆ ಮುದ್ದಿನ ಪಾಳ್ಯದಲ್ಲಿರುವ ಅನಿಲ್‌ ಅವರ ಬೋರ್‌ವೆಲ್‌ ಕಚೇರಿ ಬಳಿ ಭರತ್‌ ಇರಬಹುದು ಎಂದು ಭಾವಿಸಿ ತೆರಳಿದ್ದರು.  ಆದರೆ ಅಲ್ಲಿ ಭರತ್ ಇರಲಿಲ್ಲ, ಹೀಗಾಗಿ ಆತನಿಗಾಗಿ ಕೌಶಿಕ್ ಸಹೋದರರು ಕಾಯುತ್ತಿದ್ದರು. ಮಧ್ಯಾಹ್ನ 3.30ರ ವೇಳೆಗೆ ಅಂಗಡಿ ಬಳಿ ಬಂದ ಭರತ್  ಮತ್ತು ಅವರ ಚಿಕ್ಕಪ್ಪ, ರಾಮಚಂದ್ರಪ್ಪ ಅವರ ಮಗ ಅನಿಲ್ ಮತ್ತು ಇತರರು ಕಚೇರಿಗೆ ಆಗಮಿಸಿ ಸಹೋದರರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ.

ಆರೋಪಿಗಳು ಚಿರಾಗ್ ಅವರ ಬಲಗಾಲಿಗೆ ಇರಿದಿದ್ದಾರೆ. ಇಬ್ಬರನ್ನು ಬಂಧಿಸಲಾಗಿದ್ದು, ಅನಿಲ್ ನನ್ನು ಇನ್ನೂ ಬಂಧಿಸಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅನಿಲ್ ಸಹೋದರರಿಗೆ ಬಂದೂಕು ತೋರಿಸಿ ಬೆದರಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಆರೋಪಿಗಳ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆ, ಕೊಲೆ ಯತ್ನ ಮತ್ತು ಇತರ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com