ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಎನ್‌ಐಎ ದಾಳಿ; ಮೂವರು ಪಿಎಫ್‌ಐ ಮುಖಂಡರ ಬಂಧನ
ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಹಲವು ಸ್ಥಳಗಳಲ್ಲಿ ಶೋಧ ನಡೆಸಿದ್ದು, ಮೂವರನ್ನು ಬಂಧಿಸಿದೆ.
Published: 05th November 2022 08:34 AM | Last Updated: 05th November 2022 02:57 PM | A+A A-

ಸಾಂದರ್ಭಿಕ ಚಿತ್ರ
ಮಂಗಳೂರು: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಹಲವು ಸ್ಥಳಗಳಲ್ಲಿ ಶೋಧ ನಡೆಸಿದ್ದು, ಮೂವರನ್ನು ಬಂಧಿಸಿದೆ.
ಪ್ರವೀಣ್ ನೆಟ್ಟಾರು ಹತ್ಯೆಗೆ ಸಂಚು ರೂಪಿಸಿದ್ದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದ ಕೆ ಮಹಮ್ಮದ್ ಇಕ್ಬಾಲ್ ಮತ್ತು ಈತನ ಸಹೋದರ ಕೆ ಇಸ್ಮಾಯಿಲ್ ಶಾಫಿ ಮತ್ತು ಸುಳ್ಯ ತಾಲೂಕಿನ ಕಸಬಾ ಗ್ರಾಮದ ಇಬ್ರಾಹಿಂ ಶಾ ಬಂಧಿತ ಆರೋಪಿಗಳು.
ದಕ್ಷಿಣ ಕನ್ನಡ, ಹುಬ್ಬಳ್ಳಿ ಮತ್ತು ಮೈಸೂರು ಜಿಲ್ಲೆಗಳ 5 ಸ್ಥಳಗಳಲ್ಲಿ ಎನ್‌ಐಎ ಶೋಧ ನಡೆಸಿದೆ.
ಬೆಳ್ಳಾರೆ ನಿವಾಸಿ ಹಾಗೂ ಬಿಜೆಪಿ ಯುವ ಮೋರ್ಚಾದ ಜಿಲ್ಲಾ ಕಾರ್ಯದರ್ಶಿ ಪ್ರವೀಣ್ ನೆಟ್ಟಾರು ಅವರನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಕಾರ್ಯಕರ್ತರು ಜೂನ್ 26 ರಂದು ಹರಿತವಾದ ಆಯುಧಗಳಿಂದ ಹತ್ಯೆಗೈದಿದ್ದರು.
ಇದನ್ನೂ ಓದಿ: ನೆಟ್ಟಾರು ಹತ್ಯೆ: ವಾಂಟೆಡ್ ಪಟ್ಟಿ ಬಿಡುಗಡೆ ಮಾಡಿದ ಎನ್‌ಐಎ, ಸುಳಿವು ಕೊಟ್ಟರೆ 5 ಲಕ್ಷ ರೂ. ಬಹುಮಾನ!
ಶೋಧದ ವೇಳೆ ಆರೋಪಿಗಳು ಮತ್ತು ಶಂಕಿತರ ಮನೆಗಳಿಂದ ಡಿಜಿಟಲ್ ಸಾಧನಗಳು ಮತ್ತು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಪ್ರಕರಣದಲ್ಲಿ ಇದುವರೆಗೆ 10 ಆರೋಪಿಗಳನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ನಾಲ್ವರು ಆರೋಪಿಗಳ ವಿರುದ್ಧ ಎನ್‌ಐಎ ಬಹುಮಾನ ಘೋಷಿಸಿದ್ದು, ಅವರನ್ನು ಬಂಧಿಸುವ ಪ್ರಯತ್ನ ಮುಂದುವರಿದಿದೆ. ಪ್ರಕರಣದ ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ.