'ಹಿಂದೂ' ಪದ ಅಶ್ಲೀಲ ಹೇಳಿಕೆಗೆ ಈಗಲೂ ಬದ್ಧ: ಸತೀಶ್ ಜಾರಕಿಹೊಳಿ; ಬೆಂಗಳೂರು ಸೇರಿ ಜಿಲ್ಲಾ ಕೇಂದ್ರಗಳಲ್ಲಿ ಬಿಜೆಪಿ ವ್ಯಾಪಕ ಪ್ರತಿಭಟನೆ

ಹಿಂದೂ ಪದ ಪರ್ಷಿಯನ್ ಪದ ಅದು ಅಶ್ಲೀಲ, ಹಿಂದೂ ಪದಕ್ಕೆ ಶಬ್ದಕೋಶದಲ್ಲಿ ಅಶ್ಲೀಲ ಎಂಬ ಅರ್ಥವಿದೆ ಎಂದು ಹೇಳಿಕೆ ನೀಡಿ ತೀವ್ರ ಟೀಕೆಗೆ ಗುರಿಯಾಗಿರುವ ಕಾಂಗ್ರೆಸ್ ಕಾರ್ಯಾಧ್ಯಕ್ಷ ಹಾಗೂ ಬೆಳಗಾವಿಯ ಶಾಸಕ ಸತೀಶ್ ಜಾರಕಿಹೊಳಿ (Satish Jarkiholi) ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ತೀವ್ರವಾಗಿದೆ.
ನಿಪ್ಪಾಣಿಯಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಸತೀಶ್ ಜಾರಕಿಹೊಳಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿರುವುದು
ನಿಪ್ಪಾಣಿಯಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಸತೀಶ್ ಜಾರಕಿಹೊಳಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿರುವುದು

ಬೆಂಗಳೂರು: ಹಿಂದೂ ಪದ (Hindu word) ಪರ್ಷಿಯನ್ ಪದ ಅದು ಅಶ್ಲೀಲ, ಹಿಂದೂ ಪದಕ್ಕೆ ಶಬ್ದಕೋಶದಲ್ಲಿ ಅಶ್ಲೀಲ ಎಂಬ ಅರ್ಥವಿದೆ ಎಂದು ಹೇಳಿಕೆ ನೀಡಿ ತೀವ್ರ ಟೀಕೆಗೆ ಗುರಿಯಾಗಿರುವ ಕಾಂಗ್ರೆಸ್ ಕಾರ್ಯಾಧ್ಯಕ್ಷ ಹಾಗೂ ಬೆಳಗಾವಿಯ ಶಾಸಕ ಸತೀಶ್ ಜಾರಕಿಹೊಳಿ (Satish Jarkiholi) ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ತೀವ್ರವಾಗಿದೆ.

ಸತೀಶ್ ಜಾರಕಿಹೊಳಿಯವರು ಕೂಡಲೇ ಜನರ ಕ್ಷಮೆ ಕೇಳಬೇಕೆಂದು ಬಿಜೆಪಿ ನಾಯಕರು ತೀವ್ರ ಪಟ್ಟು ಹಿಡಿದಿದ್ದು ಇಂದು ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿದ್ದಾರೆ. ಸತೀಶ್ ಜಾರಕಿಹೊಳಿ ಹೇಳಿಕೆ ವಿರುದ್ಧ ಪ್ರತಿಭಟನೆ ನಡೆಸುವಂತೆ ಬಿಜೆಪಿ ತನ್ನ ಸಂಸದರು, ಶಾಸಕರು ಮತ್ತು ಕಾರ್ಯಕರ್ತರಿಗೆ ಕರೆ ನೀಡಿದೆ. ಈ ವೇಳೆ ಜನಪ್ರತಿನಿಧಿಗಳು ಭಾಷಣ ಮಾಡಬೇಕು. ಭಾಷಣದಲ್ಲಿ ಗಾಂಧಿ ಕುಟುಂಬ ಹೊಂದಿರುವ ‘ಗಾಂಧಿ’ ಕುಟುಂಬದ ಉಪನಾಮದ ವಿಷಯ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟಿಪ್ಪು ಜಯಂತಿ ಆಚರಿಸಿದ್ದ ವಿಚಾರ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಯೇಸು ಪ್ರತಿಮೆ ಸ್ಥಾಪನೆಗೆ ಮುಂದಾಗಿದ್ದ ವಿಷಯ ಪ್ರಸ್ತಾಪಿಸಲು ಸೂಚಿಸಲಾಗಿದೆ. ಸಭೆ ಮತ್ತು ಭಾಷಣದ ಬಳಿಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸತೀಶ್ ಜಾರಕಿಹೊಳಿ ವಿರುದ್ಧ ಕ್ರಿಮಿನಲ್ ದೂರು ದಾಖಲಿಸಬೇಕು ಎಂದು ಬಿಜೆಪಿಯ ಎಲ್ಲ ಜಿಲ್ಲಾ ಘಟಕಗಳಿಗೆ ರಾಜ್ಯ ಘಟಕದಿಂದ ಸೂಚನೆ ರವಾನೆಯಾಗಿದೆ.

ಬೆಳಗಾವಿ ಸೇರಿ ಹಲವೆಡೆ ವ್ಯಾಪಕ ಪ್ರತಿಭಟನೆ: ಹಲವು ಸಂಘಟನೆಗಳು, ವೇದಿಕೆಗಳು ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸತೀಶ್ ಜಾರಕಿಹೊಳಿಯವರು ಈ ಹಿಂದೂ ದೇಶದ ಅನಾದಿ ಕಾಲದ ಸಂಸ್ಕೃತಿ, ಹಿಂದೂ ಜನರ ಭಾವನೆಗಳು, ಹಿಂದೂ ಧರ್ಮೀಯರಿಗೆ ಅವಮಾನ ಉಂಟುಮಾಡಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.

ಸತೀಶ್ ಜಾರಕಿಹೊಳಿಯವರ ಜಿಲ್ಲೆ ಬೆಳಗಾವಿಯಲ್ಲಿ ಕೂಡ ಪ್ರತಿಭಟನೆ ತೀವ್ರವಾಗಿದೆ. ಸಚಿವೆ ಶಶಿಕಲಾ ಜೊಲ್ಲೆ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. ನಿಪ್ಪಾಣಿ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿ ಸತೀಶ ಜಾರಕಿಹೊಳಿ ಹೇಳಿಕೆಯನ್ನು ಖಂಡಿಸಿದರು.

ನಿಪ್ಪಾಣಿ ನಗರದ ಬಸ್ ನಿಲ್ದಾಣದಿಂದ ತಹಶೀಲ್ದಾರ ಕಚೇರಿಯವರಿಗೆ ಪ್ರತಿಭಟನಾಕಾರರು ಬೃಹತ್ ಮೆರವಣಿಗೆ ನಡೆಸಿ ಸತೀಶ ಜಾರಕಿಹೊಳಿ ಅವರಿಗೆ ದಿಕ್ಕಾರ ಕೂಗಿ ಹಿಂದೂ ಧರ್ಮಕ್ಕೆ ಜೈ ಅಂದರು.

ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ದೇಶದ ದೊಡ್ಡ ಪಕ್ಷವಾಗಿರುವ ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಜನರಿಗೆ ತಪ್ಪು ಹೇಳಿಕೆ ಖಂಡನೀಯ. ಜನರಿಗೆ ತಪ್ಪು ಸಂದೇಶ ಕೊಟ್ಟು ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ.ಅಂತಹ ಹೇಳಿಕೆ ಯಾರು ಸಹಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಪ್ಪಟ ಹಿಂದೂ ಸಾಮ್ರಾಟ ನಾಡಿನಲ್ಲಿ ಹಿಂದೂ ಶಬ್ದಕ್ಕೆ ಅಪಮಾನ ಮಾಡಿದರು ಎಷ್ಟು ಸರಿ. ಅದು ನಿಪ್ಪಾಣಿಯಲ್ಲಿ ಹಿಂದೂ ಬಗ್ಗೆ ಮಾತನಾಡಿರುವುದು ಈ ಭಾಗದ ಜನರನ್ನು ಕೆರಳಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಡಾ.ಅಂಬೇಡ್ಕರ್ ರಚನೆ ಮಾಡಿರುವ ಸಂವಿಧಾನ ಮೇಲೆ ನಾವೇಲ್ಲರು ನಡೆಯುತ್ತಿದ್ದೇವೆ. ಬಸವೇಶ್ವರ ವಚನಗಳು ಮತ್ತು ಶಿವಾಜಿ ಮಹಾರಾಜರ ಒಡಾಡಿದ ಪಾವನ ಭೂಮಿ ಕರ್ನಾಟಕವಾಗಿದೆ. ಅನೇಕತೆಯಲ್ಲಿ ಏಕತೆ ಬಿಂಬಿಸುವ ಏಕೈಕ ರಾಷ್ಟ್ರ ಅದು ಭಾರತ. ಇಂರಹ ದೇಶದಲ್ಲಿ ಜಾತಿ ಬೇಧ ಇಲ್ಲ ಆದರೆ ಸತೀಶ ಜಾರಕಿಹೊಳಿ ಹಿಂದೂ ಧರ್ಮ ಬಗ್ಗೆ ಅವಹೇಳನಕಾರಿ ಹೇಳಿಕೆ ಯಾರು ಸಹಿಸುವುದಿಲ್ಲ. ನಿಪ್ಪಾಣಿಯಲ್ಲಿ ಮಾಡಿರುವ ಕಾರ್ಯಕ್ರಮ ಸ್ವಾಗತಿಸುತ್ತೇವೆ. ಆದರೆ ಹಿಂದೂ ಧರ್ಮದ ಬಗ್ಗೆ ಮಾತನಾಡಿರುವುದು ನಾವು ಸಹಿಸುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಿವಾಜಿ ಮತ್ತು ಸಂಭಾಜಿ ಮಹಾರಾಜರ ಬಗ್ಗೆ ಮಾತನಾಡಬೇಕಾದರೆ ಅವರ ಪೂರ್ವಾಪರ ಇತಿಹಾಸ ತಿಳಿದು ಮಾತನಾಡಬೇಕು. ಜನರಿಗೆ ಒಳ್ಳೆಯ ಸಂದೇಶ ಕೊಡುವುದು ಬಿಟ್ಟು ಜನರಲ್ಲಿ ತಪ್ಪು ಸಂದೇಶ ನೀಡಿರುವುದು ಖಂಡನೀಯ ಎಂದರು. ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಮಾತನಾಡಿದ ಸತೀಶ ಜಾರಕಿಹೊಳಿ ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಬೇಕು ಎಂದು ಬಿಜೆಪಿ ಕಾರ್ಯಕರ್ತರು ಒತ್ತಾಯಿಸಿದರು.

ಸತೀಶ್ ಜಾರಕಿಹೊಳಿಯವರು ಹೇಳುವುದೇನು?: ಹಿಂದೂ ಎಂಬುದು ಪರ್ಷಿಯನ್ ಭಾಷೆಯಿಂದ ಬಂದ ಶಬ್ದ. ಹಿಂದೂ ಪದದ ಬಗ್ಗೆ ಶಬ್ದಕೋಶದಲ್ಲಿ, ವಿಕಿಪಿಡಿಯಾದಲ್ಲಿ ಇರುವ ವಿವರಣೆಯನ್ನು ನಾನು ಹೇಳಿದ್ದೇನೆ. ಹಿಂದೂ ಪದದ ಬಗ್ಗೆ ಚರ್ಚೆಯಾಗಬೇಕು ಎಂದು ನಾನು ಹೇಳಿದ್ದೇನೆ. ಆದರೆ ನಾನು ಏನು ಹೇಳಿದ್ದೇನೆಯೋ ಅದರ ಬಗ್ಗೆ ಅಥವಾ ಹಿಂದೂ ಪದದ ನಿಜವಾದ ಅರ್ಥದ ಬಗ್ಗೆ ಚರ್ಚೆ ನಡೆಯುತ್ತಿಲ್ಲ. ಬೇರೆ ಯಾವ್ಯಾವುದೋ ವಿಷಯಗಳ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ನಾನು ತಪ್ಪು ಹೇಳಿದ್ದೇನೆಂದು ಸಾಬೀತುಪಡಿಸಿದರೆ ಕ್ಷಮೆಯಾಚಿಸುವುದಷ್ಟೇ ಅಲ್ಲ, ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುತ್ತೇನೆ. ನಾನು ಯಾರಿಗೂ ಕ್ಷಮೆ ಕೇಳುವ ಪ್ರಶ್ನೆಯಿಲ್ಲ, ನನ್ನ ಮಾತಿಗೆ ಈಗಲೂ ಬದ್ಧನಾಗಿದ್ದೇನೆ. ನಾನು ಅರೆಬರೆ ಓದಿದವನಲ್ಲ, 30 ವರ್ಷಗಳಿಂದ ಓದುತ್ತಲೇ ಇದ್ದೇನೆ. ಆಳವಾದ ಅಧ್ಯಯನದ ಅನುಭವದಿಂದಲೇ ನಾನು ಈ ಹೇಳಿಕೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ತಿರುಗೇಟು ನೀಡಿದ್ದಾರೆ. 

ನನ್ನ ಹೇಳಿಕೆಯನ್ನು ಸಾರಾಸಗಟಾಗಿ ವಿರೋಧಿಸುವ ಬದಲು, ಸಮರ್ಪಕವಾಗಿ ಪರಿಶೀಲಿಸಲಿ. ಯಾವುದೇ ಧರ್ಮ, ಜಾತಿ, ಸಮಾಜದ ವಿರುದ್ಧ ನಾನು ಹೇಳಿಕೆ ನೀಡಿಲ್ಲ. ಈಗ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ, ಅವರಿಗೆ ಸೂಕ್ತ ಎನಿಸುವ ಸಂಸ್ಥೆಗಳಿಗೆ ತನಿಖೆ ಮಾಡಿಸಲಿ. ನನ್ನ ಜತೆ ಚರ್ಚೆಗೆ ಬಂದರೆ ನಾನೇ ಅವರಿಗೆ ಮನವರಿಕೆ ಮಾಡಿಕೊಡುವೆ. ಚರ್ಚೆಗೆ ಬಂದವರಿಗೆ ದಾಖಲೆ ಸಮೇತ ವಿವರಣೆ ನೀಡಲು ಸಿದ್ಧನಿರುವೆ ಎಂದು ಹೇಳಿದ್ದಾರೆ. 

ಕಳೆದ ಭಾನುವಾರ ಬೆಳಗಾವಿಯ ನಿಪ್ಪಾಣಿ ಪಟ್ಟಣದಲ್ಲಿ ಮಾನವ ಬಂಧುತ್ವ ವೇದಿಕೆ ಆಯೋಜಿಸಿದ್ದ ‘ಮನೆಮನೆಗೆ ಬುದ್ಧ, ಬಸವ, ಅಂಬೇಡ್ಕರ್ ಕಾರ್ಯಕ್ರಮ’ದಲ್ಲಿ ಹಿಂದೂ ಶಬ್ದದ ಅರ್ಥದ ಬಗ್ಗೆ ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದ್ದರು.

ಕಾಂಗ್ರೆಸ್ ನಾಯಕರು ಮೌನ: ಹೇಳಿಕೇಳಿ ಕರ್ನಾಟಕದಲ್ಲಿ ಇದು ವಿಧಾನಸಭೆ ಚುನಾವಣೆಯ ಸಮಯ. ಇನ್ನು 5 ತಿಂಗಳಲ್ಲಿ ಚುನಾವಣೆ ನಡೆಯಲಿದೆ. ಇಂತಹ ಸಂದರ್ಭದಲ್ಲಿ ಹೇಳಿಕೆ ನೀಡಿ ಕಾಂಗ್ರೆಸ್ ವಿವಾದವನ್ನು ಮೈಮೇಲೆ ಏಕೆ ಎಳೆದುಕೊಂಡಿದೆ ಎಂದು ಜನಸಾಮಾನ್ಯರು ಮಾತನಾಡಿಕೊಳ್ಳುತ್ತಿದ್ದಾರೆ.

ಆದರೆ ಕಾಂಗ್ರೆಸ್ ನ ಪ್ರಮುಖ ನಾಯಕರು ಈ ಬಗ್ಗೆ ಮೌನವಹಿಸಿದ್ದಾರೆ. ಸಿದ್ದರಾಮಯ್ಯನವರು ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರಿಂದ ಸ್ಪಷ್ಟನೆ ಕೇಳುತ್ತೇನೆ ಎಂದಷ್ಟೇ ಹೇಳಿದ್ದಾರೆ. ಇನ್ನು ಬಿ ಕೆ ಹರಿಪ್ರಸಾದ್ ಇದು ಸತೀಶ್ ಜಾರಕಿಹೊಳಿಯವರ ವೈಯಕ್ತಿಕ ಅಭಿಪ್ರಾಯ ಎಂದಿದ್ದಾರೆ. ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆಯವರು ಕೂಡ ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಇದು ಮುಂದೆ ಯಾವ ತಿರುವು ಪಡೆದುಕೊಳ್ಳಲಿದೆ ಎಂದು ನೋಡಬೇಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com