ಸತೀಶ್ ಜಾರಕಿಹೊಳಿ 'ಹಿಂದೂ' ಹೇಳಿಕೆ; ಕೆಪಿಸಿಸಿ ಕಾರ್ಯಾಧ್ಯಕ್ಷ ಹುದ್ದೆಗೆ ಕುತ್ತು? ಸ್ಪಷ್ಟೀಕರಣ ಕೇಳ್ತಿವಿ ಎಂದ ಡಿಕೆಶಿ!

ಹಿಂದೂ ಎಂಬುದು ಅಶ್ಲೀಲ ಪದ ಎಂಬುದು ವಿವಾದಾತ್ಮಕ ಹೇಳಿಕೆ ನೀಡಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರ ಹೇಳಿಕೆ ಅವರಿಗೇ ಮುಳುವಾಗಿದ್ದು, ಅವರ ಕೆಪಿಸಿಸಿ ಕಾರ್ಯಾಧ್ಯಕ್ಷ ಹುದ್ದೆಗೆ ಕುತ್ತು ತಂದಿದೆ. 
ಸತೀಶ್ ಜಾರಕಿಹೊಳಿ
ಸತೀಶ್ ಜಾರಕಿಹೊಳಿ

ಬೆಂಗಳೂರು: ಹಿಂದೂ ಎಂಬುದು ಅಶ್ಲೀಲ ಪದ ಎಂಬುದು ವಿವಾದಾತ್ಮಕ ಹೇಳಿಕೆ ನೀಡಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರ ಹೇಳಿಕೆ ಅವರಿಗೇ ಮುಳುವಾಗಿದ್ದು, ಅವರ ಕೆಪಿಸಿಸಿ ಕಾರ್ಯಾಧ್ಯಕ್ಷ ಹುದ್ದೆಗೆ ಕುತ್ತು ತಂದಿದೆ. 

ಸತೀಶ್ ಜಾರಕಿಹೊಳಿ ಹೇಳಿಕೆ ಕಾಂಗ್ರೆಸ್ ಪಕ್ಷದಲ್ಲೇ ಅಸಮಾಧಾನ, ಆಕ್ರೋಶಕ್ಕೆ ಕಾರಣವಾಗಿದ್ದು, ಅವರ ತಲೆ ದಂಡವಾಗುವ ಎಲ್ಲ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ. 

ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ಹಿಂದೂ ನಮ್ಮ ಪದವೇ ಅಲ್ಲ, ಇದು ಪರ್ಷಿಯನ್‌ನಿಂದ ಬಂದಿರುವ ಅರ್ಥ, ಹಿಂದೂ ಪದದ ಅರ್ಥ ಅಶ್ಲೀಲವಾಗಿದೆ ಎಂದು ನಿನ್ನೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಬೆಳಗಾವಿಯ ನಿಪ್ಪಾಣಿಯಲ್ಲಿ ಆಡಿದ ಮಾತಿಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ತಮ್ಮ ಮಾತಿಗೆ ಆಕ್ರೋಶ ವ್ಯಕ್ತವಾದ ಬೆನ್ನಲ್ಲೆ ಸತೀಶ್ ಜಾರಕಿಹೊಳಿ ಇದು ನನ್ನ ವೈಯಕ್ತಿಕ ಹೇಳಿಕೆಯಲ್ಲ, ನನ್ನ ಮಾತನ್ನು ತಿರುಚಲಾಗಿದೆ. ದಾಖಲೆಗಳನ್ನು ಉಲ್ಲೇಖಿಸಿ ನಾನು ಈ ರೀತಿ ಮಾತನಾಡಿದ್ದೆ ಎಂದು ಸ್ಪಷ್ಟನೆ ನೀಡಿದ್ದರಾದರೂ ಅವರ ಮಾತಿಗೆ ಅವರ ಪಕ್ಷದಲ್ಲೇ ಆಕ್ಷೇಪ, ಅಸಮಾಧಾನಗಳು ವ್ಯಕ್ತವಾಗಿವೆ. 

ಸ್ವತಃ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಸತೀಶ್ ಜಾರಕಿಹೊಳಿ ಮಾತಿಗೆ ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದರು. 

ಕಾಂಗ್ರೆಸ್ ಮೇಲೆ ಮುಗಿಬೀಳುತ್ತಿರುವ ಬಿಜೆಪಿ
ಸತೀಶ್ ಜಾರಕಿಹೊಳಿ ಅವರ ಮಾತನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳಲು ಬಿಜೆಪಿ ಮುಂದಾಗಿದ್ದು, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ಸಿಂಗ್ ಸೇರಿದಂತೆ ಬಿಜೆಪಿಯ ಹಲವು ಸಚಿವರು, ಶಾಸಕರು ಸತೀಶ್ ಜಾರಕಿಹೊಳಿ ವಿರುದ್ಧ ಮುಗಿಬಿದ್ದಿದ್ದಾರೆ. ಇದು ಚುನಾವಣಾ ವಿಚಾರವಾಗಿ ಕಾಂಗ್ರೆಸ್‌ಗೆ ಕಂಟಕವಾಗಬಹುದು ಎಂಬ ಹಿನ್ನೆಲೆಯಲ್ಲಿ ಸತೀಶ್ ಜಾರಕಿಹೊಳಿ ಅವರಿಂದ ಕಾರ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಪಡೆದು ವಿವಾದಕ್ಕೆ ಅಂತ್ಯ ಹಾಡಲು ಕಾಂಗ್ರೆಸ್ ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ. 

ಸತೀಶ್ ಜಾರಕಿಹೊಳಿ ವಿವಾದಾತ್ಮಕ ಹೇಳಿಕೆ ನೀಡಿದ್ದ ಬೆನ್ನಲ್ಲೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕ ಶಿವಕುಮಾರ್ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರವರು ಜತೆ ದೂರವಾಣಿಯಲ್ಲಿ ಮಾತನಾಡಿ ಸತೀಶ್ ಜಾರಕಿಹೊಳಿ ಅವರ ರಾಜೀನಾಮೆ ಪಡೆಯುವಂತೆ ಸೂಚನೆ ನೀಡಿದ್ದಾರೆ ಎಂದು ಹೇಳಲಾಗಿದ್ದು, ಸತೀಶ್ ಜಾರಕಿಹೊಳಿ ಅವರ ತಲೆದಂಡವಾಗುವ ಸಾಧ್ಯತೆ ಹೆಚ್ಚಿದೆ ಎಂದು ಕೆಲ ಮಾಧ್ಯಮಗಳು ವರದಿಮಾಡಿವೆ.

ಸ್ಪಷ್ಟೀಕರಣ ಕೇಳ್ತಿವಿ: ಡಿಕೆ ಶಿವಕುಮಾರ್
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿಯವರು ಹಿಂದೂ ಧರ್ಮದ ಈ ಹೇಳಿಕೆ ಕುರಿತು ಅವರಿಂದ ಸ್ಪಷ್ಟೀಕರಣ ಪಡೆದುಕೊಳ್ಳುತ್ತೇನೆ ಎಂದು ಕೆ.ಪಿ.ಸಿ.ಸಿ.ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ನಗರದಲ್ಲಿಂದು ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಸತೀಶ್ ಹೇಳಿಕೆಯು ಅವರ ವೈಯಕ್ತಿಕ ವಿಚಾರ, ತಮ್ಮ ಮನೆಯಲ್ಲಿ ಅವರು ಈ ಕುರಿತು ಮಾತನಾಡಿದ್ದರೆ ಏನೂ ಆಗುವುದಿಲ್ಲ. ಆದರೆ ಸಾರ್ವಜನಿಕ ಬದುಕಿನಲ್ಲಿ ಈ ರೀತಿ ಹೇಳಿಕೆ ನೀಡುವುದು ಖಂಡನೀಯ ಎಂದು ಹೇಳಿದರು. 

'ತಾವು ಸಹ ಒಬ್ಬ ಹಿಂದೂ ಎಂದ ಅವರು, ಸತೀಶ್ ಹೇಳಿಕೆಯಿಂದ ಪಕ್ಷಕ್ಕೆ ಯಾವುದೇ ಹಾನಿಯಾಗಲ್ಲ. ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಯಿಂದ ಬಿಜೆಪಿಗೆ ಭಯ ಬಂದಿದೆ. ಮೋದಿ ಭಾರತ್ ತೋಡೋ ಮಾಡಿದ್ದರು. ಈಗ ರಾಹುಲ್ ಗಾಂಧಿ ಭಾರತ್ ಜೋಡೋ ಮಾಡುತ್ತಿದ್ದಾರೆ. ಇದೇ ನಮಗೂ, ಅವರಿಗೂ ಇರುವ ವ್ಯತ್ಯಾಸ ಎಂದು ಶಿವಕುಮಾರ್ ಹೇಳಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com