ಮಂಗಳೂರು ಮಳಲಿ ಮಸೀದಿ ವಿವಾದ: ವಿಹೆಚ್ಪಿ ಅರ್ಜಿ ವಿಚಾರಣೆಗೆ ಕೋರ್ಟ್ ಅಸ್ತು
ಮಂಗಳೂರು: ಮಳಲಿ ಮಸೀದಿ ಜಾಗದ ವಿವಾದಕ್ಕೆ ಸಂಬಂದಿಸಿದಂತೆ ವಿಶ್ವ ಹಿಂದೂ ಪರಿಷತ್ ಸಲ್ಲಿಸಿದ್ದ ಅರ್ಜಿಯನ್ನು ಮೂರನೇ ಹೆಚ್ಚುವರಿ ಸಿವಿಲ್ ಕೋರ್ಟ್ ವಿಚಾರಣೆಗೆ ಬುಧವಾರ ಅಂಗೀಕರಿಸಿದೆ.
ಇದೇ ವೇಳೆ ಮಸೀದಿ ಕಾಮಗಾರಿಗೆ ನೀಡಿರುವ ತಡೆಯಾಜ್ಞೆ ತೆರವುಗೊಳಿಸಬೇಕು ಮತ್ತು ವಿಎಚ್ಪಿ ಅರ್ಜಿ ವಜಾ ಮಾಡಬೇಕು ಎನ್ನುವ ಮಸೀದಿ ಆಡಳಿತ ಮಂಡಳಿಯ ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿದೆ.
ಮಸೀದಿ ವಿವಾದದ ಬಗ್ಗೆ ಕಳೆದ ಅ 17ರಂದು ನ್ಯಾಯಾಲಯವು ವಿಚಾರಣೆ ನಡೆಸಿತ್ತು. ಮಳಲಿ ಮಸೀದಿಯಲ್ಲಿ ದೇವಾಲಯ ಮಾದರಿ ರಚನೆ ಇದೆ. ವಿಚಾರಣೆಗಾಗಿ ಕೋರ್ಟ್ ಕಮಿಷನರ್ ನೇಮಿಸಬೇಕು ಎಂದು ಹಿಂದುತ್ವ ಪರ ಸಂಘಟನೆಗಳು ಕೋರಿದ್ದವು. ಮಸೀದಿ ವಿಚಾರ ವಕ್ಫ್ ನ್ಯಾಯಾಲಯದಲ್ಲಿ ಮಾತ್ರ ವಿಚಾರಣೆ ಮಾಡಬಹುದೆಂಬ ಮಸೀದಿ ಪರ ವಕೀಲರ ವಾದವನ್ನು ವಾದಿಸಿದ್ದರು.
ಈ ವಾದವನ್ನು ಆಲಿಸಿದ ಬಳಿಕ ಕೋರ್ಟ್ ಮಸೀದಿ ಆಡಳಿತದ ಅರ್ಜಿಯನ್ನು ತಿರಸ್ಕರಿಸಿ ಮಳಲಿ ಮಸೀದಿ ಸಂಬಂಧಿಸಿದ ವ್ಯಾಜ್ಯವನ್ನು ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆ ಮಾಡಬಹುದೆಂದು ತೀರ್ಪು ನೀಡಿದೆ.
ದೇವಾಲಯ ಶೈಲಿ ಪತ್ತೆಯಾಗಿದ್ದರಿಂದ ಜ್ಞಾನವಾಪಿ ಮಾದರಿಯಲ್ಲಿ ಮಳಲಿ ಮಸೀದಿಯಲ್ಲಿಯೂ ಕೋರ್ಟ್ ಕಮಿಷನರ್ ಮೂಲಕ ಸರ್ವೆ ಮಾಡುವಂತೆ ವಿಎ ಚ್ ಪಿ ಪರ ವಕೀಲ ಚಿದಾನಂದ ಕೆದಿಲಾಯ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ವಿಎಚ್ ಪಿಯ ಅರ್ಜಿಯನ್ನು ಕೋರ್ಟ್ ಸ್ವೀಕರಿಸಿ, ಮುಂದಿನ ವಿಚಾರಣೆ ಜ.8 (2023) ರಂದು ನಿಗದಿಯಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ