ಸುರತ್ಕಲ್ ನಲ್ಲಿ ಕಲಬೆರಕೆ ಇಂಧನ ದಂಧೆ ಭೇದಿಸಿದ ಅಧಿಕಾರಿಗಳು!
ಸುರತ್ಕಲ್ ಪೊಲೀಸರು ಮತ್ತು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ಮಂಗಳೂರು ಬಳಿ ಏವಿಯೇಷನ್ ಟರ್ಬೈನ್ ಫ್ಯೂಯಲ್ (ಎಟಿಎಫ್) ಕಲಬೆರಕೆ ದಂಧೆಯನ್ನು ಭೇದಿಸಿ 16,000 ಲೀಟರ್ ಜೆಟ್ ಇಂಧನ ಮತ್ತು ಎರಡು ಟ್ಯಾಂಕರ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
Published: 10th November 2022 09:12 AM | Last Updated: 10th November 2022 04:58 PM | A+A A-

ಇಂಧನ ಕಲಬೆರಕೆ ನಡೆಯುತ್ತಿದ್ದ ಸ್ಥಳದಲ್ಲಿರುವ ಅಧಿಕಾರಿಗಳು.
ಮಂಗಳೂರು: ಸುರತ್ಕಲ್ ಪೊಲೀಸರು ಮತ್ತು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ಮಂಗಳೂರು ಬಳಿ ಏವಿಯೇಷನ್ ಟರ್ಬೈನ್ ಫ್ಯೂಯಲ್ (ಎಟಿಎಫ್) ಕಲಬೆರಕೆ ದಂಧೆಯನ್ನು ಭೇದಿಸಿ 16,000 ಲೀಟರ್ ಜೆಟ್ ಇಂಧನ ಮತ್ತು ಎರಡು ಟ್ಯಾಂಕರ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಬಾಳ ಒಟ್ಟೆಕಾಯರ್ ಜಂಕ್ಷನ್‌ನಲ್ಲಿರುವ ಯಾರ್ಡ್‌ನಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದು, ಈ ವೇಳೆ ಆರೋಪಿಗಳು ಮಂಗಳೂರಿನ ತೈಲ ಸಂಸ್ಕರಣಾಗಾರಗಳಿಂದ ಖರೀದಿಸಿದ ಜೆಟ್ ಇಂಧನಕ್ಕೆ ಸೀಮೆಎಣ್ಣೆ ಬೆರೆಸಿ ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ. ಆರೋಪಿಗಳು ತ್ಯಾಜ್ಯ ಎಣ್ಣೆಯನ್ನು ಹಾಕಿ ಕಲಬೆರಕೆ ಮಾಡುತ್ತಿರುವುದು ಈ ವೇಳೆ ಕಂಡು ಬಂದಿದೆ. ಅಧಿಕಾರಿಗಳು ದಾಳಿ ನಡೆಸುತ್ತಿದ್ದಂತೆಯೇ ಆರೋಪಿಗಳು ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳು ಯಾವ ಉದ್ದೇಶಕ್ಕಾಗಿ ಇಂಧನವನ್ನು ಮಿಶ್ರಣ ಮಾಡಿ ಮಾರಾಟ ಮಾಡುತ್ತಿದ್ದರು ಎಂಬುದು ಇನ್ನೂ ತಿಳಿದುಬಂದಿಲ್ಲ.
ಆರೋಪಿಗಳು ಸುರಂಗದಲ್ಲಿ ಟ್ಯಾಂಕ್ ಗಳನ್ನು ಇರಿಸಿದ್ದರು. ದಾಳಿ ವೇಳೆ ರೂ.40 ಲಕ್ಷ ಮೌಲ್ಯದ ಎರಡು ಟ್ಯಾಂಕರ್, 16 ಸಾವಿರ ಲೀಟರ್ ಎಟಿಎಫ್, ಬ್ಯಾರೆಲ್, ಜನರೇಟರ್ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ನಕಲಿ ಗುರುತಿನ ಚೀಟಿ ಸೃಷ್ಟಿಸಿ ಪಾಸ್‌ಪೋರ್ಟ್ ಪಡೆದಿದ್ದ 9 ಮಂದಿ ಬಂಧನ!
ಆರೋಪಿಗಳು ಪೆಟ್ರೋಲಿಯಂ ಉತ್ಪನ್ನಗಳನ್ನು ಕಲಬೆರಕೆ ಮಾಡಿ ಮಾರಾಟ ಮಾಡುತ್ತಿದ್ದರು ಎಂದು ದಕ್ಷಿಣ ಕನ್ನಡ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಮಾಣಿಕ್ಯ ತಿಳಿಸಿದ್ದಾರೆ.
ನಮಗೆ ತಿಳಿದುಬಂದಿರುವ ಮಾಹಿತಿಗಳ ಪ್ರಕಾರ, ಕಲಬೆರಕೆ ಎಟಿಎಫ್ ಇಂಧನವನ್ನು ವಿಮಾನಗಳಲ್ಲಿ ಹೊರತುಪಡಿಸಿ ಬೇರೆಲ್ಲಿಯೂ ಬಳಸಲಾಗುವುದಿಲ್ಲ. ಆರೋಪಿಗಳು ಅದನ್ನು ಸೀಮೆಎಣ್ಣೆಯಾಗಿ ಮಾರಾಟ ಮಾಡಬಹುದು ಎಂದು ಮಾಹಿತಿ ನೀಡಿದ್ದಾರೆ.
ಸುರಂಗದಲ್ಲಿ ದೊಡ್ಡ ಪ್ರಮಾಣದಲ್ಲಿ ತೈಲವನ್ನು ಸಂಗ್ರಹಿಸಲಾಗಿತ್ತು. ಕೈಗಾರಿಕೆಗಳಲ್ಲಿ ಹೆಚ್ಚಾಗಿ ಬಳಸುವ ಫರ್ನೇಸ್ ಆಯಿಲ್ ಕೂಡ ಕಲಬೆರಕೆ ಮಾಡಲಾಗಿದೆ. ಟ್ಯಾಂಕರ್ ಚಾಲಕರು ಹಾಗೂ ಮಾಲೀಕರು ಈ ದಂಧೆಯಲ್ಲಿ ಯಾವ ರೀತಿಯಲ್ಲಿ ಭಾಗಿಯಾಗಿದ್ದಾರೆಂಬುದನ್ನು ತನಿಖೆ ಮಾಡಲಾಗುತ್ತದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.