ಗೋಮೂತ್ರದಿಂದ ಹುಬ್ಬಳ್ಳಿ ಈದ್ಗಾ ಮೈದಾನ ಶುಚಿಗೊಳಿಸಿ ಕನಕ ಜಯಂತಿ ಆಚರಣೆ, ವ್ಯಾಪಕ ಚರ್ಚೆ!

ಟಿಪ್ಪು ಜಯಂತಿ ಆಚರಣೆಯಾಗಿದ್ದ ಹುಬ್ಬಳ್ಳಿ ಈದ್ಗಾ ಮೈದಾನವನ್ನು ಹಿಂದೂಪರ ಸಂಘಟನೆಗಳು ಗೋಮೂತ್ರದಿಂದ ಶುಚಿಗೊಳಿಸಿ ಬಳಿಕ ಕನಕದಾಸ ಜಯಂತಿ ಆಚರಣೆ ಮಾಡಲಾಗಿದೆ.
ಕನಕದಾಸ ಜಯಂತಿ ಆಚರಣೆ
ಕನಕದಾಸ ಜಯಂತಿ ಆಚರಣೆ

ಹುಬ್ಬಳ್ಳಿ: ಟಿಪ್ಪು ಜಯಂತಿ ಆಚರಣೆಯಾಗಿದ್ದ ಹುಬ್ಬಳ್ಳಿ ಈದ್ಗಾ ಮೈದಾನವನ್ನು ಹಿಂದೂಪರ ಸಂಘಟನೆಗಳು ಗೋಮೂತ್ರದಿಂದ ಶುಚಿಗೊಳಿಸಿ ಬಳಿಕ ಕನಕದಾಸ ಜಯಂತಿ ಆಚರಣೆ ಮಾಡಲಾಗಿದೆ.

ಗೋಮೂತ್ರದಿಂದ ಈದ್ಗಾ ಮೈದಾನ (Hubbli Idgah Maidan) ಶುಚಿಗೊಳಿಸಿದ ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ (Pramod Muthalik) ಮತ್ತು ಕಾರ್ಯಕರ್ತರು ಕನಕದಾಸ ಜಯಂತಿ (Kanakadasa Jayanti) ಆಚರಣೆ ಮಾಡಿದರು. ನಿನ್ನೆ ಇದೇ ಮೈದಾನದಲ್ಲಿ ಎಐಎಂಐಎಂ ಕಾರ್ಯಕರ್ತರು ಟಿಪ್ಪು ಜಯಂತಿ (Tipu Jayanti)ಯನ್ನು ಆಚರಿಸಿದ್ದರು. ಇದೇ ಕಾರಣಕ್ಕೆ ಗೋಮುತ್ರ ಸಿಂಪಡಿಸುವ ಮೂಲಕ ಈದ್ಗಾ ಮೈದಾನ ಶುಚಿಗೊಳಿಸಲಾಯಿತು. ಅಶುದ್ಧವಾದ ಸ್ಥಳವನ್ನು ಗೋಮೂತ್ರ ಸಿಂಪಡಿಸಿ ಶುಚಿಗೊಳಿಸುವ ಹಿಂದೂ ಧರ್ಮದ ಸಂಪ್ರದಾಯವಾಗಿದೆ. ಟಿಪ್ಪು ಜಯಂತಿ ಆಚರಣೆ ಮಾಡಿದ ಹಿನ್ನಲೆ ಮೈದಾನ ಅಪವಿತ್ರವಾಗಿದೆ ಎಂದ ಪ್ರಮೋದ್ ಮುತಾಲಿಕ್, ಕಾರ್ಯಕರ್ತರೊಂದಿಗೆ ಸೇರಿಕೊಂಡು ಕನಕ ಜಯಂತಿ ಆಚರಣೆಗೂ ಮುನ್ನ ಈದ್ಗಾ ಮೈದಾನ ಶುಚಿಗೊಳಿಸಿದರು. ಇದೇ ವೇಳೆ ಕಾರ್ಯಕರ್ತರು ಜೈ ಶ್ರೀರಾಮ್ ಘೋಷಣೆ ಕೂಗಿದರು.

ಟಿಪ್ಪು ಜಯಂತಿ ಆಚರಣೆಗೆ ಅನುಮತಿ ನೀಡಿದ್ದು ದೊಡ್ಡ ತಪ್ಪು, ಟಿಪ್ಪು ವಿಚಾರದಲ್ಲಿ ಬಿಜೆಪಿ ದ್ವಂದ್ವ ನಿಲುವು ಅನುಸರಿಸಲಾಗುತ್ತಿದೆ. ಬಿಜೆಪಿ ದ್ವಂದ್ವ ರಾಜಕಾರಣ ಮಾಡುತ್ತಿದೆ. ಅಲ್ಲದೆ, ಟಿಪ್ಪು ಒಬ್ಬ ಮತಾಂಧ, ಕನ್ನಡ ದ್ರೋಹಿ, ಸಾವಿರಾರು ದೇವಸ್ಥಾನ ಭಗ್ನ ಮಾಡಿದ ವ್ಯಕ್ತಿ. ಇಂತಹ ವ್ಯಕ್ತಿಯ ಜಯಂತಿ ಆಚರಣೆ ಮಾಡಿರುವುದು ಅಕ್ಷಮ್ಯ ಅಪರಾಧ. ಹೀಗಾಗಿ ನಾವು ಮೈದಾನವನ್ನು ಶುದ್ಧೀಕರಣ ಮಾಡಿ ಕನಕದಾಸ ಜಯಂತಿ ಆಚರಣೆ ಮಾಡಿದ್ದೇವೆ ಎಂದರು.

ಕನಕದಾಸ ಸಮಾನತೆಯನ್ನ ಹೇಳಿದ ವಿಚಾರ ಇಂದಿಗೂ ಪ್ರಸ್ತುತ. ಇವತ್ತಿಗೂ ಜಾತಿ ಜಾತಿಗಳ ನಡುವೆ ಮತ್ತೆ ಒಡಕಿದೆ. ಎಲ್ಲರೂ ಕನಕದಾಸರ ವಿಚಾರವನ್ನು ಅನುಸರಿಸಬೇಕು, ಹೀಗಾಗಿ ಕನಕದಾಸ ಜಯಂತಿ ಆಚರಣೆ ಮಾಡಿದ್ದೇವೆ. ಕರ್ನಾಟಕದಲ್ಲಿ ಟಿಪ್ಪು ಜಯಂತಿ ಆಚರಣೆ ವಿಫಲವಾಗಿದೆ. ಹುಬ್ಬಳ್ಳಿಯಲ್ಲಿಯೇ ಟಿಪ್ಪು ಜಯಂತಿ ಆಚರಣೆಯಲ್ಲಿ ಒಡಕಿದೆ. ಹೀಗಾಗಿ ಅದು ವಿಫಲವಾಗಿದೆ. ಮೈಸೂರಲ್ಲಿ ಟಿಪ್ಪು ಮೂರ್ತಿ ಪ್ರತಿಷ್ಠಾಪನೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಟಿಪ್ಪು ಕರ್ನಾಟಕದ ಕಳಂಕ. ಅಲ್ಲಿ‌ ಮೂರ್ತಿ ಕೂರಿಸಿದರೆ ನಾವ ಒಡೆದು ಹಾಕುತ್ತೇವೆ. 100 ಅಡಿ ಮೂರ್ತಿ ಕೂರಿಸಲು ನಮ್ಮ ವಿರೋಧ ಇದೆ. ಇಂತಹ ಕೆಟ್ಟ ಕೆಲಸ ತನ್ವೀರ್ ಸೇಠ್ ಮಾಡಬಾರದು. ಟಿಪ್ಪು ಬದಲಾಗಿ ಉತ್ತಮ ಮುಸ್ಲಿಂ‌ ಹೋರಾಟಗಾರರ ಮೂರ್ತಿ ಕೂರಿಸಿ. ಟಿಪ್ಪು ಮೂರ್ತಿ ಕೂರಿಸಿದರೆ ನಾವು ಬಾಬ್ರಿ ಮಸೀದಿ ಒಡೆದು ಹಾಕಿದ ಮಾದರಿಯಲ್ಲಿ ಒಡೆದು ಹಾಕುತ್ತೇವೆ ಎಂದರು.

ಟಿಪ್ಪು ಜಯಂತಿ ಆಚರಣೆಗೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಹಿಂದೂ ಸಂಘಟನೆಗಳು ಕನಕ ಜಯಂತಿ ಆಚರಣೆಗೆ ಅನುಮತಿ ನೀಡುವಂತೆ ಒತ್ತಾಯಿಸಿದ್ದವು. ಬಳಿಕ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಹಿಂದೂಪರ ಸಂಘಟನೆಗಳಿಗೂ ಕನಕದಾಸ ಜಯಂತಿ ಆಚರಣೆಗೆ ಷರತ್ತುಬದ್ಧ ಅನುಮತಿ ನೀಡಿತ್ತು.  ಕನಕದಾಸ ಜಯಂತಿ ಆಚರಣೆಗೆ ಮೂರು ಗಂಟೆಗಳ ಕಾಲ ಅನುಮತಿ ನೀಡಲಾಯಿತು. ಅದರಂತೆ ಇಂದು ಶ್ರೀರಾಮಸೇನೆ ಮತ್ತು ಇತರೆ ಹಿಂದೂಪರ ಸಂಘಟನೆಗಳು ಒಗ್ಗೂಡಿ ಗೋಮೂತ್ರದಿಂದ ಮೈದಾನ ಶುದ್ಧಿಗೊಳಿಸಿ ಕನಕದಾಯ ಜಯಂತಿ ಆಚರಣೆ ಮಾಡಿವೆ.  
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com