ಬಂಡೀಪುರ ಕರ್ನಾಟಕದ ಅತ್ಯುತ್ತಮ ಹುಲಿ ಸಂರಕ್ಷಿತ ಪ್ರದೇಶ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವು ಮತ್ತೊಮ್ಮೆ ಅತ್ಯುತ್ತಮ ಹುಲಿ ಸಂರಕ್ಷಿತ ವಲಯ ಎಂಬ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವು ಮತ್ತೊಮ್ಮೆ ಅತ್ಯುತ್ತಮ ಹುಲಿ ಸಂರಕ್ಷಿತ ವಲಯ ಎಂಬ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿದೆ.

 ಈ ಬಾರಿಯ ಭಾರತದ ಹುಲಿ ಸಂರಕ್ಷಿತ ಪ್ರದೇಶಗಳ ನಿರ್ವಹಣೆ ಕುರಿತು ನಡೆಸಿರುವ ಮ್ಯಾನೇಜ್‌ಮೆಂಟ್ ಎಫೆಕ್ಟಿವ್‌ನೆಸ್ ಎವಲ್ಯೂಷನ್ ನಲ್ಲಿ ಬಂಡೀಪುರ ಉನ್ನತ ಅಂಕಗಳನ್ನು ಗಳಿಸಿದೆ.

ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಮತ್ತು ಭಾರತೀಯ ವನ್ಯಜೀವಿ ಸಂಸ್ಥೆ, ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಸ್ವಾಯತ್ತ ಸಂಸ್ಥೆಯಿಂದ ಈ ಮೌಲ್ಯಮಾಪನವನ್ನು ಮಾಡಲಾಗಿದೆ.

ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಮತ್ತು ಭಾರತೀಯ ವನ್ಯಜೀವಿ ಸಂಸ್ಥೆಯ ತಜ್ಞರ ತಂಡವು 4 ವರ್ಷಗಳಿಗೊಮ್ಮೆ ನಿರ್ವಹಣೆಯ ಕುರಿತು ಮೌಲ್ಯಮಾಪನವನ್ನು ಮಾಡುತ್ತದೆ. ಮೌಲ್ಯಮಾಪನದಲ್ಲಿ ಹುಲಿ ಸಂರಕ್ಷಣೆ ನಿರ್ವಹಣೆ, ಸಮುದಾಯದ ಭಾಗವಹಿಸುವಿಕೆ, ಪ್ರವಾಸೋದ್ಯಮ, ರಕ್ಷಣೆ, ಆವಾಸಸ್ಥಾನಗಳ ನಿರ್ವಹಣೆ, ಹುಲಿಗಳ ಸಂಖ್ಯೆ, ವೈದ್ಯಕೀಯ ಸೌಲಭ್ಯಗಳು, ಬುಡಕಟ್ಟು ಸಮುದಾಯಗಳ ಜೊತೆಗಿನ ಸಂಬಂಧ ಅವರ ಸ್ಥಳಗಳು ಸೇರಿದಂತೆ ಅನೇಕ ಅಂಶಗಳನ್ನು ತೆಗೆದುಕೊಳ್ಳಲಾಗುತ್ತದೆ.

ವರದಿ ನೀಡಲು 4 ಸದಸ್ಯರ ತಜ್ಞರ ತಂಡವು ಒಂದು ತಿಂಗಳ ಹಿಂದೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಭೇಟಿ ನೀಡಿದ್ದು, 4 ದಿನ ಅಲ್ಲಿಯೇ ತಂಗಿದ್ದು ಸಮೀಕ್ಷೆ ನಡೆಸಿದೆ. ಇದರಲ್ಲಿ ಬಂಡೀಪುರ ಹುಲಿ ಸಂರಕ್ಷಿತ ವಲಯ ಶೇ.95.5ರಷ್ಟು ಅಂಕಗಳನ್ನು ಪಡೆದಿದೆ. ಇದು ರಾಜ್ಯದಲ್ಲಿಯೇ ಅತ್ಯಧಿಕವಾಗಿದೆ.

2018ರ ಜನಗಣತಿಯ ಪ್ರಕಾರ ಕರ್ನಾಟಕದಲ್ಲಿರುವ 524 ಹುಲಿಗಳ ಪೈಕಿ, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವೊಂದರಲ್ಲೇ 173 ಹುಲಿಗಳಿದ್ದರೆ, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ 164 ಹುಲಿಗಳಿವೆ.

ವಿಜ್ಞಾನಿಗಳು, ನಿವೃತ್ತ ಐಎಫ್‌ಎಸ್ ಅಧಿಕಾರಿಗಳು ಮತ್ತು ವನ್ಯಜೀವಿ ತಜ್ಞರ ತಂಡವು ಪ್ರತಿ 4 ವರ್ಷಗಳಿಗೊಮ್ಮೆ ಮೌಲ್ಯಮಾಪನ ನಡೆಸುತ್ತದೆ. ಹುಲಿ ಸಂರಕ್ಷಿತ ಪ್ರದೇಶದ ನಿರ್ವಹಣೆಯ ಆಧಾರದ ಮೇಲೆ ಅಂಕಗಳನ್ನು ನೀಡಲಾಗುತ್ತದೆ.

ದೇಶದ ಇತರ ಹುಲಿ ಸಂರಕ್ಷಿತ ಪ್ರದೇಶಗಳು ಶೇ.92 ರಿಂದ ಶೇ.94 ಗಳಿಸಿವೆ. ನಮಗೆ ಸಿಕ್ಕಿರುವ ಅಂಕಗಳ ಆಧಾರದ ಮೇಲೆ, ಬಂಡೀಪುರವನ್ನು ದೇಶದಲ್ಲಿ ಮೊದಲ ಅಥವಾ ಎರಡನೆಯ ಉತ್ತಮ ಹುಲಿ ಸಂರಕ್ಷಿತ ಪ್ರದೇಶವನ್ನಾಗಿ ಘೋಷಿಸಲಾಗುವುದು ಎಂಬ ವಿಶ್ವಾಸವಿದೆ. ಮೀಸಲು ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಇಲಾಖೆ ಕೈಗೆತ್ತಿಕೊಂಡಿದ್ದರಿಂದ ಇದು ಸಾಧ್ಯವಾಗಿದೆ ಎಂದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ರಮೇಶ್ ಕುಮಾರ್ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com