ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

'ಕ್ಯಾನ್ಸರ್ ಪ್ರಕರಣಗಳ ಹೆಚ್ಚಳ ನಿಗ್ರಹಕ್ಕೆ ತಂಬಾಕು ಸೇವನೆಯ ಉತ್ಸಾಹಭಂಗ ಅತ್ಯಗತ್ಯ'

ಭಾರತದಲ್ಲಿನ ಎಲ್ಲಾ ಕ್ಯಾನ್ಸರ್‌ಗಳ ಪೈಕಿ ಶೇಕಡ 50 ರಷ್ಟಕ್ಕೆ  ತಂಬಾಕು ಕಾರಣವಾಗಿದ್ದು, ಹೆಚ್ಚುತ್ತಿರುವ ಕ್ಯಾನ್ಸರ್ ಪ್ರಕರಣಗಳನ್ನು ತಡೆಯಲು ತಂಬಾಕು ಸೇವನೆಯ ಉತ್ಸಾಹಭಂಗಗೊಳಿಸಬೇಕು ಎಂದು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಪ್ರಾಧ್ಯಾಪಕರಾದ ಪುರುಷೋತ್ತಮ್ ಚವಾಣ್ ಹೇಳಿದ್ದಾರೆ.

ಬೆಂಗಳೂರು: ಭಾರತದಲ್ಲಿನ ಎಲ್ಲಾ ಕ್ಯಾನ್ಸರ್‌ಗಳ ಪೈಕಿ ಶೇಕಡ 50 ರಷ್ಟಕ್ಕೆ  ತಂಬಾಕು ಕಾರಣವಾಗಿದ್ದು, ಹೆಚ್ಚುತ್ತಿರುವ ಕ್ಯಾನ್ಸರ್ ಪ್ರಕರಣಗಳನ್ನು ತಡೆಯಲು ತಂಬಾಕು ಸೇವನೆಯ ಉತ್ಸಾಹಭಂಗಗೊಳಿಸಬೇಕು ಎಂದು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಪ್ರಾಧ್ಯಾಪಕರಾದ ಪುರುಷೋತ್ತಮ್ ಚವಾಣ್ ಹೇಳಿದ್ದಾರೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣದ ಸಂಸದೀಯ ಸ್ಥಾಯಿ ಸಮಿತಿಯು “ಕ್ಯಾನ್ಸರ್ ಆರೈಕೆಯ ಯೋಜನೆ ಮತ್ತು ನಿರ್ವಹಣೆ: ತಡೆಗಟ್ಟುವಿಕೆ, ರೋಗನಿರ್ಣಯ, ಸಂಶೋಧನೆ ಮತ್ತು ಕ್ಯಾನ್ಸರ್ ಚಿಕಿತ್ಸೆಯ ಕೈಗೆಟುಕುವಿಕೆ” ಕುರಿತ ತನ್ನ 139ನೇ ವರದಿಯನ್ನು 12ನೇ ಸೆಪ್ಟೆಂಬರ್ 2022 ರಂದು ರಾಜ್ಯಸಭೆಯ ಅಧ್ಯಕ್ಷರಿಗೆ ಸಲ್ಲಿಸಿತು. ಕ್ಯಾನ್ಸರ್‌ಗೆ ತಂಬಾಕು ಪ್ರಮುಖ ಅಪಾಯಕಾರಿ ಅಂಶವಾಗಿದೆ ಎಂದು ಅಭಿಪ್ರಾಯಪಟ್ಟಿರುವ ಸಮಿತಿಯು, ಭಾರತದಲ್ಲಿನ ಎಲ್ಲಾ ಕ್ಯಾನ್ಸರ್‌ಗಳ ಪೈಕಿ ಶೇಕಡ 50 ರಷ್ಟಕ್ಕೆ ತಂಬಾಕು ಕಾರಣ ಎಂದು ಹೇಳಿದೆ. ಭಾರತದಲ್ಲಿ ಹೆಚ್ಚುತ್ತಿರುವ ಕ್ಯಾನ್ಸರ್ ಪ್ರಕರಣಗಳನ್ನು ತಡೆಯಲು ತಂಬಾಕು ಸೇವನೆಯ ಉತ್ಸಾಹಭಂಗಗೊಳಿಸಬೇಕು ಎಂದು ಸಮಿತಿ ಒತ್ತಾಯಿಸಿದೆ.

ಇದೇ ಫೆಬ್ರವರಿಯಲ್ಲಿ ಲೋಕಸಭೆಗೆ ಮಾಹಿತಿ ನೀಡಿದ ಕೇಂದ್ರ ಸರ್ಕಾರ, 2018-2020ರ ನಡುವೆ 40 ಲಕ್ಷಕ್ಕೂ ಹೆಚ್ಚು ಕ್ಯಾನ್ಸರ್‌ ಪ್ರಕರಣಗಳು ವರದಿಯಾಗಿದ್ದು ಅದರಲ್ಲಿ 22.54 ಲಕ್ಷ ಜನರು ಕ್ಯಾನ್ಸರ್‌ನಿಂದ ಸಾವನ್ನಪ್ಪಿದ್ದಾರೆ. ಲ್ಯಾನ್ಸೆಟ್‌ ಹೊರತಂದಿರುವ ಅಧ್ಯಯನ ವರದಿಯೊಂದರ ಪ್ರಕಾರ, ಕ್ಯಾನ್ಸರ್ ಎರಡನೇ ಅತಿದೊಡ್ಡ ಕೊಲೆಪಾತಕ ರೋಗವಾಗಿದ್ದು ಮೊದಲ ಸ್ಥಾನವನ್ನು ಹೃದ್ರೋಗಗಳು ಆಕ್ರಮಿಸಿಕೊಂಡಿವೆ. ತಜ್ಞರ ಪ್ರಕಾರ, ಇವುಗಳಲ್ಲಿ 70 ಕ್ಯಾನ್ಸರ್‌ಗಳನ್ನು ತಡೆಗಟ್ಟಬಹುದಾಗಿದ್ದು ಅವುಗಳಲ್ಲಿ ಶೇ. 40 ರಷ್ಟು ತಂಬಾಕು ಸಂಬಂಧಿಯಾಗಿದ್ದರೆ, ಶೇ. 20 ರಷ್ಟು ಸೋಂಕು ಮತ್ತು ಶೇ. 10 ರಷ್ಟು ಇತರೆ ಕಾರಣಗಳಿಂದ ಉಂಟಾಗುತ್ತವೆ. ಸುಮಾರು 14 ರೀತಿಯ ಕ್ಯಾನ್ಸರ್‌ಗಳಿಗೆ ತಂಬಾಕು ಬಳಕೆ ಕಾರಣವಾಗುವ ಹೇರಳ ಸಾಧ್ಯತೆಯಿದೆ ಎಂದು ಲ್ಯಾನ್ಸೆಟ್ ವರದಿ ಹೇಳುತ್ತದೆ. 

ಅಲ್ಲದೇ, ತಂಬಾಕು ತಡೆಗಟ್ಟಬಹುದಾದ ಅಪಾಯಕಾರಿ ಅಂಶವಾಗಿದ್ದು, ಕ್ಯಾನ್ಸರ್ ಗೆ ತುತ್ತಾದ ಬಹುತೇಕರು ಸಕಾಲದಲ್ಲಿ ತಪಾಸಣೆಗೆ ಒಳಪಡುತ್ತಿಲ್ಲ. ಆದ್ದರಿಂದ, ರಾಷ್ಟ್ರೀಯ ಕ್ಯಾನ್ಸರ್ ದಿನದ ಆಚರಣೆ ಮೂಲಕ ಕ್ಯಾನ್ಸರ್ ನ ತಡೆಗಟ್ಟುವಿಕೆ ಮತ್ತು ಆರಂಭದಲ್ಲೇ ಪತ್ತೆಹಚ್ಚುವಿಕೆಯ ಕುರಿತು ಜಾಗೃತಿ ಮೂಡಿಸಲು ಹೆಚ್ಚು ಒತ್ತು ನೀಡಲಾಗುತ್ತಿದೆ. ತರ್ಕಬದ್ಧ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಇನ್ನೂ ಪಕ್ಕಾಗದ ಹದಿಹರೆಯದಲ್ಲಿ ತಂಬಾಕು ಬಳಕೆಯನ್ನು ಪ್ರಾರಂಭಿಸಲಾಗುತ್ತದೆ ಎಂಬ ಅಂಶವು ಸಮಿತಿಗೆ ಮನವರಿಕೆಯಾಗಿದೆ. ತಂಬಾಕು ಉತ್ಪನ್ನಗಳ ಬಳಕೆಯನ್ನು ಸೆಲೆಬ್ರಿಟಿಗಳು ತೆರೆಯ ಮೇಲೆ ಚಿತ್ತಾಕರ್ಷಕಗೊಳಿಸುವುದು ಮತ್ತು ಸುಲಭವಾಗಿ ಲಭ್ಯವಿರುವ ತಂಬಾಕು ಉತ್ಪನ್ನಗಳು ಯುವಜನರು ಅವುಗಳನ್ನು ಬಳಸಲು ಪ್ರೇರೇಪಿಸುತ್ತವೆ. ಭಾರತದಲ್ಲಿ ತಂಬಾಕು ಉತ್ಪನ್ನಗಳ ಬೆಲೆ ತೀರಾ ಕಡಿಮೆ ಎಂದು ಗಮನಿಸಿರುವ ಸಮಿತಿಯು, ಎಲ್ಲಾ ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆಯನ್ನು ಹೆಚ್ಚಿಸುವಂತೆ ಶಿಫಾರಸು ಮಾಡಿದೆ. ಇದರಿಂದ ತಂಬಾಕು ಉತ್ಪನ್ನಗಳ ಬಳಕೆಯನ್ನು ಸುಲಭವಾಗಿ ಪ್ರಾರಂಭಿಸುವುದನ್ನು ತಡೆಯಬಹುದು ಮಾತ್ರವಲ್ಲ, ತೆರಿಗೆಯಾಗಿ ಉತ್ಪತ್ತಿಯಾಗುವ ಹೆಚ್ಚುವರಿ ಆದಾಯವನ್ನು ಮುಂಜಾಗ್ರತಾ ಕಾರ್ಯಕ್ರಮಗಳಿಗೆ ಬಳಸಬಹುದು ಎಂದು ಸಮಿತಿ ಹೇಳಿದೆ.

ಸುಸ್ಥಿರ ಅಭಿವೃದ್ಧಿ ಗುರಿಯನ್ನು (SDG) ಸಾಧಿಸುವ ನಿಟ್ಟಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ತಂಬಾಕು ಉತ್ಪನ್ನಗಳ ಮಾರಾಟವನ್ನು ತಡೆಯಲು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದೂ ಸಮಿತಿ ವರದಿಯಲ್ಲಿ ತಿಳಿಸಿದೆ. ವಿಮಾನ ನಿಲ್ದಾಣ, ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳಲ್ಲಿ ನಿರ್ದಿಷ್ಟ ಧೂಮಪಾನ ಪ್ರದೇಶವನ್ನು ರದ್ದುಗೊಳಿಸಲು ಮತ್ತು ಸಂಘ ಸಂಸ್ಥೆಗಳಲ್ಲಿ ಧೂಮಪಾನ ಮುಕ್ತ ನೀತಿಯನ್ನು ಪ್ರೋತ್ಸಾಹಿಸಲು ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ. ಅಲ್ಲದೆ, ಸಿಗರೇಟ್ ಗಳ ಬಿಡಿ ಮಾರಾಟವನ್ನು ನಿಷೇಧಿಸಲು ಮತ್ತು ಅದನ್ನು ಉಲ್ಲಂಘಿಸಿದವರಿಗೆ ಕಠಿಣ ದಂಡವನ್ನು ವಿಧಿಸಲು ಶಿಫಾರಸು ಮಾಡಿದೆ. ಈ ಎಲ್ಲಾ ಪ್ರಮುಖ ಶಿಫಾರಸುಗಳು ಕೋಟ್ಪಾ ತಿದ್ದುಪಡಿ ಮಸೂದೆಯ ಭಾಗವಾಗಿದ್ದು ಈ’ಮಸೂದೆಯನ್ನು ಶೀಘ್ರವಾಗಿ ಅಂಗೀಕರಿಸುವಂತೆ ನಾವು ಕೇಂದ್ರ ಆರೋಗ್ಯ ಸಚಿವ ಡಾ. ಮನ್ಸುಖ್ ಮಾಂಡವಿಯಾ ಮತ್ತು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರನ್ನು ಒತ್ತಾಯಿಸುತ್ತೇವೆ.

ಕೊನೆಗೂ ಸಮಿತಿಯು ತಂಬಾಕು ನಿಯಂತ್ರಣದಲ್ಲಿನ ಪ್ರಮುಖ ಸಮಸ್ಯೆಯೊಂದನ್ನು ಗಮನಿಸಿದ್ದು, ತಂಬಾಕು ಬಳಕೆಯ ಸುಮಾರು ಶೇಕಡ 80 ರಷ್ಟು ಜಗಿಯುವ ರೂಪದಲ್ಲಿದೆ. ಗುಟ್ಕಾ ಮಾರಾಟವನ್ನು ನಿಷೇಧಿಸಲು ಮತ್ತು ತಂಬಾಕು ಉದ್ಯಮದ ಆಕ್ರಮಣಕಾರಿ ಮಾರ್ಕೆಟಿಂಗ್ ತಂತ್ರಗಳನ್ನು ಎದುರಿಸಲು ಜಗಿಯುವ ತಂಬಾಕು ಉತ್ಪನ್ನಗಳು ಮತ್ತು ಪಾನ್ ಮಸಾಲಗಳ ಜಾಹೀರಾತುಗಳನ್ನು ನಿಷೇಧಿಸುವುದು, ಮುಂತಾದ ಕ್ರಮಗಳನ್ನು ಸಮಿತಿಯು ಶಿಫಾರಸು ಮಾಡಿದೆ. ರಾಷ್ಟ್ರೀಯ ಆರೋಗ್ಯ ನೀತಿ 2017ರ ಗುರಿಯಂತೆ 2025ರ ವೇಳೆಗೆ ತಂಬಾಕು ಬಳಕೆಯನ್ನು ಶೇಕಡ 30 ರಷ್ಟು ಕಡಿಮೆ ಮಾಡುವ ಬದ್ಧತೆಯನ್ನು ಉಳಿಸಿಕೊಳ್ಳಲು ಮೇಲ್ಕಂಡ ಕ್ರಮಗಳು ಸರ್ಕಾರಕ್ಕೆ ಸಹಾಯ ಮಾಡುತ್ತವೆ ಎಂದು ಸಮಿತಿಯು ತೀರ್ಮಾನಿಸಿದೆ. ಪ್ರಸ್ತುತ ಇರುವ ರಾಜಕೀಯ ಬದ್ಧತೆಯನ್ನು ಹೀಗೆಯೇ ಮುಂದುವರಿಸಿದರೆ, ಭಾರತವು ಶೇಕಡ 30 ರಷ್ಟು ಗುರಿಯನ್ನು ಸಾಧಿಸುವ ಸಾಧ್ಯತೆಯಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿಯೊಂದು ಹೇಳಿದೆ. ಆದರೆ, ಈ ಗುರಿಯನ್ನು ಸಾಧಿಸಲು  ಸಾಂಕ್ರಾಮಿಕವಲ್ಲದ ರೋಗಗಳು ಸವಾಲಾಗಿ ಪರಿಣಮಿಸಬಹುದು.

ಸಾಂಕ್ರಾಮಿಕವಲ್ಲದ ರೋಗಗಳು ಇದೇ ವೇಗದಲ್ಲಿ ಮುಂದುವರಿದರೆ, 2030ರ ವೇಳೆಗೆ ಭಾರತಕ್ಕೆ 126 ಟ್ರಿಲಿಯನ್ ರೂಪಾಯಿಗಳ (ಅಂದಾಜು 2.3 ಟ್ರಿಲಿಯನ್ ಯುಎಸ್ ಡಾಲರ್) ವೆಚ್ಚವಾಗಲಿದೆ ಎಂದು ಹಾರ್ವರ್ಡ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ನ 2012ರ ವರದಿಯೊಂದು ಎಚ್ಚರಿಸಿದೆ. ಇದು ಭಾರತದ ವಾರ್ಷಿಕ ಒಟ್ಟು ಆದಾಯದ ಒಂದೂವರೆ ಪಟ್ಟು ಹೆಚ್ಚಾಗಿದ್ದು, ದೇಶದ ಒಟ್ಟು ವಾರ್ಷಿಕ ಆರೋಗ್ಯ ವೆಚ್ಚಕ್ಕಿಂತ 35 ಪಟ್ಟು ಜಾಸ್ತಿಯಾಗಿದೆ. ಸಾಂಕ್ರಾಮಿಕವಲ್ಲದ ರೋಗಗಳು ಹರಡದಂತೆ ಇರುವ ತಡೆಗಟ್ಟಬಹುದಾದ ಅಪಾಯಕಾರಿ ಅಂಶಗಳ ಪೈಕಿ ತಂಬಾಕು ಬಳಕೆ ಪ್ರಮುಖ ಎಂದು ಗುರುತಿಸಲಾಗಿದೆ.

ಭಾರತದ ಪ್ರಸ್ತುತ ಜನಸಂಖ್ಯೆಯಲ್ಲಿ ಶೇಕಡ 50 ಕ್ಕಿಂತ ಹೆಚ್ಚು ಜನ 25 ವರ್ಷದೊಳಗಿನವರಾಗಿದ್ದು, ಶೇಕಡ 65 ಕ್ಕಿಂತ ಹೆಚ್ಚು ಜನ 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ಸಾಂಕ್ರಾಮಿಕವಲ್ಲದ ರೋಗಗಳಿಗೆ ಬಲಿಯಾಗುತ್ತಿರುವುದು ಇದೇ ವರ್ಗದವರಾಗಿದ್ದು, ತಂಬಾಕು ಕಂಪನಿಗಳ ಗುರಿಯಾಗಿರುವುದು ಇವರೇ. ಅಲ್ಲದೆ, ಈ ವಯೋಮಾನದವರಲ್ಲಿ ಬೆಳೆಯುತ್ತಿರುವ ಮಾದಕ ವ್ಯಸನವು ತೀವ್ರ ಕಳವಳಕಾರಿಯಾಗಿದ್ದು, ಮಾದಕ ವಸ್ತುಗಳ ಸೇವನೆಗೆ ತಂಬಾಕು ಬಳಕೆಯೇ  ಹೆಬ್ಬಾಗಿಲು ಎಂದು ಗುರುತಿಸಲಾಗಿದೆ. ಸಾಂಕ್ರಾಮಿಕವಲ್ಲದ ರೋಗಗಳಿಂದ ಉಂಟಾಗುವ ದೊಡ್ಡ ಹೊರೆಯನ್ನು ಕಡಿಮೆ ಮಾಡಲು ಮತ್ತು ತಂಬಾಕು ಬಳಕೆಯನ್ನು ಪ್ರಾರಂಭಿಸದಂತೆ ಯುವಜನರನ್ನು ತಡೆಯಲು ಕೋಟ್ಪಾ  ಕಾಯ್ದೆಯನ್ನು ಬಲಪಡಿಸುವುದು ಮತ್ತು ತಂಬಾಕಿನ ಮೇಲಿನ ತೆರಿಗೆಯನ್ನು ಹೆಚ್ಚಿಸುವುದು ಭಾರತದ ಪ್ರಮುಖ ಆದ್ಯತೆಯಾಗಬೇಕು.
- ಪುರುಷೋತ್ತಮ್ ಚವಾಣ್, ಪ್ರಾಧ್ಯಾಪಕರು, 
ಶಿರ ಮತ್ತು ಕುತ್ತಿಗೆ ಗಂಥಿ ವಿಭಾಗ, 
ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ

Related Stories

No stories found.

Advertisement

X
Kannada Prabha
www.kannadaprabha.com