ಕೋಟ್ಪಾ ಕಾಯ್ದೆಗೆ ತಿದ್ದುಪಡಿಗೆ ಒತ್ತಾಯಿಸಿ ಕ್ಯಾನ್ಸರ್ ಜಯಿಸಿದವರಿಂದ ಕೇಂದ್ರ, ರಾಜ್ಯ ಸರ್ಕಾರಕ್ಕೆ ಪತ್ರ

ಕೋವಿಡ್ ಮೂರನೇ ಮತ್ತು ಭವಿಷ್ಯದ ಅಲೆಗಳ ವಿರುದ್ಧ ಹೋರಾಡಲು ಕೋಟ್ಪಾ ಕಾಯ್ದೆಗೆ ತಿದ್ದುಪಡಿ ತಂದು ತಂಬಾಕು ಮಾರಾಟ, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮತ್ತು ಉಗುಳುವಿಕೆಯನ್ನು ನಿಷೇಧಿಸಬೇಕೆಂದು ಒತ್ತಾಯಿಸಿ ಕ್ಯಾನ್ಸರ್ ಜಯಿಸಿದವರು ಕೇಂದ್ರ, ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಧೂಮಪಾನ (ಸಂಗ್ರಹ ಚಿತ್ರ)
ಧೂಮಪಾನ (ಸಂಗ್ರಹ ಚಿತ್ರ)

ಬೆಂಗಳೂರು: ಕೋವಿಡ್ ಮೂರನೇ ಮತ್ತು ಭವಿಷ್ಯದ ಅಲೆಗಳ ವಿರುದ್ಧ ಹೋರಾಡಲು ಕೋಟ್ಪಾ ಕಾಯ್ದೆಗೆ ತಿದ್ದುಪಡಿ ತಂದು ತಂಬಾಕು ಮಾರಾಟ, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮತ್ತು ಉಗುಳುವಿಕೆಯನ್ನು ನಿಷೇಧಿಸಬೇಕೆಂದು ಒತ್ತಾಯಿಸಿ ಕ್ಯಾನ್ಸರ್ ಜಯಿಸಿದವರು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್, ಕರ್ನಾಟಕದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹಾಗು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಕೆ. ಸುಧಾಕರ್ ಅವರಿಗೆ ಪತ್ರ ಬರೆದಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಪ್ರಕಾರ ಧೂಮಪಾನಿಗಳು ಕೊರೊನ ವೈರಸ್ ಗೆ ತುತ್ತಾದರೆ ತೀವ್ರ ತೊಂದರೆ ಅನುಭವಿಸಬೇಕಾಗುತ್ತದೆ ಎಂಬ ಅಂಶವನ್ನು ಗಮನಕ್ಕೆ ತಂದಿರುವ ಕ್ಯಾನ್ಸರ್ ಗೆದ್ದು ಬಂದವರು, ಜೂನ್ 22, 2021 ರಂದು ಬರೆದಿರುವ ಪತ್ರದಲ್ಲಿ ಎಲ್ಲ ಸಾರ್ವಜನಿಕ ಧೂಮಪಾನ  ಪ್ರದೇಶಗಳನ್ನು ನಿಷೇಧಿಸಬೇಕು ಮತ್ತು ಸಾರ್ವಜನಿಕ ಸ್ಥಳದಲ್ಲಿ ಉಗುಳುವಿಕೆ ಮೇಲಿರುವ ನಿಷೇಧವನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸಿದ್ದಾರೆ. 

"ಕೊರೊನದ ಎರಡನೇ ಅಲೆ ದೇಶ ಮತ್ತು ರಾಜ್ಯದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದ್ದು, ಮೂರನೇ ಅಲೆ ಮತ್ತು ಭವಿಷ್ಯದಲ್ಲೂ ಇತರೆ ಅಲೆಗಳು ಭಾರತವನ್ನು ಅಪ್ಪಳಿಸಬಹುದೆಂದು ತಜ್ಞರು ಮುನ್ಸೂಚನೆ ನೀಡಿದ್ದಾರೆ. ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ, ವೆಂಟಿಲೇಟರ್ ಮತ್ತು ತೀವ್ರ ನಿಗಾ ಘಟಕದ ಅಗತ್ಯತೆ, ಹಾಗು  ಸಾವಿಗೀಡಾಗುವ ಸಾಧ್ಯತೆ ಕೊರೋನಾಗೆ ತುತ್ತಾಗುವ ಧೂಮಪಾನಿಗಳಲ್ಲಿ ಹೆಚ್ಚು. ತಂಬಾಕು ಉತ್ಪನ್ನಗಳನ್ನು ಜಗಿಯುವುದರಿಂದ ಲಾಲಾರಸ ಹೆಚ್ಚಿ ಬಳಕೆದಾರರು ಅದನ್ನು  ಉಗುಳಿದಾಗ ರೋಗಾಣು ಮತ್ತು ವೈರಾಣುಗಳನ್ನು ಹರಡುತ್ತಾರೆ. ಸಮೀಪದಲ್ಲಿರುವ ಜನರು ಉಸಿರಾಟದ ಮೂಲಕ ಅಥವಾ ಕಲುಷಿತ  ಮೇಲ್ಮೈಯನ್ನು ಸ್ಪರ್ಶಿಸುವ ಮೂಲಕ ಸೋಂಕಿಗೆ ಒಳಗಾಗಿ ಕೋವಿಡ್-19 ಅನ್ನು ಹರಡಬಹುದು ಎಂದು ಕ್ಯಾನ್ಸರ್ ನಿಂದ ಗುಣಮುಖರಾಗಿರುವ ಆರೋಗ್ಯ ಕಾರ್ಯಕರ್ತೆ ನಳಿನಿ ಸತ್ಯನಾರಾಯಣ ಹೇಳಿದರು. 

ಲಸಿಕೆ, ಆಮ್ಲಜನಕ ಪೂರೈಕೆ, ಪರೀಕ್ಷೆ ಮತ್ತು ಇತರ ಅಗತ್ಯ ಸಾಮಗ್ರಿಗಳ ಪೂರೈಕೆ ಸೇರಿದಂತೆ ಕೋವಿಡ್-19 ಅನ್ನು ಹತ್ತಿಕ್ಕಲು ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ನಾವು  ಪ್ರಶಂಸಿಸುತ್ತೇವೆ. ಆದರೆ, ತಂಬಾಕು ಮತ್ತು ಕೋವಿಡ್-19ಕ್ಕೂ ಇರುವ ಮಾರಕ ನಂಟಿನತ್ತ ಸರ್ಕಾರದ ಗಮನ ಸೆಳೆಯಲು  ಬಯಸುತ್ತೇವೆ ಎಂದೂ ನಳಿನಿ ಹೇಳಿದರು.

ಪ್ರಸಿದ್ಧ ಕ್ಯಾನ್ಸರ್ ತಜ್ಞ ಮತ್ತು ತಂಬಾಕು ನಿಯಂತ್ರಣ ಉನ್ನತ ಮಟ್ಟದ ಸಮಿತಿ, ಕರ್ನಾಟಕ ಸರ್ಕಾರ, ಸದಸ್ಯರಾದ ಡಾ. ವಿಶಾಲ್ ರಾವ್, "ರೆಸ್ಟೋರೆಂಟ್‌, ಪಬ್‌, ಬಾರ್‌ ಮತ್ತು ವಿಮಾನ ನಿಲ್ದಾಣಗಳಲ್ಲಿ ನಿರ್ದಿಷ್ಟ ಧೂಮಪಾನ ಪ್ರದೇಶಗಳನ್ನು (ಡಿಎಸ್‌ಎ) ಸ್ಥಾಪಿಸಲು ಕೋಟ್ಪಾ ಕಾಯ್ದೆಯ ಪ್ರಸ್ತುತ ನಿಬಂಧನೆಗಳು  ಅನುವು ಮಾಡಿಕೊಡುತ್ತವೆ. ಆದರೆ, ನಿರ್ದಿಷ್ಟ ಧೂಮಪಾನ ಪ್ರದೇಶಗಳಲ್ಲಿ ಕೋವಿಡ್ ತಡೆಯಲು ಅನುಸರಿಸಬೇಕಾದ ಮುಖಗವಸು ಧರಿಸುವುದು, ದೈಹಿಕ ಅಂತರ ಕಾಯ್ದುಕೊಳ್ಳುವುದು ಮುಂತಾದ ಕ್ರಮಗಳನ್ನು ಪಾಲಿಸುವುದು ಅಸಾಧ್ಯ ಎಂಬುದನ್ನು ಗಮನಿಸಬೇಕು. ನಿರ್ದಿಷ್ಟ ಧೂಮಪಾನ ಪ್ರದೇಶಗಳಂತಹ  ಮುಚ್ಚಿದ ಕೋಣೆಗಳಲ್ಲಿ ಯಾವುದೇ ವ್ಯಕ್ತಿ ಕೆಮ್ಮಿದಾಗ ಅಥವ ಸೀನಿದಾಗ ಹೊರಬರುವ ಹನಿಗಳು ಬದುಕುಳಿಯುವುದರಿಂದ ಅವು ಕೋವಿಡ್-19ರ ಸೂಪರ್-ಸ್ಪ್ರೆಡರ್‌ಗಳಾಗಬಹುದು, ಎಂದು ಹೇಳಿದರು. 

ಹೋಟೆಲ್‌, ಬಾರ್‌, ಕ್ಲಬ್‌ ಮತ್ತು ವಿಮಾನ ನಿಲ್ದಾಣಗಳಲ್ಲಿರುವ ಎಲ್ಲ ಸಾರ್ವಜನಿಕ ಧೂಮಪಾನ ಪ್ರದೇಶಗಳನ್ನು ನಿಷೇಧಿಸುವುದು, ಹುಕ್ಕಾ ಬಾರ್‌ಗಳನ್ನು ನಿಷೇಧಿಸುವುದು, ತಂಬಾಕು ಉತ್ಪನ್ನಗಳ ಲಭ್ಯತೆಯನ್ನು ಕಡಿಮೆ ಮಾಡಲು ತಂಬಾಕು ಮಾರಾಟಕ್ಕೆ ಪರವಾನಗಿ (ಮಾರಾಟಗಾರರ ಪರವಾನಗಿ)  ಪರಿಚಯಿಸುವುದು ಮತ್ತು ಕೊರೊನ ವೈರಾಣು ಹರಡುವಿಕೆಗೆ ಕಾರಣವಾಗಿರುವ ಸಾರ್ವಜನಿಕ ಸ್ಥಳದಲ್ಲಿ ಉಗುಳುವಿಕೆಯನ್ನು ತಡೆಯಲು ಜಗಿಯುವ ತಂಬಾಕು ಉತ್ಪನ್ನಗಳನ್ನು ನಿಷೇಧ ಹೇರುವುದು ಕೋವಿಡ್-19ರ ಮೂರನೇ ಅಲೆ ಎದುರಿಸಲು ಸಜ್ಜಾಗುತ್ತಿರುವ ಸರ್ಕಾರಕ್ಕೆ ಕ್ಯಾನ್ಸರ್ ನಿಂದ ಗುಣಮುಖರಾದವರು  ಮತ್ತು ತಜ್ಞರು ಮುಂದಿಟ್ಟಿರುವ ಕೆಲವು ಪ್ರಮುಖ ಬೇಡಿಕೆಗಳಾಗಿವೆ.

“ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದನ್ನು ಕರ್ನಾಟಕದಲ್ಲಿ ಈಗಾಗಲೇ ನಿಷೇಧಿಸಲಾಗಿದೆ. ಆದರೆ ಅದನ್ನು ಉಲ್ಲಂಘಿಸುವವರಿಗೆ ದಂಡ ವಿಧಿಸುವ ಮೂಲಕ ಜಾರಿಗೊಳಿಸಬೇಕು. 

ನಿರ್ದಿಷ್ಟ ಧೂಮಪಾನ ಪ್ರದೇಶಗಳಿಂದ ಹಾನಿಯಷ್ಟೇ ಆಗಲಿದ್ದು ಯಾವುದೇ ಒಳಿತಾಗುವುದಿಲ್ಲ. ಕೋಟ್ಪಾ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಒಮ್ಮೆಲೇ ಇದನ್ನು ನಿಷೇಧಿಸಬೇಕಾಗಿದೆ," ಎಂದು ಖ್ಯಾತ ಹೃದ್ರೋಗ ತಜ್ಞೆ ಮತ್ತು ಭಾರತೀಯ  ಹೃದ್ರೋಗ ತಜ್ಞರ ಸಂಘದ ಸದಸ್ಯೆ ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿ  ಹೇಳಿದರು.

“ಇಂತಹ ಸರಳ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಕೋವಿಡ್-19 ಹರಡುವಿಕೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದಾಗಿದೆ. ರಾಜ್ಯದಲ್ಲಿದ್ದ ನಿರ್ಬಂಧಗಳನ್ನು ಹಂತ ಹಂತವಾಗಿ ಸಡಿಲಿಸುತ್ತಿರುವುದರಿಂದ, ನಿರ್ದಿಷ್ಟ ಧೂಮಪಾನ ಪ್ರದೇಶಗಳನ್ನು ನಿಷೇಧಿಸಲು ಮತ್ತು ಕೋಟ್ಪಾ ಕಾಯ್ದೆಗೆ  ತಿದ್ದುಪಡಿ ತರಲು ಇದು ಸೂಕ್ತ ಸಮಯವಾಗಿದೆ,” ಎಂದು ತಂಬಾಕು ಮುಕ್ತ ಕರ್ನಾಟಕ ಒಕ್ಕೂಟದ ಗೌರವ ಸಲಹೆಗಾರರೂ ಆಗಿರುವ ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿ ಅವರು ತಿಳಿಸಿದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com